ಗುದನಾಳದಲ್ಲಿ ಚಿನ್ನ ಬಚ್ಚಿಟ್ಟು ಸಾಗಾಟ: ಗಗನಸಖಿ ಬಂಧನ! ವಿಚಾರಣೆಯಲ್ಲಿ ಸ್ಪೋಟಕ ಮಾಹಿತಿ ಬಯಲು

Air Hostess
Published on

ಕಣ್ಣೂರು: ಗುದನಾಳದಲ್ಲಿ ಚಿನ್ನವನ್ನು ಬಚ್ಚಿಟ್ಟು ಕಳ್ಳಸಾಗಣೆ ಮಾಡಲು ಯತ್ನಿಸಿದ ಪ್ರಕರಣದಲ್ಲಿ ಏರ್ ಇಂಡಿಯಾ ಎಕ್ಸ್​ಪ್ರೆಸ್​ನ ಗಗನಸಖಿಯನ್ನು ಕೇರಳದ ಕಣ್ಣೂರಿನಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್​ಐ) ಅಧಿಕಾರಿಗಳು ಬಂಧಿಸಿದ್ದಾರೆ.

ಬಂಧಿತಳನ್ನು ಸುರಭಿ ಕತುನ್ ಎಂದು ಗುರುತಿಸಲಾಗಿದೆ. ಈಕೆ ಕೋಲ್ಕತ ಮೂಲದವಳು. ಮಸ್ಕತ್​​ನಿಂದ ಕಣ್ಣೂರಿಗೆ ಆಗಮಿಸಿದ ಏರ್ ಇಂಡಿಯಾ ಎಕ್ಸ್​ಪ್ರೆಸ್​ನಲ್ಲಿ ಸುರಭಿ ಗಗನಸಖಿಯಾಗಿದ್ದಳು. ಕಣ್ಣೂರು ವಿಮಾನ ನಿಲ್ದಾಣದಲ್ಲೇ ಆಕೆಯನ್ನು ಬಂಧಿಸಲಾಗಿದೆ. ಕಳೆದ ಮಂಗಳವಾರ ಈ ಘಟನೆ ನಡೆದಿದೆ.

ಏರ್ ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ IX 714 ದಲ್ಲಿನ ಕ್ಯಾಬಿನ್ ಸಿಬ್ಬಂದಿಯೊಬ್ಬರು ಚಿನ್ನವನ್ನು ಕದ್ದು ಸಾಗಿಸುತ್ತಿದ್ದಾರೆ ಎಂಬ ನಿಖರ ಮಾಹಿತಿ ಮೇರೆಗೆ ಡಿಆರ್​ಐ ಅಧಿಕಾರಿಗಳು ವಿಮಾನ ನಿಲ್ದಾಣಕ್ಕೆ ಆಗಮಿಸಿ, ಸಿಬ್ಬಂದಿಯನ್ನು ತಡೆದು ಪರಿಶೀಲಿಸಿದಾಗ ಗುದನಾಳದಲ್ಲಿ ಚಿನ್ನವನ್ನು ಕದ್ದು ಸಾಗಿಸುತ್ತಿದ್ದ ಸಂಗತಿ ಬಯಲಾಗಿದೆ. 26 ವರ್ಷದ ಸುರಭಿ ಬಳಿ 960 ಗ್ರಾಂ ಚಿನ್ನಾಭರಣ ಪತ್ತೆಯಾಗಿದೆ. ವಿಚಾರಣೆಯ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ನಂತರ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಡಿಆರ್‌ಐ ಮೂಲಗಳ ಪ್ರಕಾರ, ಆರೋಪಿ ಸುರಭಿ ಈ ಹಿಂದೆಯು ಚಿನ್ನ ಕಳ್ಳಸಾಗಣೆಯ ಅನೇಕ ಪ್ರಕರಣಗಳಲ್ಲಿ ಭಾಗಿಯಾಗಿರಬಹುದು ಎಂದು ಸಂಶಯ ವ್ಯಕ್ತವಾಗಿದೆ. ಹೀಗಾಗಿ ತನಿಖೆ ನಡೆಸಲು ಸೂಚಿಸಲಾಗಿದೆ. ಆಕೆಯ ಸಹಚರರನ್ನು ಗುರುತಿಸಲು ಮತ್ತು ಚಿನ್ನ ಕಳ್ಳಸಾಗಣೆ ಜಾಲವನ್ನು ಪತ್ತೆಹಚ್ಚುವ ಪ್ರಯತ್ನಗಳು ಸಹ ನಡೆಯುತ್ತಿವೆ. ಈ ವಿಷಯದ ಬಗ್ಗೆ ಸಮಗ್ರ ತನಿಖೆಯ ಭಾಗವಾಗಿ ಹೆಚ್ಚಿನ ವಿಚಾರಣೆ ನಡೆಸಲು ಅನುಕೂಲವಾಗುವಂತೆ ಕ್ಯಾಬಿನ್ ಸಿಬ್ಬಂದಿಯನ್ನು ಕಸ್ಟಡಿಗೆ ತೆಗೆದುಕೊಳ್ಳಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಡಿಆರ್​ಐ ಮುಂದಾಗಿದೆ.

