

Air India crash : ಏರ್ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಫ್ಲೀಟ್ನಲ್ಲಿ ಇಂಧನ ನಿಯಂತ್ರಣ ಸ್ವಿಚ್ಗಳ (ಎಫ್ಸಿಎಸ್) ಲಾಕಿಂಗ್ ಕಾರ್ಯವಿಧಾನದ ಮುಂಜಾಗ್ರತ ಪರಿಶೀಲನೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದೆ.
ಈ ವಾರದ ಆರಂಭದಲ್ಲಿ ವಿಮಾನಯಾನ ನಿಯಂತ್ರಕ ಡಿಜಿಸಿಎ, ಬೋಯಿಂಗ್ 787 ಮತ್ತು 737 ವಿಮಾನಗಳನ್ನು ನಿರ್ವಹಿಸುವ ಎಲ್ಲ ವಿಮಾನಯಾನ ಸಂಸ್ಥೆಗಳು ಇಂಧನ ಸ್ವಿಚ್ ಲಾಕಿಂಗ್ ವ್ಯವಸ್ಥೆಗಳನ್ನು ಪರೀಕ್ಷಿಸುವಂತೆ ನಿರ್ದೇಶನ ನೀಡಿದ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಈ ತಪಾಸಣೆ ನಡೆಸಿದೆ. ಟಾಟಾ ಒಡೆತನದ ಏರ್ ಇಂಡಿಯಾ ವಿಮಾನಯಾನ ಅಧಿಕಾರಿಗಳು ಇಂಧನ ನಿಯಂತ್ರಣ ಸ್ವಿಚ್ಗಳಲ್ಲಿ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಏರ್ ಇಂಡಿಯಾ ಅಧಿಕಾರಿಯ ಪ್ರಕಾರ, ವಿಮಾನಯಾನ ಸಂಸ್ಥೆಯ ಇಂಜಿನಿಯರಿಂಗ್ ತಂಡವು ವಾರಾಂತ್ಯದಲ್ಲಿ ತಪಾಸಣೆಗಳನ್ನು ನಡೆಸಿ, ಆಂತರಿಕ ಸಂದೇಶದ ಮೂಲಕ ಪೈಲಟ್ಗಳಿಗೆ ಫಲಿತಾಂಶವನ್ನು ತಿಳಿಸಿತು. ತಪಾಸಣೆಗಳು ಪೂರ್ಣಗೊಂಡಿವೆ ಮತ್ತು ಯಾವುದೇ ಸಮಸ್ಯೆಗಳು ಕಂಡುಬಂದಿಲ್ಲ. ಬೋಯಿಂಗ್ನ ನಿರ್ವಹಣಾ ವೇಳಾಪಟ್ಟಿಯ ಪ್ರಕಾರ ಎಲ್ಲಾ ಬೋಯಿಂಗ್ 787-8 ವಿಮಾನಗಳು ಈಗಾಗಲೇ ಥ್ರೊಟಲ್ ಕಂಟ್ರೋಲ್ ಮಾಡ್ಯೂಲ್ (TCM) ಬದಲಿಗಳಿಗೆ ಒಳಗಾಗಿವೆ, ಅದರಲ್ಲಿ ಪ್ಲೈಟ್ ಕಂಟ್ರೋನ್ ಸಿಸ್ಟಮ್ (FCS) ಒಂದು ಭಾಗವಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಕಳೆದ ಜೂನ್ 12ರಂದು ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಏರ್ ಇಂಡಿಯಾ ವಿಮಾನ ಪತನಗೊಂಡು 242 ಪ್ರಯಾಣಿಕರು ಮೃತಪಟ್ಟಿದ್ದು ಎಲ್ಲರಿಗೂ ತಿಳಿದೇ ಇದೆ. ಈ ದುರಂತಕ್ಕೆ ಕಾರಣವಾದ ಏರ್ ಇಂಡಿಯಾ ಬೋಯಿಂಗ್ 787 ಡ್ರೀಮ್ಲೈನರ್ ಅಪಘಾತದ ಬಗ್ಗೆ ಇತ್ತೀಚೆಗೆ ಪ್ರಾಥಮಿಕ ತನಿಖಾ ವರದಿ ಬಿಡುಗಡೆಯಾಗಿದೆ. ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) 15 ಪುಟಗಳ ಪ್ರಾಥಮಿಕ ತನಿಖಾ ವರದಿಯನ್ನು ಪ್ರಕಟಿಸಿದೆ. ಇದರ ಪ್ರಕಾರ ಇಂಜಿನ್ಗೆ ಇಂಧನ ಪೂರೈಸುವ ಇಂಧನ ಸ್ವಿಚ್ಗಳನ್ನು ರನ್ನಿಂದ ಕಟ್ ಆಫ್ಗೆ ಸರಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ವರದಿ ನೀಡಿದೆ.
