

ಕೋಯಿಕ್ಕೋಡ್: ಕರಿಪ್ಪೂರ್ನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪತನವಾದ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಬ್ಲಾ್ಯಕ್ಬಾಕ್ಸ್ ಪತ್ತೆಯಾಗಿದೆ. ದುರಂತದಲ್ಲಿ ಮೃತರಾದವರ ಸಂಖ್ಯೆ 18ಕ್ಕೆ ಏರಿದ್ದು, ಮೃತರ ಕುಟುಂಬದವರಿಗೆ ಕೇಂದ್ರ ಸರ್ಕಾರ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ನಾಗರಿಕ ವಿಮಾನಯಾನ ಸಚಿವ ಹರದೀಪ್ಸಿಂಗ್ ಪುರಿ ಕೋಯಿಕ್ಕೋಡ್ಗೆ ಭೇಟಿ ನೀಡಿ ಪರಿಹಾರವನ್ನು ಪ್ರಕಟಿಸಿದರು. ಗಾಯಗೊಂಡಿರುವ 127 ಪ್ರಯಾಣಿಕರಿಗೆ ಕೋಯಿಕ್ಕೋಡ್, ಮಲ್ಲಪು್ಪರಂನ 13 ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು ತಿಳಿದರು.
ಬ್ಲಾ್ಯಕ್ಬಾಕ್ಸ್ನಲ್ಲಿ ವಿಮಾನ ಪೈಲಟ್ ಮತ್ತು ವಿಮಾನ ನಿಲ್ದಾಣದ ವಾಯು ಸಂಚಾರ ನಿಯಂತ್ರಣ ಕೇಂದ್ರ (ಎಟಿಸಿ) ಮಧ್ಯೆ ಕಡೆಯ ಬಾರಿ ನಡೆದ ಸಂಭಾಷಣೆ ಮತ್ತು ಕಾಕ್ಪಿಟ್ (ಪೈಲಟ್ಗಳ ಕ್ಯಾಬಿನ್) ನಲ್ಲಿ ವಿಮಾನ ಪತನಕ್ಕೂ ಮುಂಚೆ ನಡೆದ ಮಾತುಕತೆಯ ವಿವರ ಇರುತ್ತದೆ. ಈ ಕುರಿತು ಪರಿಶೀಲಿಸಿ ತನಿಖೆ ನಡೆಸಲಾಗುವುದು ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ತಿಳಿಸಿದೆ.
ದುಬೈನಿಂದ ಆಗಮಿಸಿದ ಒಂದೇ ಭಾರತ್ ವಿಶೇಷ ವಿಮಾನ ಟೇಬಲ್ ಟಾಪ್ ರನ್ ವೇಯಲ್ಲಿ ಇಳಿದಾಗ ಜಾರಿ 1 ಕಿ.ಮೀ. ಮುಂದಕ್ಕೆ ಹೋಗಿ ನಂತರ ಕಣಿವೆಗೆ ಬಿದ್ದು, ಎರಡು ಹೋಳಾಗಿತ್ತು. ಐಎಕ್ಸ್-1344 ವಿಮಾನದಲ್ಲಿ 10 ಮಕ್ಕಳು, ವಿಮಾನದ ಸಿಬ್ಬಂದಿ ಸಹಿತ 191 ಪ್ರಯಾಣಿಕರಿದ್ದರು.