ಆರೋಪಿ ಸುರಭಿ, ಕಳ್ಳಸಾಗಣೆ ಚಟುವಟಿಕೆಗಳಿಗೆ ತನ್ನನ್ನು ನೇಮಿಸಿಕೊಂಡ ಕೆಲವು ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಹಿಂದೆ ಚಿನ್ನವನ್ನು ಯಶಸ್ವಿಯಾಗಿ ಕಳ್ಳಸಾಗಣೆ ಮಾಡಿದ್ದಕ್ಕೆ ಆಕೆಗೆ ಒಳ್ಳೆಯ ಕಮಿಷನ್ ಸಹ ಸಿಕ್ಕಿದೆ ಎಂದು ಮೂಲಗಳು ತಿಳಿಸಿವೆ.

ಇನ್ನು ಹೆಚ್ಚಿನ ಕ್ಯಾಬಿನ್ ಸಿಬ್ಬಂದಿ ಕಳ್ಳಸಾಗಣೆ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದಾರೆಯೇ ಎಂದು ತಿಳಿದುಕೊಳ್ಳಲು ಡಿಆರ್‌ಐ ಪರಿಶೀಲನೆ ನಡೆಸುತ್ತಿದೆ. ಸುರಭಿಯ ಬಂಧನದ ನಂತರ, ಡಿಆರ್‌ಐ ಅಧಿಕಾರಿಗಳು ಕೇರಳ ಮೂಲದ ಚಿನ್ನ ಕಳ್ಳಸಾಗಣೆ ಜಾಲಗಳೊಂದಿಗೆ ಸಂಪರ್ಕ ಹೊಂದಿರುವ ಶಂಕೆಯ ಮೇಲೆ ಹೆಚ್ಚಿನ ಕ್ಯಾಬಿನ್ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು, ಈ ವೇಳೆ ಕಳ್ಳಸಾಗಾಣಿಕೆಯಲ್ಲಿ ಹೆಚ್ಚಿನ ಸಿಬ್ಬಂದಿ ಭಾಗಿಯಾಗಿರುವ ಬಗ್ಗೆ ವಿವರಗಳು ಲಭ್ಯವಾಗಿವೆ ಎಂದು ತಿಳಿದುಬಂದಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿಯನ್ನು ಬಂಧಿಸುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಈ ಹಿಂದೆ ಅಂದರೆ ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಕೇರಳದ ಕಸ್ಟಮ್ಸ್ ಪ್ರಿವೆಂಟಿವ್ ಕಮಿಷನರೇಟ್, ಕೊಚ್ಚಿ ವಿಮಾನ ನಿಲ್ದಾಣದಲ್ಲಿ 1.45 ಕೆಜಿ ಚಿನ್ನವನ್ನು ಕಳ್ಳಸಾಗಣೆ ಮಾಡಿದ್ದಕ್ಕಾಗಿ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನ ಕ್ಯಾಬಿನ್ ಸಿಬ್ಬಂದಿಯನ್ನು ಬಂಧಿಸಿತ್ತು. ಬಹ್ರೇನ್-ಕೋಯಿಕೋಡ್-ಕೊಚ್ಚಿ ಮಾರ್ಗದಲ್ಲಿ ಕಾರ್ಯನಿರ್ವಹಿಸುತ್ತಿದ್ದ ವಿಮಾನದಲ್ಲಿ ಕೆಲಸ ಮಾಡುತ್ತಿದ್ದ ವಯನಾಡ್ ಮೂಲದ ಶಫಿ ಎಂಬಾತನ್ನು ಬಂಧನ ಮಾಡಲಾಗಿತ್ತು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net