

| ರಾಘವ ಶರ್ಮ ನಿಡ್ಲೆ ನವದೆಹಲಿ
ಮುಂಬರುವ ವಿಧಾನಸಭೆ ಚುನಾವಣೆಗೆ ಆಡಳಿತಾರೂಢ ಎಐಎಡಿಎಂಕೆ-ಬಿಜೆಪಿ ಮೈತ್ರಿ ಬಹುತೇಕ ಖಚಿತವಾಗಿದ್ದರೂ, ದಿನೇ ದಿನೇ ಹೆಚ್ಚುತ್ತಿರುವ ಬಿಜೆಪಿ ಜನಪ್ರಿಯತೆ ಎಐಎಡಿಎಂಕೆ ಮುಖಂಡರನ್ನೇ ಚಿಂತೆಗೀಡು ಮಾಡುತ್ತಿದೆ. ತೆಲಂಗಾಣ ಪಾಲಿಕೆ ಚುನಾವಣೆಯಲ್ಲೂ ಬಿಜೆಪಿ ತೋರಿರುವ ಅಭೂತಪೂರ್ವ ನಿರ್ವಹಣೆ ತಮಿಳುನಾಡು ಚುನಾವಣೆ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಬಿಜೆಪಿ ಎರಡಂಕಿ ಸೀಟುಗಳನ್ನು ಗೆಲ್ಲಬೇಕೆಂಬ ಲೆಕ್ಕಾಚಾರ ಹಾಕಿಕೊಂಡಿದೆ. ಆದರೆ, ಎಐಎಡಿಎಂಕೆ ಎಷ್ಟು ಸೀಟುಗಳನ್ನು ಬಿಜೆಪಿಗೆ ಹಂಚಲಿದೆ ಎನ್ನುವುದು ಬಿಜೆಪಿ ‘ಭವಿಷ್ಯ’ ನಿರ್ಧರಿಸಲಿದೆ. ಹೀಗಾಗಿಯೇ, ‘ನಿಮ್ಮ ಮಿತಿಯಲ್ಲಿ ನೀವು ಇರಬೇಕು. ಇಲ್ಲದಿದ್ದಲ್ಲಿ ಚುನಾವಣೆ ಆಯ್ಕೆಗಳ ಬಗ್ಗೆ ಮರುಪರಿಶೀಲನೆ ಮಾಡಿ’ ಎಂಬ ಸಂದೇಶವನ್ನು ಬಿಜೆಪಿಗೆ ಎಐಎಡಿಎಂಕೆಯ ಕೆಲವು ನಾಯಕರು ರವಾನಿಸಿದ್ದಾರೆ.
ಬಿಜೆಪಿ ಕುರಿತು ಜನರಲ್ಲಿ ಒಲವು ಹೆಚ್ಚಿರುವುದು ಈಚಿನ ಸಮಾವೇಶಗಳಲ್ಲೂ ದೃಢಪಟ್ಟಿದೆ. ರಾಜ್ಯಾಧ್ಯಕ್ಷ ಎಲ್. ಮುರುಗನ್, ಮಾಜಿ ಪೊಲೀಸ್ ಅಧಿಕಾರಿ ಕೆ. ಅಣ್ಣಾಮಲೈ ಸೇರಿ ಕೆಲ ನಾಯಕರ ಬಗ್ಗೆ ಮತದಾರರಲ್ಲಿ ಭರವಸೆ ಕಾಣುತ್ತಿದೆ. ಸದ್ಯ ತಮಿಳುನಾಡಿನಲ್ಲಿ ಬಿಜೆಪಿಗೆ ಒಂದೇ ಒಂದು ಶಾಸಕ ಅಥವಾ ಸಂಸದ ಸ್ಥಾನ ಇಲ್ಲದಿದ್ದರೂ, ರಾಜ್ಯ ಚುನಾವಣೆಯಲ್ಲಿ ಖಾತೆ ತೆರೆಯುವ ಜತೆಗೆ ಕೆಲ ಕ್ಷೇತ್ರಗಳನ್ನು ಗೆಲ್ಲುವ ಗುರಿ ಇಟ್ಟುಕೊಂಡಿದೆ. ಒಂದುವೇಳೆ ಮೈತ್ರಿ ಮೂಲಕ ಚುನಾವಣೆ ಗೆದ್ದರೆ, ಅಧಿಕಾರ ಹಂಚಿಕೆಯಲ್ಲಿ ಬಿಜೆಪಿಗೆ ಪಾಲು ಇರಬೇಕು ಎಂದು ಒತ್ತಾಯಿಸುವುದು ಖಂಡಿತ. ಹೀಗಾಗಿಯೇ, ‘ನಿಮ್ಮ ಮಿತಿಯಲ್ಲಿ ನೀವಿರಬೇಕು’ ಎಂದು ಎಐಎಡಿಎಂಕೆ ಸಹ ಸಂಯೋಜಕ, ರಾಜ್ಯಸಭೆ ಮಾಜಿ ಸದಸ್ಯ ಕೆ.