2 ಸಾರಿ ವಿಮಾನ ನಿಲ್ದಾಣ ಪ್ರದಕ್ಷಿಣೆ
ದುಬೈನಿಂದ ಬಂದ ಐಎಕ್ಸ್ ವಿಮಾನ ಮೊದಲು ರನ್ ವೇ 28ರಲ್ಲಿ ಇಳಿಸಲು ಎಟಿಸಿಯನ್ನು ಕೋರಿದ್ದರು. ಆದರೆ, ವಿಪರೀತ ಮಳೆಯ ಕಾರಣ ಗೋಚರತೆ ಕ್ಷೀಣಿಸಿತ್ತು. ಹೀಗಾಗಿ ಪೈಲಟ್ಗಳು ಎರಡು ಬಾರಿ ವಿಮಾನ ನಿಲ್ದಾಣವನ್ನು ಸುತ್ತುಹಾಕಿದ್ದರು. ನಂತರ ರನ್ ವೇ 10ರ ಇನ್ನೊಂದು ಬದಿಯಿಂದ ಇಳಿಸಿದ್ದರು ಎಂದು ಡಿಜಿಸಿಎ ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಉದ್ಯೋಗ ಕಳೆದುಕೊಂಡವರೇ ಹೆಚ್ಚಿದ್ದರು
ಕರೊನಾ ಸೋಂಕಿನ ಸಂದರ್ಭದಲ್ಲಿ ವಿದೇಶದಲ್ಲಿ ಸಿಲುಕಿಕೊಂಡಿರುವ ಭಾರತೀಯರನ್ನು ಕರೆತರಲು ವಂದೇ ಭಾರತ್ ವಿಶೇಷ ವಿಮಾನ ಸೇವೆಯನ್ನು ಭಾರತ ಆರಂಭಿಸಿದೆ. ಐಎಕ್ಸ್-1344 ವಿಮಾನದಲ್ಲಿ ಯುಎಇ ಮತ್ತು ಇನ್ನಿತರ ಕೊಲ್ಲಿ ರಾಷ್ಟ್ರಗಳಲ್ಲಿ ಕೋವಿಡ್-19 ಸಂದರ್ಭದಲ್ಲಿ ಉದ್ಯೋಗ ಕಳೆದುಕೊಂಡವರು ಮತ್ತು ಅವರ ಕುಟುಂಬದವರು ಹೆಚ್ಚಿನ ಸಂಖ್ಯೆಯಲ್ಲಿ ಇದ್ದರು.
ಏನಿದು ಬ್ಲಾ್ಯಕ್ಬಾಕ್ಸ್?
ಬ್ಲಾ್ಯಕ್ಬಾಕ್ಸ್ ಎಂಬುದು ವಿಮಾನದ ಸಂವಹನ ಮತ್ತು ಕಾಕ್ಪಿಟ್ನಲ್ಲಿ ನಡೆಯುವ ಸಂಭಾಷಣೆಯನ್ನು ದಾಖಲಿಸುವ ಡಿಜಿಟಲ್ ಫ್ಲೈಟ್ ಡೇಟಾ ರೆಕಾರ್ಡರ್ (ಡಿಎಫ್ಡಿಆರ್) ಮತ್ತು ಕಾಕ್ಪಿಟ್ ವಾಯ್್ಸ ರೆಕಾರ್ಡರ್ (ಸಿವಿಆರ್) ಸಾಧನ. ಬ್ಲಾ್ಯಕ್ಬಾಕ್ಸ್ ನಲ್ಲಿ ವಿಮಾನದ ಕಾರ್ಯ ನಿರ್ವಹಣೆ, ವೇಗ, ಬ್ರೇಕಿಂಗ್ ವ್ಯವಸ್ಥೆ, ತಾಂತ್ರಿಕ ವಿವರಗಳು ಇರುತ್ತವೆ. ವಿಮಾನ ಪತನಗೊಂಡರೂ ಇದಕ್ಕೆ ಏನೂ ಆಗುವುದಿಲ್ಲ. ವಿಮಾನ ಪತನಕ್ಕೆ ನಿಖರ ಕಾರಣ ಏನು ಎಂಬುದು ಈ ಬ್ಲಾ್ಯಕ್ಬಾಕ್ಸ್ ನಿಂದ ತಿಳಿಯುತ್ತದೆ. ಹೀಗಾಗಿ ವಿಮಾನ ದುರ್ಘಟನೆ ಪ್ರಕರಣದಲ್ಲಿ ತನಿಖೆಗೆ ಬ್ಲಾ್ಯಕ್ಬಾಕ್ಸ್ ಅತ್ಯಂತ ಮಹತ್ವದ್ದಾಗಿದೆ.
