

Air India Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತಗಳಲ್ಲಿ ಒಂದಾದ ಅಹಮದಾಬಾದ್ ಏರ್ ಇಂಡಿಯಾ ಅಪಘಾತ ಇನ್ನೂ ದೇಶದ ಜನತೆಯಿಂದ ಮಾಸಿಲ್ಲ. ಒಟ್ಟು 270 ಜನರನ್ನು ಬಲಿಪಡೆದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ದುರಂತಕ್ಕೆ ಅಸಲಿ ಕಾರಣವೇನು? ಬ್ಲಾಕ್ ಬಾಕ್ಸ್ ಡೇಟಾದಲ್ಲಿ ಅಡಗಿದ್ದ ವಿಷಯವೇನು? ಎಂಬುದು ಕಡೆಗೂ ವಿಮಾನಯಾನ ಸಂಸ್ಥೆ ಸಲ್ಲಿಸಿರುವ ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.
ಅತ್ಯಂತ ಭೀಕರ ವಿಮಾನ ದುರಂತದ ಹಿಂದಿರುವ ಅಸಲಿ ಕಾರಣವೇನು? ಎಂಬುದನ್ನು ಕಡೆಗೂ ಪತ್ತೆಹಚ್ಚಿರುವ ಪ್ರಾಥಮಿಕ ವರದಿಯು, ವಿಮಾನ ಟೇಕ್ ಆಫ್ ಆದ ಬೆನ್ನಲ್ಲೇ ರನ್ನಲ್ಲಿದ್ದ ಎಂಜಿನ್‌ಗಳ ಇಂಧನ ಸ್ವಿಚ್‌ಗಳು ಕೆಲವೇ ಸೆಕೆಂಡ್ಗಳ ಅಂತರದಲ್ಲಿ ಕಟ್ ಆಫ್ ಆಗಿದೆ. ಸದ್ಯ ಇದೇ ಈಗ ದೊಡ್ಡ ಗೊಂದಲಕ್ಕೆ ಕಾರಣವಾಗಿದೆ. ಅಸಲಿಗೆ ಪೈಲಟ್ಗಳಿಬ್ಬರೂ ನಡೆಸಿರುವ ಕೊನೆಯ ಸಂಭಾಷಣೆ ಪ್ರಕಾರ, ಇಂಧನ ಸ್ವಿಚ್ ಕಟ್ಆಫ್ ಆಗಿರುವುದು ಇಬ್ಬರಿಗೂ ಸ್ಪಷ್ಟವಾಗಿ ತಿಳಿದಿಲ್ಲ.
ಅಪಘಾತದ ತನಿಖೆ ನಡೆಸುತ್ತಿರುವ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ಇಂದು (ಜು.12) ಮುಂಜಾನೆ 15 ಪುಟಗಳ ವರದಿಯನ್ನು ಪ್ರಕಟಿಸಿದೆ. ಕಾಕ್ಪಿಟ್ ವಾಯ್ಸ್ ರೆಕಾರ್ಡಿಂಗ್ನಲ್ಲಿ ಸಿಕ್ಕ ಡೇಟಾದಲ್ಲಿ ಓರ್ವ ಪೈಲಟ್ ಮತ್ತೊಬ್ಬರಿಗೆ, "ಏಕೆ, ಇಂಧನ ಸ್ವಿಚ್ ಕಟ್ ಆಫ್ ಮಾಡಿದ್ಯಾ?" ಎಂದು ಪ್ರಶ್ನಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಎರಡನೇ ಪೈಲಟ್, "ನಾನಿದನ್ನು ಮಾಡಿಲ್ಲ" ಎಂದಿದ್ದಾರೆ. ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ಗಳಲ್ಲಿ ಇಂಧನ ರನ್ ಸ್ವಿಚ್ ಕಟ್ ಆಫ್ ಆಗಿದ್ದು ಹೇಗೆ ಎಂಬುದು ಇಂದಿಗೂ ತೀವ್ರ ಗೊಂದಲಕ್ಕೆ ಕಾರಣವಾಗಿದೆ.
