

ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಕಚೇರಿ ಎದುರು ಆತ್ಮಾಹುತಿ ಮಾಡಿಕೊಳ್ಳಲು ಪ್ರಯತ್ನಿಸಿದ ಪ್ರಕರಣಕ್ಕೆ ಹೊಸದೊಂದು ತಿರುವು ಸಿಕ್ಕಿದೆ. ಅವರ ಆ ಕೃತ್ಯಕ್ಕೆ ಪ್ರಚೋದನೆ ನೀಡಿದ್ದು ಎಐಎಂಐಎಂ ಮತ್ತು ಕಾಂಗ್ರೆಸ್ ನಾಯಕರು ಎಂಬ ಅಂಶ ಬಹಿರಂಗವಾಗಿದೆ!
ಲಖನೌ ಪೊಲೀಸ್ ಆಯುಕ್ತ ಸುಜೀತ್ ಪಾಂಡೆ ಅವರು ಈ ಕುರಿತು ಪ್ರತಿಕ್ರಿಯಿಸಿದ್ದು, ತಾಯಿ-ಮಗಳ ಆತ್ಮಾಹುತಿಗೆ ಕೆಲವರು ಪ್ರಚೋದನೆ ನೀಡಿದ್ದರು. ಈ ರೀತಿ ಆತ್ಮಾಹುತಿಗೆ ಪ್ರಯತ್ನಿಸಿದ ತಾಯಿಯನ್ನು ಸಫಿಯಾ(50) ಮತ್ತು ಮಗಳನ್ನು ಗುಡಿಯಾ(28) ಎಂದು ಗುರುತಿಸಲಾಗಿದೆ. ಲೋಕಭವನದ ಎದುರು ಆತ್ಮಾಹುತಿ ಮಾಡಿಕೊಳ್ಳಿ ಎಂದು ಅವರನ್ನು ಪ್ರಚೋದಿಸಿದ್ದು ಆಲ್ ಇಂಡಿಯಾ ಮಜ್ಲಿಸ್-ಏ-ಇತ್ತೇಹಾದ್-ಉಲ್ ಮುಸ್ಲಿಮೀನ್(ಎಐಎಂಐಎಂ) ಪಕ್ಷದ ಅಮೇಠಿ ಜಿಲ್ಲಾಧ್ಯಕ್ಷ ಕಾದಿರ್ ಖಾನ್ ಮತ್ತು ಕಾಂಗ್ರೆಸ್ ನಾಯಕ ಅನೂಪ್ ಪಟೇಲ್. ಅವರು ಈ ಪ್ರಕರಣದಲ್ಲಿ ನೇರ ಭಾಗಿಯಾಗಿರುವ ಕಾರಣ ಅವರೂ ಸೇರಿ ನಾಲ್ವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನಾವಿಕೋತ್ಸವ 2020 ಕಥಾಸ್ಪರ್ಧೆ- ಇದು ಕರ್ನಾಟಕದವರಿಗಾಗಿ!
ಈ ಪ್ರಕರಣ ಒಂದು ಪಿತೂರಿಯಾಗಿದ್ದು, ಈ ಬಗ್ಗೆ ವಿಸ್ತೃತ ತನಿಖೆ ನಡೆಸಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು. ಆ ಮಹಿಳೆಯರನ್ನು ಪ್ರಚೋದಿಸಿದ ಗುಂಪಿನಲ್ಲಿ ಇನ್ನೂ ಕೆಲವರು ಭಾಗಿಯಾಗಿದ್ದಾರೆ. ಅವರು ಯಾರೆಂದು ಪತ್ತೆ ಹಚ್ಚಲಾಗುತ್ತದೆ. ಸದ್ಯ ಅವರಿಬ್ಬರೂ ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ತಾಯಿಗೆ ಶೇಕಡ 80ರಷ್ಟು ಸುಟ್ಟಗಾಯಗಳಾಗಿದ್ದು ಸ್ಥಿತಿ ಗಂಭೀರವಾಗಿದೆ ಎಂದು ಪಾಂಡೆ ಹೇಳಿದ್ದಾರೆ. (ಏಜೆನ್ಸೀಸ್)