ಏರ್​ಫೋರ್ಸ್ ಒನ್ ಮಾದರಿಯಲ್ಲೇ ಏರ್ ಇಂಡಿಯಾ ಒನ್

Nation
Published on

ನವದೆಹಲಿ: ಅಮೆರಿಕ ಅಧ್ಯಕ್ಷರು ಬಳಸುವ ‘ಏರ್​ಫೋರ್ಸ್ ಒನ್’ ವಿಮಾನ ಮಾದರಿಯಲ್ಲೇ ಭಾರತದಲ್ಲಿ ರಾಷ್ಟ್ರಪತಿ, ಉಪ ರಾಷ್ಟ್ರಪತಿ ಮತ್ತು ಪ್ರಧಾನಿ ಪ್ರಯಾಣಕ್ಕೆ ಖರೀದಿಸಲಾಗಿರುವ ವಿಶೇಷವಾದ ‘ಏರ್ ಇಂಡಿಯಾ ಒನ್’ ವಿಮಾನ ಗುರುವಾರ ಮಧ್ಯಾಹ್ನ ಅಮೆರಿಕದಿಂದ ನವದೆಹಲಿಗೆ ಆಗಮಿಸಿದೆ. ಅಮೆರಿಕದ ಟೆಕ್ಸಾಸ್ ವಿಮಾನ ನಿಲ್ದಾಣದಿಂದ ಹೊರಟ ವಿಮಾನ, ದೆಹಲಿ ನಿಲ್ದಾಣಕ್ಕೆ ಮಧ್ಯಾಹ್ನ 3.10ಕ್ಕೆ ಬಂದಿಳಿಯಿತು.

ಪ್ರಖ್ಯಾತ ವಿಮಾನ ನಿರ್ಮಾಣ ಸಂಸ್ಥೆ ಬೋಯಿಂಗ್​ನ ಬಿ777 ವಿಮಾನ ಆಗಸ್ಟ್​ನಲ್ಲೇ ಭಾರತಕ್ಕೆ ಹಸ್ತಾಂತರವಾಗಬೇಕಿತ್ತು. ಆದರೆ ಕೋವಿಡ್-19 ಹಾವಳಿಯಿಂದಾಗಿ ವಿಳಂಬವಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ವಿಮಾನವನ್ನು ಪಡೆಯಲು ಏರ್ ಇಂಡಿಯಾದ ಹಿರಿಯ ಅಧಿಕಾರಿಗಳು ಅಮೆರಿಕಕ್ಕೆ ತೆರಳಿದ್ದರು. ಅತಿ ಗಣ್ಯರ (ವಿವಿಐಪಿ) ಯಾನಕ್ಕಾಗಿ ಇನ್ನೊಂದು ವಿಶೇಷ ವಿಮಾನ ಮುಂದಿನ ದಿನಗಳಲ್ಲಿ ಭಾರತಕ್ಕೆ ಆಗಮಿಸಲಿದೆ. ಇದನ್ನೂ ಓದಿ: VIDEO | ಬೌಂಡರಿ ಲೈನ್ ಬಳಿ ಅದ್ಭುತ ಕ್ಯಾಚ್ ಹಿಡಿದ ಮ್ಯಾಕ್ಸ್‌ವೆಲ್-ನೀಶಾಮ್

ವಿಶೇಷಗಳು...
  • ಬಿ777 ವಿಮಾನಗಳಲ್ಲಿ ಅತ್ಯಾಧುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಗಳಿರುತ್ತವೆ. ಲಾರ್ಜ್ ಏರ್​ಕ್ರಾಫ್ಟ್ ಇನ್​ಫ್ರಾರೆಡ್ ಕೌಂಟರ್​ವೆುಜರ್ಸ್ ಮತ್ತು ಸೆಲ್ಪ್ ಪ್ರೊಟೆಕ್ಷನ್ ಸೂಟ್ ಎಂದು ಇವುಗಳನ್ನು ಕರೆಯಲಾಗುತ್ತದೆ.
  • ಈ ಎರಡೂ ರಕ್ಷಣಾ ವ್ಯವಸ್ಥೆಗಳನ್ನು 1,389 ಕೋಟಿ ರೂಪಾಯಿಗೆ (190 ಮಿಲಿಯನ್ ಡಾಲರ್) ಮಾರಾಟ ಮಾಡಲು ಅಮೆರಿಕ ಫೆಬ್ರವರಿಯಲ್ಲಿ ಒಪ್ಪಿಕೊಂಡಿತ್ತು. 
ವಾಯುಪಡೆ ಪೈಲಟ್​ಗಳು

ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಿ ಹಾಗೂ ವಿವಿಐಪಿಗಳು ಪ್ರಯಾಣಿಸುವ ಸಂದರ್ಭದಲ್ಲಿ ಈ ವಿಮಾನಗಳನ್ನು ಭಾರತೀಯ ವಾಯುಪಡೆಯ (ಐಎಎಫ್) ಪೈಲಟ್​ಗಳು ಚಲಾಯಿಸಲಿದ್ದಾರೆ. ಏರ್ ಇಂಡಿಯಾ ಪೈಲಟ್​ಗಳು ಚಲಾಯಿಸುವಂತಿಲ್ಲ. ಪ್ರಸ್ತುತ ದೇಶದ ಮೂವರೂ ಮುಖ್ಯಸ್ಥರು ಏರ್ ಇಂಡಿಯಾ ಒನ್ ಎಂಬ ಹೆಸರಿನ ಬಿ747 ವಿಮಾನಗಳಲ್ಲಿ ಪ್ರಯಾಣಿಸು ತ್ತಿದ್ದಾರೆ. ಸಂಸ್ಥೆಯ ಪೈಲಟ್​ಗಳೇ ಅದರ ಚಾಲಕರು. ಏರ್ ಇಂಡಿಯಾ ಇಂಜಿನಿಯರಿಂಗ್ ಸರ್ವಿಸಸ್ ಲಿಮಿಟೆಡ್ (ಎಐಇಎಸ್​ಎಲ್) ಇದನ್ನು ನಿರ್ವಹಿಸುತ್ತಿದೆ. ಬಿ747 ವಿಮಾನ ಪ್ರಮುಖರನ್ನು ಕರೆದೊಯ್ಯದ ಸಂದರ್ಭದಲ್ಲಿ ಅದನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗುತ್ತದೆ. ಆದರೆ ಈಗ ಬಂದಿರುವ ಹೊಸ ವಿಮಾನ ಗಣ್ಯರ ಪ್ರಯಾಣಕ್ಕೆ ಮಾತ್ರ ಸೀಮಿತವಾಗಿದೆ. ಎರಡೂ ಹೊಸ ವಿಮಾನಗಳು 2018ರಲ್ಲೇ ಕೆಲ ತಿಂಗಳ ಕಾಲ ಏರ್ ಇಂಡಿಯಾದ ಭಾಗವಾಗಿತ್ತು. ಆದರೆ, ಗಣ್ಯರ ಪ್ರಯಾಣಕ್ಕೆಂದೇ ವಿಶೇಷವಾಗಿ ಸಜ್ಜುಗೊಳಿಸಲು ರೆಟ್ರೋಫಿಟ್ಟಿಂಗಾಗಿ ಅವನ್ನು ಅಮೆರಿಕಕ್ಕೆ ವಾಪಸ್ ಕಳಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net