

ನವದೆಹಲಿ: ಸ್ವದೇಶಿ ನಿರ್ವಿುತ ತೇಜಸ್ ಯುದ್ಧ ವಿಮಾನದ ಎರಡನೇ ಸ್ಕ್ವಾಡ್ರನ್ ಬುಧವಾರ ವಾಯುಪಡೆಗೆ ಅಧಿಕೃತವಾಗಿ ಸೇರ್ಪಡೆಗೊಂಡಿದೆ. ತಮಿಳುನಾಡಿನ ಕೊಯಮತ್ತೂರು ವಾಯುನೆಲೆಯಲ್ಲಿ ವಾಯುಪಡೆ ಮುಖ್ಯಸ್ಥ ಆರ್.ಕೆ. ಎಸ್ ಭದೌರಿಯಾ ತೇಜಸ್ ಯುದ್ಧ ವಿಮಾನಗಳನ್ನು ಲೋಕಾರ್ಪಣೆ ಮಾಡಿದರು. ಬೆಂಗಳೂರು ಮೂಲದ ಹಿಂದೂಸ್ಥಾನ್ ಏರೋನಾಟಿಕ್ಸ್ ಲಿಮಿಟೆಡ್ (ಎಚ್ಎಎಲ್)ನಲ್ಲಿ ತಯಾರಾಗಿರುವ ತೇಜಸ್ ಯುದ್ಧ ವಿಮಾನ ಉನ್ನತ ಕಾರ್ಯವೈಖರಿ ಹೊಂದಿದೆ. ಮಿಗ್ 21 ಯುದ್ಧ ವಿಮಾನದ ಮುಂದಿನ ಸರಣಿಯಾಗಿ ತಯಾರಿಸಲಾಗಿರುವ ಈ ವಿಮಾನವು 15,200 ಮೀಟರ್ ಎತ್ತರದಲ್ಲಿ ಗಂಟೆಗೆ 2,205 ಕಿಮೀ ವೇಗದಲ್ಲಿ ಹಾರಬಲ್ಲದು. ಲೇಸರ್ ನಿರ್ದೇಶಿತ ಬಾಂಬ್, ನಿರ್ವಹಣೆ ಸೇರಿ ಅನೇಕ ವಿಶೇಷ ಸೌಲಭ್ಯಗಳು ಇದರಲ್ಲಿವೆ. ಹಾರಾಡುತ್ತಿರುವಾಗಲೇ ಇಂಧನ ತುಂಬಿಸಿಕೊಳ್ಳುವಂತಹ ಸಾಮರ್ಥ್ಯ ಇದರಲ್ಲಿದೆ. 2016ರಿಂದ ಮೊದಲ ಸ್ಕಾ್ವಡ್ರನ್ ವಾಯುಪಡೆಯಲ್ಲಿ ಸೇವೆ ಸಲ್ಲಿಸುತ್ತಿದೆ. ಅನೇಕ ಕಾರ್ಯಾಚರಣೆಗಳಲ್ಲೂ ಪಾಲ್ಗೊಂಡಿದೆ.
ತೇಜಸ್ ಹಾದಿ
ಫ್ಲೈಯಿಂಗ್ ಬುಲೆಟ್ಸ್
ಪ್ರಸ್ತುತ ಸ್ಕ್ವಾಡ್ರನ್ 18ನಲ್ಲಿ ತೇಜಸ್ ಯುದ್ಧವಿಮಾನ ನಿಯೋಜನೆ ಮಾಡಲಾಗಿದೆ. ವಿಶೇಷ ಶಕ್ತಿ ಮತ್ತು ಸಾಮರ್ಥ್ಯ ಹೊಂದಿರುವ ಈ ತಂಡವನ್ನು ಫ್ಲೈಯಿಂಗ್ ಬುಲೆಟ್ಸ್ ಎಂದೂ ಕರೆಯಲಾಗುತ್ತದೆ. ಕಠಿಣ ಕಾರ್ಯಾಚರಣೆಗಳನ್ನು ಕೈಗೊಳ್ಳಲು 1965ರ ಏಪ್ರಿಲ್ 15ರಂದು ಈ ತಂಡವನ್ನು ರಚಿಸಲಾಯಿತು. ಈ ತಂಡದಲ್ಲಿ ಮೊದಲು ಮಿಗ್-27 ಯುದ್ಧ ವಿಮಾನಗಳನ್ನು ಬಳಸಿಕೊಳ್ಳಲಾಯಿತು. ಇದು 1971ರಲ್ಲಿ ಪಾಕಿಸ್ತಾನದೊಂದಿಗೆ ನಡೆದ ಯುದ್ಧದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿತು. ತಂಡದ ಫ್ಲೈಯಿಂಗ್ ಅಧಿಕಾರಿ ನಿರ್ಮಲ್ ಜಿತ್ ಸಿಂಗ್ ಹುತಾತ್ಮರಾಗಿದ್ದರು. ಅವರಿಗೆ ಮರಣೋತ್ತರವಾಗಿ ಪರಮವೀರ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಶ್ರೀನಗರ ವಾಯುನೆಲೆಯಿಂದ ಕಾರ್ಯ ನಿರ್ವಹಿಸಿದ ಮೊದಲ ತಂಡ ಇದಾಗಿದೆ. ಈ ಕಾರಣಕ್ಕಾಗಿ ತಂಡಕ್ಕೆ ಕಾಶ್ಮೀರ ಕಣಿವೆಯ ರಕ್ಷಕರು ಎನ್ನುವ ಹೆಸರೂ ಇದೆ. 2016ರ ಏಪ್ರಿಲ್ 15ರಂದು ತಂಡವನ್ನು ವಿಸರ್ಜಿಸಲಾಗಿತ್ತು. 2020ರ ಏಪ್ರಿಲ್ 1ರಂದು ಮತ್ತೆ ಇದನ್ನು ಆತಂಭಿಸಲಾಗಿದೆ.