ನೆಪ ಹೇಳಬೇಡಿ, ಟೈಮಿಗೆ ಸರಿಯಾಗಿ ಸಂಬಳ ಕೊಡಿ: ಖಾಸಗಿ ಇಂಜಿನಿಯರಿಂಗ್, ಟೆಕ್ ಶಿಕ್ಷಣ ಸಂಸ್ಥೆಗಳಿಗೆ ಎಐಸಿಟಿಇ ನಿರ್ದೇಶನ

AICTE
Published on

ನವದೆಹಲಿ: ಲಾಕ್​ಡೌನ್ ನೆಪವೊಡ್ಡಿ ಕೆಲವು ಇಂಜಿನಿಯರಿಂಗ್​, ಟೆಕ್​ ಶಿಕ್ಷಣ ಸಂಸ್ಥೆಗಳು ಉದ್ಯೋಗಿಗಳಿಗೆ ವೇತನ ವಿಳಂಬ ಮಾಡುತ್ತಿರುವ ಕುರಿತು ದೂರುಗಳನ್ನು ಪರಿಶೀಲಿಸಿರುವ ಆಲ್​ ಇಂಡಿಯಾ ಕೌನ್ಸಿಲ್​ ಆಫ್ ಟೆಕ್ನಿಕಲ್ ಎಜುಕೇಶನ್​(ಎಐಸಿಟಿಇ), ನೆಪ ಹೇಳದೆ ಎಲ್ಲ ಉದ್ಯೋಗಿಗಳಿಗೂ ಸರಿಯಾದ ಸಮಯಕ್ಕೆ ವೇತನ ಪಾವತಿಸಿ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ನಿರ್ದೇಶನ ನೀಡಿದೆ.

ಕೆಲವು ಶಿಕ್ಷಣ ಸಂಸ್ಥೆಗಳು ಫೆಬ್ರವರಿ ಮತ್ತು ಮಾರ್ಚ್ ತಿಂಗಳ ವೇತನವನ್ನೂ ಪಾವತಿಸಿಲ್ಲ. ಈ ಕುರಿತು ಸಾಕಷ್ಟು ದೂರುಗಳು ಬಂದಿವೆ. ಸದ್ಯ ರಾಷ್ಟ್ರೀಯ ತುರ್ತುಪರಿಸ್ಥಿತಿ ಇದ್ದು, ಕೋವಿಡ್​ 19 ಕಾರಣಕ್ಕೆ ಇಡೀ ದೇಶ ಒತ್ತಡದಲ್ಲಿದೆ. ಇಂತಹ ಸನ್ನಿವೇಶದಲ್ಲಿ ವೇತನವನ್ನು ತಡೆಹಿಡಿದರೆ ಒತ್ತಡ ಇನ್ನಷ್ಟು ಹೆಚ್ಚಲಿದೆ. ಅಲ್ಲದೆ, ಆ ಉದ್ಯೋಗಿಗಳ ಕುಟುಂಬ ಉಪವಾಸ ಇರಬೇಕಾದೀತು.ಇಂತಹ ಪರಿಸ್ಥಿತಿಯಲ್ಲಿ ಎಲ್ಲ ಉದ್ಯೋಗಿಗಳಿಗೂ ಸರಿಯಾದ ಸಮಯಕ್ಕೆ ವೇತನ ಪಾವತಿಯಾಗಿದೆ ಎಂಬುದನ್ನು ಆಯಾ ಆಡಳಿತ ಮಂಡಳಿ ಖಾತರಿಪಡಿಸಿಕೊಳ್ಳಬೇಕು ಎಂದು ಎಐಸಿಟಿಇ ಚೇರ್​ಮನ್​ ಅನಿಲ್ ಸಹಸ್ರಬುದ್ಧೆ ಎಐಸಿಟಿಇ ಮಾನ್ಯತೆ ಪಡೆದ ಎಲ್ಲ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ದೇಶಾದ್ಯಂತ ಮಾರ್ಚ್ 16ರಿಂದ ಕಾಲೇಜುಗಳು ಮುಚ್ಚಲ್ಪಟ್ಟಿವೆ. ಲಾಕ್​ ಡೌನ್​ ಮಾರ್ಚ್​ 24ರಂದು ಆರಂಭವಾಗಿದ್ದು, ಮೇ 17ರ ತನಕ ವಿಸ್ತರಿಸಲ್ಪಟ್ಟಿದೆ. ಕಳೆದ ತಿಂಗಳಷ್ಟೇ ವಿದ್ಯಾರ್ಥಿಗಳಿಂದ ಈ ಅವಧಿಯಲ್ಲಿ ಶುಲ್ಕ ಸ್ವೀಕರಿಸದಂತೆ ಮತ್ತು ಉದ್ಯೋಗಿಗಳಿಗೆ ವೇತನವನ್ನು ಸರಿಯಾಗಿ ಪಾವತಿಸುವಂತೆ ಎಐಸಿಟಿಇ ಎಲ್ಲ ಶಿಕ್ಷಣ ಸಂಸ್ಥೆಗಳಿಗೂ ಎಚ್ಚರಿಕೆಯನ್ನೂ ನೀಡಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net