ನೋಟಿಸ್ ನೀಡಿದ್ದ ಡಿಜಿಸಿಎ
ಕೋಯಿಕ್ಕೋಡ್ನ ವಿಮಾನ ಸುರಕ್ಷತೆ ಬಗ್ಗೆ ಆತಂಕ ಇದ್ದ ಕಾರಣ ಡಿಜಿಸಿಎ ಕಳೆದ ಜುಲೈ 11ರಂದು ವಿಮಾನ ನಿಲ್ದಾಣದ ನಿರ್ದೇಶಕರಿಗೆ ಷೋಕಾಸ್ ನೋಟಿಸ್ ನೀಡಿತ್ತು. ಇದರಲ್ಲಿ ರನ್ ವೇಗಳಲ್ಲಿರುವ ಬಿರುಕು, ನೀರು ನಿಲ್ಲುವಿಕೆ, ರಸ್ತೆಯಲ್ಲಿ ರಬ್ಬರ್ ಶೇಖರಣೆ ಆಗುತ್ತಿರುವ ಕುರಿತು ಕಳವಳ ವ್ಯಕ್ತಪಡಿಸಿತ್ತು. ಐಎಕ್ಸ್ 1,334 ವಿಮಾನವು ಇಳಿಯುವಾಗ ಜಾರಿದ ಕಾರಣ ರನ್ ವೇಗೆ ತೀವ್ರವಾದ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ.
ಟೇಬಲ್ ಟಾಪ್ ರನ್ವೇ ಅಸುರಕ್ಷಿತ
ಕರಿಪ್ಪೂರ್ ವಿಮಾನ ನಿಲ್ದಾಣದ ಟೇಬಲ್ ಟಾಪ್ ರನ್ ವೇ ಅಸುರಕ್ಷಿತವೆಂದು 9 ವರ್ಷದ ಹಿಂದೆಯೇ ತಜ್ಞರು ಎಚ್ಚರಿಕೆ ನೀಡಿದ್ದರು. ಇಲ್ಲಿನ ರನ್ ವೇಗಳು ತೀವ್ರ ಇಳಿಜಾರಿನಿಂದ ಕೂಡಿದ್ದು, ಸುರಕ್ಷಿತವಾಗಿಲ್ಲ ಎಂದು ವರದಿ ಕೊಟ್ಟಿದ್ದರು. ಇದಕ್ಕೆ ಪೂರಕವಾಗಿ ಕೆಲವು ಪುರಾವೆಯನ್ನೂ ನೀಡಿದ್ದರು. ಆದರೂ ಇಲ್ಲಿ ವಿಮಾನಗಳ ಕಾರ್ಯಾಚರಣೆಯನ್ನು ಮುಂದುವರಿಸಲಾಗಿತ್ತು ಎಂದು ಕ್ಯಾಪ್ಟನ್ ಮೋಹನ್ ರಂಗನಾಥನ್ ಹೇಳಿದ್ದಾರೆ. ರನ್ ವೇ ಅಸುರಕ್ಷಿತವೆಂಬ ಟೀಕೆಯನ್ನು ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರಳೀಧರನ್ ಅಲ್ಲಗಳೆದಿದ್ದಾರೆ. ಮೇ 7 ರಿಂದೀಚೆಗೆ ದೇಶದ ವಿವಿಧ ಟೇಬಲ್ ಟಾಪ್ ರನ್ ವೇಗಳಲ್ಲಿ 100ಕ್ಕೂ ಹೆಚ್ಚು ವಿಮಾನಗಳು ಇಳಿದಿವೆ ಮತ್ತು ಟೆಕ್ ಆಫ್ ಆಗಿವೆ ಎಂದಿದ್ದಾರೆ. ಪತನಗೊಂಡ ವಿಮಾನದ ಪೈಲಟ್ ಈ ಮೊದಲು ಕೋಯಿಕ್ಕೋಡ್ ನಿಲ್ದಾಣದಲ್ಲಿ 20 ಬಾರಿ ವಿಮಾನವನ್ನು ಸುರಕ್ಷಿತವಾಗಿ ಇಳಿಸಿದ್ದಾರೆ ಎಂದು ಸಚಿವ ಹರದೀಪ್ ಸಿಂಗ್ ಪುರಿ ಹೇಳಿದ್ದಾರೆ.
