

ತುಮಕೂರು: ಜನಜಾಗೃತಿ ಮೂಲಕ ಏಡ್ಸ್ ಸೋಂಕು ಹರಡುವುದನ್ನು ತಡೆಗಟ್ಟಬೇಕಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ನಾಗೇಂದ್ರಪ್ಪ ಹೇಳಿದರು.
ನಗರದ ಐಎಂಎ ಸಭಾಂಗಣದಲ್ಲಿ ಬುಧವಾರ ಜಿಲ್ಲಾ ಏಡ್ಸ್ ನಿಯಂತ್ರಣಾಘಟಕ ಬುಧವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಏಡ್ಸ್‌ಗೆ ಚಿಕಿತ್ಸೆಯಾಗಲಿ, ಲಸಿಕೆಯಾಗಲಿ ಇಲ್ಲ. ಹಾಗಾಗಿ, ಸೋಂಕು ಹರಡುವುದನ್ನು ಜಾಗೃತಿ ಮೂಲಕ ತಡೆಯಬೇಕಾಗಿದೆ. ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಇಳಿಮುಖವಾಗುತ್ತಿದೆ ಎಂದರು.
ಎಚ್‌ಐವಿ ಸೋಂಕಿತ ಗರ್ಭಿಣಿಯಿಂದ ಮಗುವಿಗೆ ತಗುಲುವ ಸೋಂಕಿನ ಪ್ರಮಾಣವನ್ನು ಸೊನ್ನೆಗೆ ತರುವಗುರಿ ಹೊಂದಲಾಗಿದೆ. ಸೋಂಕು ಯಾರಿಗೆ, ಹೇಗೆ ಹರಡುತ್ತದೆ. ಅದರ ನಿಯಂತ್ರಣ ಹೇಗೆ ಎಂಬ ಬಗ್ಗೆ ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇಂತಹ ಜಾಗೃತಿ ಕಾರ್ಯದಿಂದಾಗಿ ಕಳೆದ 5 ವರ್ಷಗಳಲ್ಲಿ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಶೇಕಡ 0.8 ರಿಂದ 0.4ಕ್ಕೆ ಇಳಿಕೆಯಾಗಿದ್ದು, ಅರಿವು ಕಾರ್ಯ ಯಶಸ್ವಿಯಾಗುತ್ತಿದೆ. ಶೂನ್ಯ ಪ್ರಮಾಣಕ್ಕೆ ಇಳಿಸಲು ಎಲ್ಲರೂ ಸಹಕಾರ ನೀಡಬೇಕು ಎಂದು ತಿಳಿಸಿದರು.
ಅಸುರಕ್ಷಿತ ಲೈಂಗಿಕ ಕ್ರಿಯೆ, ಸಂಸ್ಕರಿಸದೆ ಬಳಸುವ ಸೂಜಿ, ಸಿರೆಂಜ್ ಬಳಸುವುದರಿಂದ, ಸೋಂಕಿತ ರಕ್ತ ಪಡೆಯುವುದರಿಂದ, ಹೆಚ್‌ಐವಿ ಸೋಂಕಿತ ತಾಯಿಯಿಂದ ಮಗುವಿಗೆ ಸೋಂಕು ಹರಡುತ್ತದೆ. ಹೆಚ್‌ಐವಿ ಸೋಂಕಿನ ಕೊನೆಯ ಹಂತ ಏಡ್ಸ್. ಎಚ್‌ಐವಿ ಸೋಂಕು ಪರೀಕ್ಷೆಗೆ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಅವಕಾಶವಿದೆ ಎಂದು ಡಾ.ನಾಗೇಂದ್ರಪ್ಪ ಹೇಳಿದರು.
ಪ್ರತಿ ವರ್ಷ ಡಿ.1ರಂದು ವಿಶ್ವ ಏಡ್ಸ್ ದಿನ ಆಚರಿಸುವ ಮೂಲಕ ಜನರಲ್ಲಿ ಸೋಂಕಿನ ಬಗ್ಗೆ ಅರಿವು ಮೂಡಿಸಿ, ಹರಡುವುದನ್ನು ತಡೆಯುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತದೆ. ಅಸಮಾನತೆಗಳನ್ನು ಕೊನೆಗೊಳಿಸಿ, ಏಡ್ಸ್ ಅನ್ನು ಕೊನೆಗೊಳಿಸಿ, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ ಎಂಬುದು ಈ ವರ್ಷದ ಘೋಷ ವಾಕ್ಯ ಎಂದು ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ ಡಾ.ಸನತ್‌ಕುಮಾರ್ ತಿಳಿಸಿದರು.
ಸೋಂಕಿನ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸಲು ಜಾನಪದ ಕಲಾ ತಂಡಗಳ ಮೂಲಕ ಪ್ರಚಾರ, ಕಾಲೇಜುಗಳಲ್ಲಿ ರೆಡ್ ರಿಬ್ಬನ್ ಕ್ಲಬ್, ಜಾಹೀರಾತು, ಗುಂಪುಸಭೆಗಳು, ಕಾರ್ಮಿಕ ವರ್ಗದವರಿಗೆ, ಆಶಾ ಕಾರ್ಯಕರ್ತರಿಗೆ ತರಬೇತಿ ಹಮ್ಮಿಕೊಳ್ಳಲಾಗಿದೆ ಎಂದರು.
ಅರಿವು ಕಾರ್ಯಕ್ರಮ: ನಗರದ ಕೆಎಸ್‌ಆರ್‌ಟಿಸಿ, ಖಾಸಗಿ ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ಮಾರುಕಟ್ಟೆ ಬಳಿ ಜಾಗೃತಿ ಕೇಂದ್ರ ಸ್ಥಾಪಿಸಲಾಗಿತ್ತು. ಜಾನಪದ ಕಲಾ ತಂಡಗಳ ಪ್ರದರ್ಶನ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಲಾಯಿತು.
ಜಿಲ್ಲೆಯಲ್ಲಿ 18 ಐಸಿಟಿಸಿ ಕೇಂದ್ರಗಳು, 151 ಪಿಎಚ್‌ಸಿಗಳಲ್ಲಿ ಹಾಗೂ 16 ಖಾಸಗಿ ಸಹಭಾಗಿತ್ವದಲ್ಲಿ ಐಸಿಟಿಸಿ ಸೇವೆ ನೀಡಲಾಗುತ್ತಿದೆ. ನಗರದ ಜಿಲ್ಲಾಸ್ಪತ್ರೆ, ತಿಪಟೂರು, ಶಿರಾ ಆಸ್ಪತ್ರೆ, ನಗರದ ಶ್ರೀದೇವಿ ಮೆಡಿಕಲ್‌ಕಾಲೇಜುಗಳಲ್ಲಿ ಎಆರ್ ಟಿ ಕೇಂದ್ರಗಳಲ್ಲಿ ಏಡ್ಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುವುದು. ಡಾ.ಸನತ್ ಕುಮಾರ್ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