

ಕೋಲಾರ: ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ಕಲ್ಪಿಸುವ ಉದ್ದೇಶದಿಂದ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ಧಿಪಡಿಸಲು ಒತ್ತು ನೀಡಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಉನ್ನತ ಶಿಕ್ಷಣ ಇಲಾಖೆ, ಸರ್ಕಾರ ಮಹಿಳಾ ಕಾಲೇಜಿನಿಂದ ಬುಧವಾರ ಹಮ್ಮಿಕೊಂಡಿದ್ದ ನೂತನ ಕಟ್ಟಡ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮೈಸೂರು ಜಿಲ್ಲೆ ನಂತರ ಕೋಲಾರದ ಅಭಿವೃದ್ಧಿಗೆ ಭರಪೂರ ಅನುದಾನ ಬರುತ್ತಿದೆ. ಒಟ್ಟು 103 ಕೋಟಿ ರೂ.ಅನುದಾನದಲ್ಲಿ ವಿವಿಧ ಕಾಲೇಜು, ಬೆಂ. ಉತ್ತರ ವಿಶ್ವವಿದ್ಯಾಲಯಗಳ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಾಗಿದೆ ಎಂದರು.
ಸರ್ಕಾರಿ ಮಹಿಳಾ ಕಾಲೇಜು ಅಭಿವೃದ್ಧಿಗೆ 42.67 ಕೋಟಿ ರೂ., ಸರ್ಕಾರಿ ಕಾನೂನು ಕಾಲೇಜು ಆವರಣದಲ್ಲಿ ನೂತನ ಕಟ್ಟಡ ನಿಮಾರ್ಣಕ್ಕೆ 6.82 ಕೋಟಿ ರೂ.ವೆಚ್ಚದ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಗಿದೆ. ಮಹಿಳಾ ವಸತಿ ನಿಲಯಕ್ಕಾಗಿ 12.5 ಕೋಟಿ ರೂ., ಪ್ರಧಾನಮಂತ್ರಿ "ಉಷಾ' ಯೋಜನೆಯಡಿ 10 ಕೋಟಿ ರೂ.ವೆಚ್ಚದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಬೆಂ. ಉತ್ತರ ವಿಶ್ವವಿದ್ಯಾಯಕ್ಕೆ ಸುವರ್ಣ ಗಂಗೆ ಎಂದು ನಾಮಕರಣ ಮಾಡಲು ಚಿಂತಿಸಲಾಗಿದೆ ಎಂದು ಹೇಳಿದರು.
ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ವ್ಯಾಪ್ತಿಗೆ 24 ವಿಧಾನಸಭಾ ಕ್ಷೇತ್ರಗಳು ಒಳಪಡುತ್ತದೆ. ಚಿಕ್ಕಬಳ್ಳಾಪುರ ಜಿಲ್ಲೆಯ ಅಮರಾವತಿ ಬಳಿ 160 ಎಕರೆ ವಿಸ್ತೀರ್ಣದಲ್ಲಿ ಉತ್ತಮ ಕ್ಯಾಂಪಸ್ ನಿಮಾರ್ಣವಾಗುತ್ತಿರುವುದು ಗ್ರಾಮೀಣ ಭಾಗದವರಿಗೆ ಹೆಚ್ಚಿನ ನೆರವಾಗಲಿದೆ. ಅತಿ ಶ್ರೀದಲ್ಲೇ ಕಟ್ಟಡದ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.
ಜಿಲ್ಲೆಯಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ನಿಮಾರ್ಣ, ಅಂತರಗಂಗೆಯಿಂದ ಕೋಲಾರಮ್ಮ ಕೆರೆವರೆಗೂ 100 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿಮಾರ್ಣ ಹಾಗೂ ಕೋಲಾರ ನಗರಕ್ಕೆ ರಿಂಗ್ ರಸ್ತೆ ನಿಮಾರ್ಣಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳು ತಮ್ಮ ಸ್ವಂತ ಜಿಲ್ಲೆಯಂತೆ ವಿಶೇಷ ಅನುದಾನ ನೀಡುವ ವಿಶ್ವಾಸವಿದೆ ಎಂದು ಸಚಿವರು ಹೇಳಿದರು.
ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಎಂಎಲ್ಸಿ ನಜೀರ್ ಅಹಮದ್, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಎಸ್ಪಿ ಬಿ.ನಿಖಿಲ್, ವಿಧಾನ ಪರಿಷತ್ ಸದಸ್ಯ ಎಂ.ಎಲ್.ಅನಿಲ್ ಕುಮಾರ್, ನಗರಸಭೆ ಅಧ್ಯೆ ಲಕ್ಷಿ$್ಮದೇವಮ್ಮ, ಕೆಯುಡಿಎ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಶಿವಕುಮಾರ್, ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಎಲ್ಲಾ ಸಿಂಡಿಕೇಟ್ ಸದಸ್ಯ ಸೀಸಂದ್ರ ಗೋಪಾಲ್, ಕುಲಪತಿ ಡಾ.ನಿರಂಜನ ವಾನಳ್ಳಿ, ಮೌಲ್ಯಮಾಪನ ಕುಲಸಚಿವ ಪ್ರೊ.ಲೋಕನಾಥ್, ಉಪ ವಿಭಾಗಾಧಿಕಾರಿ ಡಾ.ಎಚ್.ಪಿ.ಎಸ್.ಮೈತ್ರಿ, ತಹಸೀಲ್ದಾರ್ ಡಾ.ನಯನಾ ಇದ್ದರು.
* ಜಿಲ್ಲೆಯ ಅಭಿವೃದ್ಧಿಯೇ ಗುರಿ
ಈಗಾಗಲೇ ಜಿಲ್ಲೆಯಲ್ಲಿ ಸಾಕಷ್ಟು ಅನುದಾನ ತಂದು ಅಭಿವೃದ್ಧಿ ಕೆಲಸಗಳಿಗೆ ಚಾಲನೆ ನೀಡಲಾಗಿದೆ. ಕೋಲಾರವನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಅಭಿವೃದ್ಧಿಪಡಿಸುವುದು ನಮ್ಮ ಗುರಿಯಾಗಿದೆ. ಈ ಜಿಲ್ಲೆ ವಿದ್ಯೆಯಲ್ಲಿ ಮುಂಚೂಣಿಯಲ್ಲಿದ್ದು, ಸರ್ಕಾರಿ ಕಾಲೇಜುಗಳ ಬಲವರ್ಧನೆಗೆ ಒತ್ತು ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬೈರತಿ ಸುರೇಶ್ ಭರವಸೆ ನೀಡಿದರು.
* ವಿದ್ಯಾವಂತ ಜಿಲ್ಲೆಯಾಗಿ ಸೃಷ್ಟಿ
ಶಾಸಕ ಕೊತ್ತೂರು ಜಿ.ಮಂಜುನಾಥ್ ಮಾತನಾಡಿ, ನಗರದ ಹೃದಯ ಭಾಗದಲ್ಲಿರುವ ಕಾಲೇಜುಗಳಿಗೆ ಹೆಚ್ಚಿನ ಅನುದಾನ ನೀಡಲಾಗಿದೆ. ಇನ್ನೂ ನೂರು ಕೋಟಿಗೂ ಹೆಚ್ಚಿನ ಅನುದಾನ ತಂದು ಜಿಲ್ಲೆಯ ಎಲ್ಲ ಸರ್ಕಾರಿ ಕಾಲೇಜುಗಳನ್ನು ಅಭಿವೃದ್ಧಿಪಡಿಸಲಾಗುವುದು ಎಂದು ತಿಳಿಸಿದರು.