ಪಿ. ಮುನುಸ್ವಾಮಿ ಬಿಜೆಪಿ ವಿರುದ್ಧ ನೀಡಿರುವ ಈ ಹೇಳಿಕೆ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.
ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಎಐಎಡಿಎಂಕೆಗೆ ಬಿಜೆಪಿ ಜತೆಗೆ ಮೈತ್ರಿ ಅನಿವಾರ್ಯ. ಸತತ 2ನೇ ಅವಧಿಗೆ ಅಧಿಕಾರಕ್ಕೇರಿದ ಪಕ್ಷವನ್ನು ಗದ್ದುಗೆಯಿಂದಿಳಿಸಲು ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ ಭಾರೀ ಕಸರತ್ತು ನಡೆಸುತ್ತಿದೆ. ಈಚಿಗಷ್ಟೇ ರಾಜ್ಯಪಾಲರನ್ನು ಭೇಟಿ ಮಾಡಿದ ಡಿಎಂಕೆ ಮುಖಂಡರು, ಸರ್ಕಾರದ ವಿರುದ್ಧದ 98 ಪುಟಗಳ ಭ್ರಷ್ಟಾಚಾರ ಆರೋಪಗಳ ಪುಸ್ತಕವೊಂದನ್ನು ನೀಡಿದ್ದಾರೆ. ಇದರಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ಸಂಬಂಧಿಸಿ 700 ಪುಟಗಳ ಸಾಕ್ಷ್ಯಳನ್ನೂ ಸಲ್ಲಿಸಿದ್ದಾರೆ. ಇವೆಲ್ಲದರ ಬಗ್ಗೆ ದಿಲ್ಲಿಯಲ್ಲಿ ಕುಳಿತಿರುವ ಬಿಜೆಪಿ ನಾಯಕರಿಗೆ ಸ್ಪಷ್ಟ ಅರಿವಿದೆ ಮತ್ತು ರಾಜ್ಯ ಸರ್ಕಾರದ ಸಚಿವರ ಭ್ರಷ್ಟಾಚಾರದ ಬಗ್ಗೆ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐಗೂ ದೂರುಗಳು ಬಂದಿವೆ. ರಾಜ್ಯದಲ್ಲಿ ಎಐಎಡಿಎಂಕೆ ನೇತೃತ್ವದ ಸರ್ಕಾರದ ಪಾಲುದಾರ ಪಕ್ಷವಾಗಬೇಕೆಂದಿರುವ ಬಿಜೆಪಿ, ಕೆ. ಪಳನಿಸ್ವಾಮಿ ಸಿಎಂ ಅಭ್ಯರ್ಥಿಯಾಗುವುದಕ್ಕೆ ಈವರೆಗೆ ಯಾವುದೇ ಆಕ್ಷೇಪ ವ್ಯಕ್ತಪಡಿಸಿಲ್ಲ. ಅದಲ್ಲದೆ, ಪಳನಿಸ್ವಾಮಿ ಕೂಡ ಬಿಜೆಪಿ ಜತೆಗೆ ಉತ್ತಮ ಬಾಂಧವ್ಯ ಕಾಪಾಡಿಕೊಂಡಿದ್ದಾರೆ. ಹೀಗಿರುವಾಗ, ಮುನುಸ್ವಾಮಿ ಕಿಡಿ ಕಾರಿದ್ದೇಕೆ ಎಂಬ ಪ್ರಶ್ನೆ ಅನೇಕರನ್ನು ಕಾಡಿದೆ.