ಕಟ್ ಆಫ್ ಆಗಿರುವುದು ತಿಳಿಯುತ್ತಿದ್ದಂತೆ ಪೈಲಟ್ಗಳು ವಿಮಾನದ ಎರಡೂ ಎಂಜಿನ್‌ಗಳ ಸ್ವಿಚ್‌ಗಳನ್ನು ಕಟ್ಆಫ್ನಿಂದ ರನ್ಗೆ ಆನ್ ಮಾಡಿದ್ದಾರೆ. ಮುಂದಾಗುವ ಅನಾಹುತವನ್ನು ತಪ್ಪಿಸುವ ಪ್ರಯತ್ನದಲ್ಲಿ ಹೀಗೆ ಮಾಡಿರುವುದು ಸ್ಪಷ್ಟ ಎಂದು ಎನ್‌ಹಾನ್ಸ್‌ಡ್ ಏರ್‌ಬೋರ್ನ್ ಫ್ಲೈಟ್ ರೆಕಾರ್ಡರ್ಸ್ (EAFR) ದತ್ತಾಂಶ ತಿಳಿಸಿದೆ. 787 ಡ್ರೀಮ್‌ಲೈನರ್ ಮತ್ತು ಇತರ ವಾಣಿಜ್ಯ ವಿಮಾನಗಳು ಒಂದೇ ಇಂಜಿನ್‌ನಲ್ಲಿ ಟೇಕಾಫ್ ಅನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು ಹೊಂದಿವೆ ಎನ್ನಲಾಗಿದೆ,(ಏಜೆನ್ಸೀಸ್). ಇದನ್ನೂ ಓದಿ: ಬಾಂಗ್ಲಾ ಮಹಿಳೆಯನ್ನು ಪ್ರೀತಿಸಿ ಜೈಲು ಪಾಲಾದ ಬೀದರ್ ಮೂಲದ ವ್ಯಕ್ತಿ..ಈತ ಮಾಡಿದ ತಪ್ಪೇನು ಗೊತ್ತಾ? Lover
ಭಾರತದ ಇತಿಹಾಸದಲ್ಲೇ ಅತಿದೊಡ್ಡ ವಿಮಾನ ದುರಂತ ಗುಜರಾತ್ನ ಅಹಮದಾಬಾದ್ನಲ್ಲಿ ಸಂಭವಿಸಿದೆ. ಗುರುವಾರ (ಜೂನ್ 12) ಮಧ್ಯಾಹ್ನ ಟೇಕ್ ಆಫ್ ಆದ ಏರ್ ಇಂಡಿಯಾ ಎ1-171 ವಿಮಾನ 32 ಸೆಕೆಂಡ್ಗಳಲ್ಲಿ ಮೇಘಾನಿ ನಗರದ ವೈದ್ಯಕೀಯ ಕಾಲೇಜು ಹಾಸ್ಟೆಲ್ ಮೇಲೆ ಪತನಗೊಂಡಿತು. ವಿದೇಶಿಯರೂ ಸೇರಿ 230 ಪ್ರಯಾಣಿಕರು, 12 ಸಿಬ್ಬಂದಿ ಇದ್ದ ವಿಮಾನದಲ್ಲಿ ಓರ್ವ ಪ್ರಯಾಣಿಕ ಪವಾಡಸದೃಶ ರೀತಿಯಲ್ಲಿ ಬದುಕುಳಿದರೆ ಉಳಿದವರೆಲ್ಲ ಸಜೀವ ದಹನವಾಗಿದ್ದಾರೆ.
ವಿಮಾನ ಹಾಸ್ಟೆಲ್ ಕಟ್ಟಡದ ಮೇಲೆ ಬಿದ್ದ ಪರಿಣಾಮ ಊಟಕ್ಕೆ ಕುಳಿತಿದ್ದ 24 ವೈದ್ಯಕೀಯ ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟ ನಡೆಸುತ್ತಿರುವ ಹಲವು ಗಾಯಾಳುಗಳ ಸ್ಥಿತಿ ಗಂಭೀರವಾಗಿದೆ. ಮೇಲ್ನೋಟಕ್ಕೆ ತಾಂತ್ರಿಕ ದೋಷವೇ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದ್ದು ತನಿಖೆ ಬಳಿಕ ನಿಖರ ಕಾರಣ ಗೊತ್ತಾಗಬೇಕಿದೆ. ಈ ಹಿಂದೆ ಭಾರತದಲ್ಲಿ ಹಲವು ನಾಗರಿಕ ವಿಮಾನ ಪತನ ದುರಂತ ನಡೆದಿದ್ದವಾದರೂ ಈ ಪ್ರಮಾಣದ ಭೀಕರ ಅಪಘಾತ ಇದೇ ಮೊದಲು.