ನಾನು ಹಿಂದಿನ ಸೀಟಿನಲ್ಲಿ ಕುಳಿತಿದ್ದೆ. ವಿಮಾನ ರನ್ ವೇಗೆ ಇಳಿದಿತ್ತಷ್ಟೇ. ಇದ್ದಕ್ಕಿದ್ದಂತೆ ದೊಡ್ಡ ಶಬ್ದವಾಯಿತು. ಏನಾಗುತ್ತಿದೆ ಎಂಬುದು ತಿಳಿಯುವಷ್ಟರಲ್ಲಿ ವಿಮಾನ ಕೆಳಗೆ ಬಿತ್ತು. | ರಿಯಾಸ್ ಪತನಗೊಂಡ ವಿಮಾನದ ಪ್ರಯಾಣಿಕ
ಪತಿ ಸಾವಿನ ವಿಷಯ ತಿಳಿಯದ ಗರ್ಭಿಣಿ ಪತ್ನಿ
ವಿಮಾನ ದುರಂತದಲ್ಲಿ ಸಾವನ್ನಪ್ಪಿದ್ದ ಸಹಪೈಲಟ್ ಅಖಿಲೇಶ್ ಶರ್ಮಾ (32) ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದರು. ಅವರು ಮೃತಪಟ್ಟ ವಿಷಯ ಪತ್ನಿ ಮೇಘಾಗೆ (29) ತಿಳಿದಿಲ್ಲ. ಮೇಘಾಗೆ ಇನ್ನೆರಡು ವಾರದಲ್ಲಿ ಪ್ರಸವ ಆಗಲಿದ್ದು, ಈ ಆಘಾತಕಾರಿ ವಿಷಯವನ್ನು ಹೇಗೆ ತಿಳಿಸುವುದು ಎಂದು ಕುಟುಂಬದವರು ಚಿಂತಿತರಾಗಿದ್ದಾರೆ. ಆಕೆ ಸದ್ಯ ಉತ್ತರ ಪ್ರದೇಶದ ಮಥುರಾದಲ್ಲಿ ಇದ್ದಾರೆ.
ಕ್ಯಾಪ್ಟನ್ ದೀಪಕ್ ಬಚಾವ್
ಪತನಗೊಂಡ ವಿಮಾನ ಪೈಲಟ್ ಕ್ಯಾಪ್ಟನ್ ದೀಪಕ್ ವಂಸತ್ ಸಾಠೆ (58) ಭಾರತೀಯ ವಾಯುಪಡೆಯಲ್ಲಿ ವಿಂಗ್ ಕಮಾಂಡರ್ ಆಗಿದ್ದರು. ಅಂಬಾಲದ 17 ಸ್ಕಾ್ವಡ್ರನ್ನಲ್ಲಿ ಮಿಗ್-21 ಯುದ್ಧ ವಿಮಾನವನ್ನು ಚಾಲನೆ ಮಾಡಿದ್ದರು. 1990ರಲ್ಲಿ ವಿಮಾನ ಪತನವಾದಾಗ ತಲೆಗೆ ಪೆಟ್ಟು ಬಿದ್ದಿದರೂ ಪವಾಡ ಸದೃಶವಾಗಿ ಬದುಕುಳಿದಿದ್ದರು. ಆರು ತಿಂಗಳು ಚಿಕಿತ್ಸೆ ಪಡೆದ ನಂತರ ಮತ್ತೆ ಕರ್ತವ್ಯಕ್ಕೆ ಮರಳಿದ್ದರು.