ವರದಿಯಲ್ಲಿ ವಿಮಾನ ದುರಂತಕ್ಕೆ ಕಾರಣವಾದ ನಿರ್ಣಾಯಕ ತಾಂತ್ರಿಕ ಘಟನೆಗಳು ಮತ್ತು ಕಾಕ್ಪಿಟ್ನಲ್ಲಿ ಪೈಲಟ್ಗಳಿಬ್ಬರ ಸಂಭಾಷಣೆ ವಿನಿಮಯಗಳನ್ನು ಕಾಲಾನುಕ್ರಮದಲ್ಲಿ ವಿವರಿಸಿದೆ. ಜೂನ್ 12ರಂದು ಅಹಮದಾಬಾದ್ನಲ್ಲಿ ಪತನಗೊಂಡ ಏರ್ ಇಂಡಿಯಾ ಬೋಯಿಂಗ್ 787 ವಿಮಾನದಲ್ಲಿದ್ದ ಪೈಲಟ್ "ನೀವು ಇಂಧನವನ್ನು ಏಕೆ ಕಡಿತಗೊಳಿಸಿದ್ದೀರಿ?" ಎಂದು ಕೇಳುವುದನ್ನು ಹಾಗೂ ನಾನದನ್ನು ಮಾಡಿಲ್ಲ ಎಂದು ಎರಡನೇ ಪೈಲಟ್ ಹೇಳಿರುವುದನ್ನು ಕಾಕ್ಪಿಟ್ ವಾಯ್ಸ್ ರೆಕಾರ್ಡರ್ ಸೆರೆಹಿಡಿದಿದೆ.
ವಿಮಾನ ಟೇಕಾಫ್ ಆದ ಕೆಲವೇ ಸೆಕೆಂಡ್ಗಳಲ್ಲಿ ಇಂಧನ ರನ್ ಸ್ವಿಚ್, ಕಟ್ ಆಫ್ ಆಗಿದ್ದು ಹೇಗೆ ಎಂಬುದು ತೀವ್ರ ಗೊಂದಲಕ್ಕೆ ಕಾರಣವಾಗಿದೆ. ಇದರ ನಡುವೆ ಭಾರತದ ಪ್ರಮುಖ ವಾಯುಯಾನ ತಜ್ಞರಲ್ಲಿ ಒಬ್ಬರಾದ ಕ್ಯಾಪ್ಟನ್ ಮೋಹನ್ ರಂಗನಾಥನ್ ಅವರು ಎನ್ಡಿಟಿವಿ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಆಘಾತಕಾರಿ ಹೇಳಿಕೆಯೊಂದನ್ನು ನೀಡಿದರು. ಇಂಧನ ಸ್ವಿಚ್ ಅನ್ನು ಆಟೋಮ್ಯಾಟಿಕ್ ಆಗಿ ಆಯ್ಕೆ ಮಾಡಲು ಸಾಧ್ಯವಿಲ್ಲ ಅಥವಾ ವಿದ್ಯುತ್ ವೈಫಲ್ಯದಿಂದಾಗಿ ಆ ರೀತಿ ಆಗಲು ಸಾಧ್ಯವಿಲ್ಲ. ನಿರ್ದಿಷ್ಟ ಜಾಗದಲ್ಲೇ ಉಳಿಯುವಂತೆ ಸ್ವಿಚ್ಗಳನ್ನು ವಿನ್ಯಾಸಗೊಳಿಸಲಾಗಿದೆ. ಸ್ವಿಚ್ಗಳನ್ನು ಮೇಲಕ್ಕೆ ಅಥವಾ ಕೆಳಕ್ಕೆ ಸರಿಸಲು ಮೊದಲು ಅವುಗಳನ್ನು ಮೇಲಕ್ಕೆ ಎತ್ತಬೇಕು ಅಥವಾ ಹೊರತೆಗೆಯಬೇಕು. ಆದ್ದರಿಂದ, ಅವುಗಳನ್ನು ಅಜಾಗರೂಕತೆಯಿಂದಲೂ ಕಟ್ ಆಫ್ ಸ್ಥಾನಕ್ಕೆ ಸರಿಸುವ ಸಾಧ್ಯತೆ ಉದ್ಭವಿಸುವುದಿಲ್ಲ. ಅದನ್ನು 'ಕಟ್ ಆಫ್' ಗೆ ಸರಿಸಲು ಇದು ಖಂಡಿತವಾಗಿಯೂ ಉದ್ದೇಶಪೂರ್ವಕ ಹಸ್ತಚಾಲಿತ ಆಯ್ಕೆಯ ಪ್ರಕರಣವಾಗಿದೆ ಎಂದು ರಂಗನಾಥನ್ ಹೇಳಿದ್ದಾರೆ.
ತೀವ್ರ ವಿವಾದದ ಬೆನ್ನಲ್ಲೇ ಏರ್ ಇಂಡಿಯಾ ತನ್ನ ಬೋಯಿಂಗ್ 787 ವಿಮಾನಗಳ ಫ್ಲೀಟ್ನಲ್ಲಿ ಇಂಧನ ನಿಯಂತ್ರಣ ಸ್ವಿಚ್ಗಳ (ಎಫ್ಸಿಎಸ್) ಲಾಕಿಂಗ್ ಕಾರ್ಯವಿಧಾನದ ಮುಂಜಾಗ್ರತ ಪರಿಶೀಲನೆಗಳನ್ನು ಪೂರ್ಣಗೊಳಿಸಿದ್ದು, ಯಾವುದೇ ಸಮಸ್ಯೆಗಳಿಲ್ಲ ಎಂದು ತಿಳಿಸಿದೆ. (ಏಜೆನ್ಸೀಸ್)