ಏರ್ ಇಂಡಿಯಾ ವಿಮಾನ ದುರಂತ: ಕೇಂದ್ರಕ್ಕೆ ಪ್ರಾಥಮಿಕ ವರದಿ ಸಲ್ಲಿಕೆ, ಶೀಘ್ರವೇ ಸಾರ್ವಜನಿಕರಿಗೂ ಲಭ್ಯ | Air India Crash

ವಿಜಯವಾಣಿ (7)
Published on

Air India Crash: ಭಾರತೀಯ ವಾಯುಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎಂದು ಕರೆಯಲಾದ ಅಹಮದಾಬಾದ್ ಏರ್ ಇಂಡಿಯಾ​ ವಿಮಾನ ಅಪಘಾತದ ಪ್ರಾಥಮಿಕ ವರದಿ ಇದೀಗ ಸಿದ್ಧವಾಗಿದೆ. ವಿಮಾನ ದುರಂತದ ಪ್ರಾಥಮಿಕ ವರದಿಯನ್ನು ಸದ್ಯ ಕೇಂದ್ರಕ್ಕೆ ಹಸ್ತಾಂತರಿಸಲಾಗಿದ್ದು, ಘಟನೆಯ ವಿವರವನ್ನು ಶೀಘ್ರದಲ್ಲೇ ಸಾರ್ವಜನಿಕರಿಗೂ ತಿಳಿಸಲಾಗುವುದು.

241 ಪ್ರಯಾಣಿಕರು ದುರ್ಮರಣ

ಅಹಮದಾಬಾದ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಂಡನ್‌ಗೆ ಹೊರಟಿದ್ದ AI-171 ಏರ್​ ಇಂಡಿಯಾ ವಿಮಾನವು ಭೀಕರ ಅಪಘಾತಕ್ಕೀಡಾದ ಘಟನೆ ಎಂದಿಗೂ ಮರೆಯಲಾಗದು. ಭಾರತೀಯ ವಿಮಾನಯಾನ ಇತಿಹಾಸದಲ್ಲೇ ಅತ್ಯಂತ ಘೋರ ದುರಂತ ಎನ್ನಲಾದ ಏರ್ ಇಂಡಿಯಾ ವಿಮಾನ ಅಪಘಾತ, 241 ಪ್ರಯಾಣಿಕರ ಪ್ರಾಣವನ್ನು ಕಸಿದುಕೊಳ್ಳುವುದಲ್ಲದೇ ವೈದ್ಯಕೀಯ ಕಾಲೇಜು ಕಟ್ಟಡಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಲ್ಲಿನ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳ ಉಸಿರನ್ನೂ ಕಸಿದುಕೊಂಡಿತು. ಈ ದುರಂತದಲ್ಲಿ ಒಬ್ಬ ಪ್ರಯಾಣಿಕ ಮಾತ್ರ ಪವಾಡದಂತೆ ಬದುಕುಳಿದ.

ಅಪಘಾತದ ತನಿಖೆ ನಡೆಸಿದ ವಿಮಾನ ಅಪಘಾತ ತನಿಖಾ ಬ್ಯೂರೋ (AAIB) ತನ್ನ ಪ್ರಾಥಮಿಕ ವರದಿಯನ್ನು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯ ಮತ್ತು ಸಂಬಂಧಿತ ಅಧಿಕಾರಿಗಳಿಗೆ ಸಲ್ಲಿಸಿದೆ. ತನಿಖೆಯ ಪ್ರಾಥಮಿಕ ಹಂತದಲ್ಲಿ ಇಲ್ಲಿಯವರೆಗೆ ಸಂಗ್ರಹಿಸಿದ ಮಾಹಿತಿ ಮತ್ತು ತನಿಖೆಗೆ ಸಂಬಂಧಿಸಿದ ವಿವರಗಳನ್ನು ವರದಿ ಒಳಗೊಂಡಿದೆ.

ಪ್ರಾಥಮಿಕ ವರದಿಯ ಮುಖ್ಯಾಂಶಗಳು

  • ಬ್ಲಾಕ್‌ಬಾಕ್ಸ್ ಡೇಟಾವನ್ನು ಯಶಸ್ವಿಯಾಗಿ ಡೌನ್‌ಲೋಡ್ ಮಾಡಲಾಗಿದೆ ಮತ್ತು ವಿಶ್ಲೇಷಣೆ ಪ್ರಾರಂಭವಾಗಿದೆ.
  • ಕಾಕ್‌ಪಿಟ್ ವಾಯ್ಸ್ ರೆಕಾರ್ಡರ್ ಮತ್ತು ಫ್ಲೈಟ್ ಡೇಟಾ ರೆಕಾರ್ಡರ್ ಆಧರಿಸಿ ಅಪಘಾತದ ಕಾರಣವನ್ನು ಕಂಡುಹಿಡಿಯಲು ಪ್ರಯತ್ನ.
  • ಮೇಡೇ ಕರೆಯಲ್ಲಿ ಪೈಲಟ್ "ಪವರ್ ಇಲ್ಲ, ಥ್ರಸ್ಟ್ ಇಲ್ಲ, ಕೆಳಗೆ ಹೋಗುತ್ತಿದೆ" ಎಂದು ಹೇಳುತ್ತಿರುವ ಆಡಿಯೋ ರೆಕಾರ್ಡಿಂಗ್ ಪತ್ತೆಯಾಗಿದೆ.

ಅಹಮದಾಬಾದ್ ಏರ್ ಇಂಡಿಯಾ ವಿಮಾನ ಅಪಘಾತ ಕುರಿತು ವಿಮಾನ ಅಪಘಾತ ತನಿಖಾ ಬ್ಯೂರೋ (ಎಎಐಬಿ) ಸಿದ್ಧಪಡಿಸಿದ ಪ್ರಾಥಮಿಕ ವರದಿಯನ್ನು ಜುಲೈ 8ರಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯಕ್ಕೆ ಸಲ್ಲಿಸಲಾಗಿದೆ. ಕೇಂದ್ರದ ಆದೇಶದ ಬಳಿಕ ಅದರಲ್ಲಿರುವ ಮಾಹಿತಿ ಸಾರ್ವಜನಿಕರಿಗೂ ಲಭ್ಯವಾಗಲಿದೆ ಎಂದು ವರದಿಯಾಗಿದೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net