ಪತನಕ್ಕೆ ಮೊದಲು ಸೆಲ್ಪಿ
ಏರ್ ಇಂಡಿಯಾ ಎಕ್ಸ್ಪ್ರೆಸ್ ಪ್ರಯಾಣಿಕ ಷರೀಫುದ್ದೀನ್ ವಿಮಾನ ಪತನವಾಗುವುದ್ದಕ್ಕೂ ಕೆಲವು ಸಮಯ ಮೊದಲು ಪತ್ನಿ ಮತ್ತು ಪುತ್ರಿಯ ಜತೆ ಸೆಲ್ಪಿ ತೆಗೆದುಕೊಂಡಿದ್ದರು. ಈ ಅಪಘಾತದಲ್ಲಿ ಷರೀಫುದ್ದೀನ್, ಅವರ ಪತ್ನಿ, ಮಗಳು ಗಾಯಗೊಂಡಿದ್ದಾರೆ. ಅವರು ಮಲ್ಲಪು್ಪರಂ ಮೂಲದವರು.
ಬೆಂಕಿ ಹೊತ್ತಿಕೊಳ್ಳಲಿಲ್ಲ
ರನ್ ವೇಯಲ್ಲಿ ಜಾರಿ 30 ಅಡಿ ಆಳದ ಕಣಿವೆಗೆ ವಿಮಾನ ಬಿದ್ದು ಎರಡು ಹೋಳಾದರೂ ಬೆಂಕಿ ಹೊತ್ತಿಕೊಳ್ಳದಿರುವುದು ಅದೃಷ್ಟವೇ ಸರಿ. ಒಂದು ವೇಳೆ ಬೆಂಕಿ ಹೊತ್ತಿಕೊಂಡಿದ್ದರೆ ದುರಂತ ಮತ್ತಷ್ಟು ಭೀಕರವಾಗಿರುತ್ತಿತ್ತು ಎಂದು ಪರಿಹಾರ ಕಾರ್ಯದ ಸಿಬ್ಬಂದಿ ತಿಳಿಸಿದ್ದಾರೆ. ವಿಮಾನದ ಪೈಲಟ್, ವಿಮಾನ ನಿಯಂತ್ರಣ ತಪು್ಪತ್ತಿರುವುದು ಅರಿವಾಗುತ್ತಿದ್ದಂತೆಯೇ ಇಂಜಿನ್ ಆಫ್ ಮಾಡಿದರು. ಇದರಿಂದ ಬೆಂಕಿ ಹೊತ್ತಿಕೊಳ್ಳುವುದು ತಪ್ಪಿತು ಎಂದು ಸಚಿವ ವಿ. ಮುರಳೀಧರನ್ ಹೇಳಿದ್ದಾರೆ.
