ಭದ್ರತಾ ಕಳವಳ: ಇಂದು ಹಲವು ನಗರಗಳಿಗೆ ಏರ್ ಇಂಡಿಯಾ, ಇಂಡಿಗೋದಿಂದ ವಿಮಾನ ಹಾರಾಟ ರದ್ದು! Air India

Air India
Published on

Air India : ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆ ಹೆಚ್ಚುತ್ತಿರುವ ನಡುವೆ ಮುನ್ನೆಚ್ಚರಿಕೆ ಕ್ರಮವಾಗಿ ವಾಯುಪ್ರದೇಶ ನಿರ್ಬಂಧಗಳು ಮತ್ತು ಹೆಚ್ಚಿದ ಭದ್ರತಾ ಕ್ರಮಗಳನ್ನು ಉಲ್ಲೇಖಿಸಿ ಇಂಡಿಗೋ ಮತ್ತು ಏರ್ ಇಂಡಿಯಾ ಮೇ 13 ರಂದು ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ನಗರಗಳಿಗೆ ವಿಮಾನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿವೆ.

ಇಂಡಿಗೋ ವಿಮಾನ ಸಂಸ್ಥೆಯು ಶ್ರೀನಗರ, ಜಮ್ಮು, ಅಮೃತಸರ, ಲೇಹ್, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಹೊರಡುವ ಎಲ್ಲಾ ವಿಮಾನಗಳನ್ನು ಮಂಗಳವಾರ ರಾತ್ರಿ 11.59 ರವರೆಗೆ ರದ್ದುಗೊಳಿಸಿದೆ.

ನಮ್ಮ ಈ ನಿರ್ಧಾರ ನಿಮ್ಮ ಪ್ರಯಾಣ ಯೋಜನೆಗಳಿಗೆ ಹೇಗೆ ಅಡ್ಡಿಯಾಗಬಹುದು ಎಂಬುದನ್ನು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ಉಂಟಾದ ಅನಾನುಕೂಲತೆಗೆ ವಿಷಾದಿಸುತ್ತೇವೆ. ನಮ್ಮ ತಂಡಗಳು ಪರಿಸ್ಥಿತಿಯನ್ನು ಸಕ್ರಿಯವಾಗಿ ಮೇಲ್ವಿಚಾರಣೆ ಮಾಡುತ್ತಿದ್ದು, ಹೆಚ್ಚಿನ ಅಪ್​ಡೇಟ್​ ಕುರಿತು ನಿಮಗೆ ತಕ್ಷಣ ತಿಳಿಸುತ್ತವೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ತಿಳಿಸಿದೆ.

ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ಹೋಗುವ ಮತ್ತು ಅಲ್ಲಿಂದ ಆಗಮಿಸುವ ದ್ವಿಮುಖ ವಿಮಾನಗಳನ್ನು ರದ್ದುಗೊಳಿಸಿರುವುದಾಗಿ ಏರ್ ಇಂಡಿಯಾ ಸಂಸ್ಥೆಯು ಕೂಡ ಘೋಷಿಸಿದೆ.

ಇತ್ತೀಚಿನ ಬೆಳವಣಿಗೆಗಳನ್ನು ಮತ್ತು ನಿಮ್ಮ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು, ಮೇ 13ರ ಮಂಗಳವಾರ ಜಮ್ಮು, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನಾವು ಪರಿಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದ್ದೇವೆ ಮತ್ತು ನಿಮಗೆ ಅಪ್​ಡೇಟ್​ಗಳನ್ನು ನೀಡುತ್ತೇವೆ ಎಂದು ಏರ್​ ಇಂಡಿಯಾ ವಿಮಾನಯಾನ ಸಂಸ್ಥೆ ಎಕ್ಸ್​ ಖಾತೆಯಲ್ಲಿ ತಿಳಿಸಿದೆ.

ಅಂದಹಾಗೆ, ಸೋಮವಾರ ಸಂಜೆ, ಅಮೃತಸರದಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕೇಂದ್ರ ಸರ್ಕಾರ ಸಂಚಾರ ನಿರ್ಬಂಧ ಹೇರಿದ ನಂತರ, ಅಮೃತಸರಕ್ಕೆ ತೆರಳುತ್ತಿದ್ದ ಇಂಡಿಗೋ ವಿಮಾನವು ದೆಹಲಿಗೆ ಮರಳಿತು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಸಾಂಬಾ, ಅಖ್ನೂರ್, ಜೈಸಲ್ಮೇರ್ ಮತ್ತು ಕಥುವಾಗಳಲ್ಲಿ ಡ್ರೋನ್‌ಗಳು ಕಂಡುಬಂದ ವರದಿಗಳ ಬಳಿಕ ವಿಮಾನಯಾನ ಸಂಸ್ಥೆಗಳು ಮುನ್ನೆಚ್ಚರಿಕೆಯಾಗಿ ಈ ಕ್ರಮಗಳನ್ನು ಕೈಗೊಂಡಿವೆ. ಆದರೆ, ಇತ್ತೀಚಿಗೆ ಯಾವುದೇ ಡ್ರೋನ್ ಚಟುವಟಿಕೆ ಪತ್ತೆಯಾಗಿಲ್ಲ ಮತ್ತು ಕದನ ವಿರಾಮ ಹಾಗೆಯೇ ಉಳಿದಿದೆ ಎಂದು ಭಾರತೀಯ ಸೇನೆ ಮಂಗಳವಾರ ಸ್ಪಷ್ಟಪಡಿಸಿದೆ ಎಂದು ಸುದ್ದಿ ಸಂಸ್ಥೆ ಎಎನ್‌ಐ ವರದಿ ಮಾಡಿದೆ.

ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಸೋಮವಾರ ವಿಮಾನ ನಿಲ್ದಾಣಗಳನ್ನು ಮತ್ತೆ ತೆರೆದರೂ, ವಿಮಾನಯಾನ ಸಂಸ್ಥೆಗಳು ಮಾತ್ರ ಪ್ರಸ್ತುತ ಉದ್ವಿಗ್ನತೆಯ ನಡುವೆ ಎಚ್ಚರಿಕೆಯಿಂದ ಮುಂದುವರಿಯಲು ಆಯ್ಕೆ ಮಾಡಿಕೊಂಡಿವೆ.

ಇದೇ ಸಂದರ್ಭದಲ್ಲಿ, ಭಾರತೀಯ ವಾಯು ರಕ್ಷಣಾ ವ್ಯವಸ್ಥೆಗಳು ಸಾಂಬಾ ವಲಯದಲ್ಲಿ ಪಾಕಿಸ್ತಾನಿ ಡ್ರೋನ್‌ಗಳನ್ನು ತಡೆದಿವೆ. ರಾತ್ರಿ ಆಕಾಶದಲ್ಲಿ ಕೆಂಪು ಗೆರೆಗಳು ಮತ್ತು ಸ್ಫೋಟಗಳು ಗೋಚರಿಸುತ್ತಿದ್ದವು. ಕಡಿಮೆ ಸಂಖ್ಯೆಯ ಡ್ರೋನ್‌ಗಳು ಈ ವಲಯಕ್ಕೆ ಪ್ರವೇಶಿಸಿವೆ ಎಂದು ಸೇನಾ ಮೂಲಗಳು ದೃಢಪಡಿಸಿವೆ. ಆದಾಗ್ಯೂ, ಗಾಬರಿಪಡುವಂಥದ್ದು ಏನೂ ಇಲ್ಲ ಎಂದು ಸೇನೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net