ಎಐಎಡಿಎಂಕೆ ಪಕ್ಷದ ಕಚೇರಿಯಿಂದ ದಾಖಲೆಗಳು ಲೂಟಿ: ಓ ಪನ್ನೀರ್​ ಸೆಲ್ವಂ ವಿರುದ್ಧ ದೂರು ದಾಖಲು

AIADMK
Published on

ಚೆನ್ನೈ: ಪಕ್ಷದ ಕಚೇರಿಯಿಂದ ದಾಖಲೆಗಳು ಮತ್ತು ವಸ್ತುಗಳನ್ನು ಲೂಟಿ ಮಾಡಲಾಗಿದೆ ಎಂದು ಶನಿವಾರ ಎಐಎಡಿಎಂಕೆ ಪಕ್ಷ ಆರೋಪಿಸಿದ್ದು, ಓ ಪನ್ನೀರ್​ ಸೆಲ್ವಂ ವಿರುದ್ಧ ದೂರು ದಾಖಲಿಸಲಾಗಿದೆ.

ಹಂಗಾಮಿ ಪ್ರಧಾನ ಕಾರ್ಯದರ್ಶಿ ಕೆ.ಪಳನಿಸಸ್ವಾಮಿ ಮತ್ತು ಓ ಪನ್ನೀರ್​ ಸೆಲ್ವಂ ಬೆಂಬಲಿಗರ ನಡುವೆ ಜುಲೈ 11 ರಂದ ಘರ್ಷಣೆ ನಡೆದಿತ್ತು. ಈ ವೇಳೆ ಕಚೇರಿಯಲ್ಲಿದ್ದ ದಾಖಲೆಗಳು ಹಾಗೂ ಕಡತಗಳು ಸೇರಿದಂತೆ ವಸ್ತುಗಳ ಸಮೇತ ಕಚೇರಿಯನ್ನೇ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದೆ.

ಈ ಸಂಬಂಧ ಪಕ್ಷದ ಹಿರಿಯ ಮುಖಂಡ ರಾಜ್ಯಸಭಾ ಸದಸ್ಯ ಸಿ.ವಿ.ಷಣ್ಮುಗಂ ದೂರು ದಾಖಲಿಸಿದ್ದಾರೆ. ಪನ್ನೀರ್​ ಸೆಲ್ವಂ ಮತ್ತು ಅವರ ಸಹಚರರು ಕಚೇರಿಯಿಂದ ದಾಖಲೆಗಳು ಸೇರಿದಂತೆ ಅಮೂಲ್ಯ ವಸ್ತುಗಳನ್ನು ಲೂಟಿ ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಘರ್ಷಣೆ ನಡೆದ ದಿನ ಪನ್ನೀರ್​ ಸೆಲ್ವಂ ಸೇರಿದಂತೆ ಅವರ ಬೆಂಬಲಿಗರು ಪಕ್ಷದ ಕಚೇರಿಯನ್ನು ಮುರಿದು ದಾಖಲೆಗಳನ್ನು ತೆಗೆದುಕೊಂಡು ಹೋಗಿದ್ದಲ್ಲದೇ, ಕಚೇರಿಗೂ ಹಾನಿ ಮಾಡಿದ್ದಾರೆ. ಇನ್ನೂ ಅನೇಕ ವಸ್ತುಗಳು ಲೂಟಿಯಾಗಿವೆ ಎಂದು ಷಣ್ಮುಗಂ ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ.

ಜುಲೈ 11 ರಂದು ಪಕ್ಷದ ಮಹತ್ವದ ನಿರ್ಣಯ ಕೈಗೊಳ್ಳುವ ಜನರಲ್​ ಕೌನ್ಸಿಲ್​ ವಿಶೇಷ ಸಭೆ ನಡೆಯುತ್ತಿದ್ದಾಗ ಓ ಪನ್ನೀರ್​ ಸೆಲ್ವಂ ಮತ್ತು ಪಳನಿಸ್ವಾಮಿ ಬೆಂಬಲಿಗರ ನಡುವೆ ಘರ್ಷಣೆ ನಡೆದಿತ್ತು. ಈ ಬಳಿಕ ಪಳನಿಸ್ವಾಮಿ ಅವರನ್ನು ನಾಯಕರನ್ನಾಗಿ ಆಯ್ಕೆ ಮಾಡಲಾಗಿದ್ದು, ಪನ್ನೀರ್​ ಸೆಲ್ವಂ ಅವರನ್ನು ಪಕ್ಷದಿಂದ ಉಚ್ಛಾಟಿಸಲಾಗಿತ್ತು. ಇದೀಗ ಈ ಘರ್ಷಣೆ ಪ್ರಕರಣ ಮತ್ತೊಂದು ಹಂತ ತಲುಪಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net