ಗಂಡಾಂತರ ತಪ್ಪಿಸಿದ ಐದು ನಿಮಿಷ
ದುಬೈನಿಂದ ಹೊರಟ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದ ಟಿಕೆಟ್ಗೆ ಅಗತ್ಯವಾದ ಹಣವನ್ನು ಐದು ನಿಮಿಷ ತಡವಾಗಿ ಪಾವತಿಸಿದ ಕಾರಣ ಪ್ರಯಾಣ ತಪ್ಪಿಸಿಕೊಂಡು ಪೇಚಾಡುತ್ತಿದ್ದ ಪ್ರಯಾಣಿಕ ಅಫ್ಜಲ್ ಈಗ ನಿಟ್ಟುಸಿರು ಬಿಟ್ಟಿದ್ದಾರೆ. ‘ನೌಕರಿ ಇಲ್ಲದ ಕಾರಣ ವಿಮಾನದ ಟಿಕೆಟ್ಗೆ ಹಣ ಕಡಿಮೆ ಇತ್ತು. ಆದರೆ, ಪೂರ್ಣ ಹಣ ಪಾವತಿಸದೆ ಬೋರ್ಡಿಂಗ್ ಅವಕಾಶ ಇಲ್ಲವೆಂದು ಅಧಿಕಾರಿಗಳು ಹೇಳಿದರು. ಇದರಿಂದ ಹತಾಶನಾದೆ. ಭಾರತಕ್ಕೆ ಮರಳದಿದ್ದರೆ ಇಲ್ಲೇ ಇನ್ನು ಎರಡು ತಿಂಗಳು ಇರಬೇಕು. ಉದ್ಯೋಗವಿಲ್ಲ, ಕೈಯಲ್ಲಿ ದುಡ್ಡಿಲ್ಲ ಏನು ಮಾಡುವುದು ಎಂಬ ಚಿಂತೆಯಲ್ಲಿದ್ದೆ. ಆಗ ಸ್ನೇಹಿತ ಇಬ್ರಾಹಿಂನಿಂದ ಹಣ ಕೇಳಿದೆ. ಯಾರ ಬಳಿಯಲ್ಲಾದರೂ ಕಳುಹಿಸಿಕೊಡುವುದಾಗಿ ಹೇಳಿದ. ಆದರೆ, ಹಣದ ತಂದ ವ್ಯಕ್ತಿ ಐದು ನಿಮಿಷ ತಡಮಾಡಿದ. ಅಷ್ಟರಲ್ಲಿ ವಿಮಾನಕ್ಕೆ ಏರುವ ಸಮಯ ಮುಗಿದಿತ್ತು. ಬೇಸರವಾಯಿತು. ಆದರೆ, ರಾತ್ರಿ ಹೊತ್ತಿಗೆ ವಿಮಾನ ಪತನವಾಗಿರುವುದು ತಿಳಿಯಿತು’ ಎಂದು ಅಫ್ಜಲ್ ಹೇಳಿದ್ದಾರೆ.
ಏಂಜೆಲ್ಸ್ ತಂಡ ರವಾನೆ
ವಿಮಾನ ಅವಘಡದ ಸಂದರ್ಭದಲ್ಲಿ ಸಂತ್ರಸ್ತ ಕುಟುಂಬದವರ ದುಃಖ, ಆತಂಕವನ್ನು ಹೋಗಲಾಡಿಸಲು ರಚಿಸಲಾಗಿರುವ ‘ಏಂಜೆಲ್ಸ್ ಆಫ್ ಏರ್ ಇಂಡಿಯಾ’ದ ತಂಡ ಮುಂಬೈನಿಂದ ಕೋಯಿಕ್ಕೋಡ್ಗೆ ಬಂದಿದೆ. ‘ಏಂಜೆಲ್ಸ್ ಆಫ್ ಏರ್ ಇಂಡಿಯಾ’ ತಂಡದವರು ಸಂತ್ರಸ್ತ ಕುಟುಂಬದವರೊಂದಿಗೆ ಸಮಾಲೋಚನೆ (ಕೌನ್ಸಲಿಂಗ್) ಮಾಡಲಿದ್ದಾರೆ. 2010ರಲ್ಲಿ ಮಂಗಳೂರಿನಲ್ಲಿ ವಿಮಾನ ಪತನವಾದಾಗಲೂ ಈ ತಂಡದವರು ಸಂತ್ರಸ್ತ ಕುಟುಂಬದವರೊಂದಿಗೆ ಮಾತನಾಡಿ ಧೈರ್ಯ ತುಂಬಿದ್ದರು.
