ಶುರುವಾಗಿದೆ ಏರ್​ ಇಂಡಿಯಾದಿಂದ ಟಿಕೆಟ್​ ಬುಕಿಂಗ್​, ಮೇ 4ಕ್ಕೆ ದೇಶೀಯ ವಿಮಾನ ಯಾನ ಆರಂಭ

Air India
Published on

ನವದೆಹಲಿ: ವಿಮಾನ ಸಂಚಾರ ಯಾವಾಗ ಆರಂಭವಾಗುತ್ತೆ ಎಂದು ಕಾಯುತ್ತಿದ್ದವರಿಗೆ ಏರ್​ ಇಂಡಿಯಾ ಸಿಹಿ ಸುದ್ದಿ ನೀಡಿದೆ. ದೇಶಿಯ ವಿಮಾನಗಳ ಸಂಚಾರವನ್ನು ಮೇ 4ರಂದು ಶುರು ಮಾಡುವುದಾಗಿ ಘೋಷಿಸಿದೆ.

ಶನಿವಾರದಿಂದಲೇ ಟಿಕೆಟ್​ ಬುಕಿಂಗ್​ಗೆ ಚಾಲನೆ ನೀಡಿದೆ. ಕರೊನಾ ಸೋಂಕು ವ್ಯಾಪಿಸುವುದನ್ನು ತಡೆಗಟ್ಟಲು ವಿಮಾನ ಸಂಚಾರದ ಮೇಲೆ ನಿರ್ಬಂಧ ವಿಧಿಸಲಾಗಿತ್ತು. ಜತೆಗೆ, ಮೇ 3ರವರೆಗೆ ಲಾಕ್​ಡೌನ್​ ವಿಸ್ತರಿಸಿರುವುದರಿಂದ ಏರ್​ ಇಂಡಿಯಾ ಅಲ್ಲಿಯವರೆಗೆ ಟಿಕೆಟ್​ ಬುಕಿಂಗ್​ಅನ್ನು ಸ್ಥಗಿತಗೊಳಿಸಿತ್ತು. ಇದೀಗ ಮೇ 4ರಿಂದ ದೇಶೀಯ ಪ್ರಯಾಣಕ್ಕೆ ಟಿಕೆಟ್​ ಬುಕ್​ ಮಾಡಬಹುದು ಎಂದು ಸಂಸ್ಥೆಯ ವೆಬ್​ಸೈಟ್​ನಲ್ಲಿ ಪ್ರಕಟಿಸಲಾಗಿದೆ.

ಜೂ.1ರಿಂದ ಅಂತಾರಾಷ್ಟ್ರೀಯ ಪ್ರಯಾಣ: ಜೂನ್​ 1ರಿಂದ ವಿದೇಶಗಳಿಗೆ ವಿಮಾನ ಸಂಚಾರ ಆರಂಭಿಸುವುದಾಗಿ ಏರ್​ ಇಂಡಿಯಾ ತಿಳಿಸಿದೆ. ಇದೀಗ ಇತರ ಖಾಸಗಿ ವಿಮಾನ ಸಂಸ್ಥೆಗಳು ಕೂಡ ಇದೇ ಅವಧಿಯಲ್ಲಿ ವಿಮಾನ ಯಾನ ಆರಂಭಿಸಲಿದ್ದು, ಟಿಕೆಟ್​ ಬುಕಿಂಗ್​ ಆರಂಭಿಸಿವೆ.

ಕೆಲ ಸಂಸ್ಥೆಗಳು ಏಪ್ರಿಲ್​ 14ರ ನಂತರದ ಪ್ರಯಾಣಕ್ಕಾಗಿ ಈಗಾಗಲೇ ಮುಂಗಡ ಟಿಕೆಟ್​ ಬುಕಿಂಗ್​ ಮಾಡಿಸಿಕೊಂಡಿದ್ದವು. ಆದರೆ, ಲಾಕ್​ಡೌನ್​ ವಿಸ್ತರಣೆಯಾಗಿದ್ದರಿಂದ ಪ್ರಯಾಣಿಕರಿಗೆ ಟಿಕೆಟ್​ ಹಣ ಮರಳಿಸುವ ಪ್ರಕ್ರಿಯೆ ಆರಂಭಿಸಿವೆ.

ನಾಗರಿಕ ವಿಮಾನ ಸಂಚಾರ ಸ್ಥಗಿತಗೊಂಡಿದ್ದರೂ ದೇಶದ ವಿವಿಧ ಭಾಗಗಳಿಗೆ ವೈದ್ಯಕೀಯ ಹಾಗೂ ಅಗತ್ಯ ವಸ್ತುಗಳ ಸಾಗಣೆ ಕಾರ್ಯದಲ್ಲಿ ಏರ್​ ಇಂಡಿಯಾ ಸೇರಿ ಹಲವು ಸಂಸ್ಥೆಗಳು ಭಾಗಿಯಾಗಿದ್ದವು. ವಿದೇಶಗಳಿಂದಲೂ ಅಗತ್ಯ ಸಾಮಗ್ರಿಗಳನ್ನು ಭಾರತಕ್ಕೆ ತರುವಲ್ಲಿಯೂ ಏರ್​ ಇಂಡಿಯಾ ನಿರತವಾಗಿತ್ತು.

d

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net