ಪ್ರತ್ಯಕ್ಷದರ್ಶಿಗಳು ಏನು ಹೇಳುತ್ತಾರೆ?
ವಿಮಾನ ಪತನವಾದ ಸಂದರ್ಭದಲ್ಲಿ ಮೊದಲು ಅದನ್ನು ನೋಡಿದ್ದು, ವಿಮಾನ ನಿಲ್ದಾಣದ ಭದ್ರತೆ ಕಾರ್ಯ ನಿರ್ವಹಿಸುತ್ತಿದ್ದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆಯ (ಸಿಐಎಸ್ಎಫ್) ಸಿಬ್ಬಂದಿ. ಘಟನಾ ಸ್ಥಳಕ್ಕೆ ಮೊದಲು ಹೋಗಿದ್ದು ಈ ಸಿಬ್ಬಂದಿಯೇ. ಪ್ರಯಾಣಿಕರ ಆಕ್ರಂದನ, ಮಕ್ಕಳ ಅಳು ಜೋರಾಗಿತ್ತು. ವಿಮಾನ ತುಂಡಾಗಿತ್ತು, ಬೆಸೆಯುವಿಕೆಯ ತುಣುಕುಗಳು ಇಳಿಜಾರಿನಲ್ಲಿ ಚಲ್ಲಾಪಿಲ್ಲಿಯಾಗಿ ಬಿದ್ದಿದ್ದವು ಎಂದು ಸಿಐಎಸ್ಎಫ್ ಸಿಬ್ಬಂದಿ ಹೇಳಿದ್ದಾರೆ. ಕೆಲವು ಪ್ರಯಾಣಿಕರು ಸೀಟಿನ ಸಮೇತ ಅವಶೇಷದ ಅಡಿಯಲ್ಲಿ ಬಿದ್ದಿದ್ದರು. ಸೀಟಿನ ಬೆಲ್ಟ್ಗಳು ಜಾಮ್ ಆಗಿದ್ದವು. ಅವುಗಳಿಂದ ಜನರನ್ನು ಬೇರ್ಪಡಿಸಲು ಕೆಲವು ತಾಸುಗಳು ಬೇಕಾದವು. ಅಷ್ಟುಹೊತ್ತಿಗೆ ಎನ್ಡಿಆರ್ಎಫ್ನ ತಂಡ ಸ್ಥಳಕ್ಕೆ ಬಂತು ಎಂದು ಸಿಐಎಸ್ಎಫ್ ವಿಶೇಷ ಮಹಾನಿರ್ದೇಶಕ ಎಂ.ಎ. ಗಣಪತಿ ತಿಳಿಸಿದ್ದಾರೆ.
ಇಬ್ಬರು ಪ್ರಯಾಣಿಕರಿಗೆ ಕರೊನಾ
ವಿಮಾನ ದುರಂತದಲ್ಲಿ ಸಾವಿನಪ್ಪಿದ್ದ 18 ಮಂದಿ ಪೈಕಿ ಇಬ್ಬರಿಗೆ ಕರೊನಾ ಸೋಂಕಿತ್ತು ಎಂದು ಕೇರಳದ ಉನ್ನತ ಶಿಕ್ಷಣ ಸಚಿವ ಕೆ.ಟಿ. ಜಲೀಲ್ ಹೇಳಿದ್ದಾರೆ. 18 ಶವದಿಂದ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇದರಲ್ಲಿ ಸುಧೀರ್ ವರ್ಯಾಥ್ (45) ಎಂಬುವರಲ್ಲಿ ಪಾಸಿಟಿವ್ ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ವಿಮಾನ ಪತನ ಸ್ಥಳದಲ್ಲಿ ಪರಿಹಾರ ಕಾರ್ಯನಡೆಸುತ್ತಿರುವ ಕೇಂದ್ರ ಪಡೆ ಮತ್ತು ರಾಜ್ಯದ ಪೊಲೀಸ್, ಅಗ್ನಿಶಾಮಕ ದಳದ ಸಿಬ್ಬಂದಿಗೆ ಕೋವಿಡ್-19 ಪರೀಕ್ಷೆ ನಡೆಸಲಾಗುವುದು. ಸೋಂಕಿನ ಶಂಕೆ ಇದ್ದವರನ್ನು ಕ್ವಾರಂಟೈನ್ಗೆ ಕಳುಹಿಸಲಾಗುವುದು ಎಂದು ಕೇರಳದ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ತಿಳಿಸಿದ್ದಾರೆ.
ಹಕ್ಕಿ ಬಡಿದ ಕಾರಣ ವಿಮಾನ ಸ್ಥಗಿತ
ರಾಂಚಿಯಿಂದ ಮುಂಬೈಗೆ ಹೋಗುತ್ತಿದ್ದ ಏರ್ ಏಷ್ಯಾದ (ಐ5-632) ವಿಮಾನ ರನ್ ವೇಯಲ್ಲಿ ಟೇಕ್ ಆಫ್ ಹಂತದಲ್ಲಿದ್ದಾಗ ಹಕ್ಕಿ ಬಡಿದಿದೆ. ವಿಮಾನದಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ರಾಂಚಿ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನ ಹಾರಾಟ ಸ್ಥಗಿತಗೊಳಿಸಿ, ಪ್ರಯಾಣಿಕರಿಗೆ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಗೋಚರತೆ ಇಲ್ಲದಿದ್ದರೆ ಅವಕಾಶ ಇಲ್ಲ
ಮಂಗಳೂರು: ಟೇಬಲ್ ಟಾಪ್ ರನ್ವೇ ಹೊಂದಿರುವ ಕಾರಣ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಭಾರಿ ಮಳೆ ಇರುವ ವೇಳೆ ವಿಮಾನ ಏರಿಳಿಯುವ ಚಟುವಟಿಕೆಗೆ ಅವಕಾಶ ನೀಡುತ್ತಿಲ್ಲ ಎಂದು ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ.ರಾವ್ ತಿಳಿಸಿದ್ದಾರೆ. ಶನಿವಾರ ಬೆಳಗ್ಗೆ ಬೆಂಗಳೂರಿಗೆ ಮಂಗಳೂರಿಗೆ ಬಂದಿದ್ದ ವಿಮಾನವೊಂದಕ್ಕೆ ಇಳಿಯಲು ಅನುಮತಿ ನೀಡಲಾಗಿಲ್ಲ. ಗೋಚರತೆ ಕಡಿಮೆ ಇದ್ದುದರಿಂದ ವಿಮಾನ ಬೆಂಗಳೂರಿಗೆ ಮರಳಿತ್ತು. ಮಧ್ಯಾಹ್ನ ಮತ್ತೆ ಆಗಮಿಸಿದಾಗ ಗೋಚರತೆ ಉತ್ತಮವಿದ್ದುದರಿಂದ ಅನುಮತಿ ಕೊಡಲಾಗಿದೆ. ಶನಿವಾರ ಇತರ ವಿಮಾನಗಳ ಹಾರಾಟ ಸಾಮಾನ್ಯವಾಗಿತ್ತು ಎಂದು ಮಾಹಿತಿ ನೀಡಿದ್ದಾರೆ. 2010ರ ಮೇ ತಿಂಗಳಲ್ಲಿ ಸಂಭವಿಸಿದ ಮಂಗಳೂರು ವಿಮಾನ ದುರಂತದ ವಿಚಾರಣಾ ವರದಿಯ ಬಳಿಕ ಕೆಲವೊಂದು ನಿಯಂತ್ರಣಗಳನ್ನು ಹಾಕಿಕೊಳ್ಳಲಾಗಿದೆ ಎಂದು ರಾವ್ ತಿಳಿಸಿದ್ದಾರೆ.