ಮುನುಸ್ವಾಮಿ, ಉಪ ಮುಖ್ಯಮಂತ್ರಿ ಒ. ಪನೀರ್ಸೆಲ್ವಂ ಗುಂಪಿಗೆ ಸೇರಿದವರು. ಪಳನಿಸ್ವಾಮಿಗೆ ಮುಜುಗರ ಉಂಟು ಮಾಡುವ ಉದ್ದೇಶವೂ ಈ ಹೇಳಿಕೆ ಹಿಂದಿದ್ದಂತಿದೆ. ‘ಪಳನಿಸ್ವಾಮಿ ಅಲ್ಲದೆ, ಅವರ ಪುತ್ರ ಮಿಥುನ್ ಕುಮಾರ್ ವಿರುದ್ಧವೂ ಭ್ರಷ್ಟಾಚಾರದ ಆರೋಪಗಳಿವೆ. ಇದರಿಂದಾಗಿ ಕೇಂದ್ರ ಸರ್ಕಾರ ಹಾಗೂ ಬಿಜೆಪಿಯೊಂದಿಗೆ ಸಿಎಂಗೆ ಉತ್ತಮ ಬಾಂಧವ್ಯ ಕಾಪಾಡಿಕೊಳ್ಳುವುದು ಅನಿವಾರ್ಯವೂ ಹೌದು. ಇದರಿಂದಾಗಿಯೆ ಅವರು ಬಿಜೆಪಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎನ್ನುವುದು ಪಕ್ಷದಲ್ಲಿ ಕೆಲವರ ಆಕ್ರೋಶಕ್ಕೂ ಕಾರಣವಾಗಿದೆ’ ಎಂದು ತಮಿಳುನಾಡಿನ ಹಿರಿಯ ಪತ್ರಕರ್ತರೊಬ್ಬರು ಹೇಳುತ್ತಾರೆ.
ಬಿಜೆಪಿ ಬಗ್ಗೆ ಹೆಚ್ಚೆಚ್ಚು ಮೃದು ಧೋರಣೆ ಪ್ರದರ್ಶಿಸಿದಲ್ಲಿ ಸೀಟು ಹಂಚಿಕೆ ವೇಳೆ ದೊಡ್ಡ ಪ್ರಮಾಣದಲ್ಲಿ ಹೊಂದಾಣಿಕೆ ಮಾಡಿಕೊಳ್ಳಬೇಕಾದೀತು. ಇದಕ್ಕೆ ಈಗಲೇ ಕಡಿವಾಣ ಹಾಕಬೇಕು ಎನ್ನುವುದು ಈ ನಾಯಕರ ಅಂಬೋಣ. ಹೀಗಾಗಿಯೆ, ಬಿಜೆಪಿ ವಿರುದ್ಧ ಕಿಡಿ ಕಾರುತ್ತಾ ಪಳನಿಸ್ವಾಮಿಗೂ ಪರೋಕ್ಷ ಸಂದೇಶ ಕಳುಹಿಸಿದ್ದಾರೆನ್ನಲಾಗಿದೆ. ಅದೇನೆ ಇದ್ದರೂ, ಎಐಎಡಿಎಂಕೆಗೆ ಮತ್ತೆ ಅಧಿಕಾರಕ್ಕೆ ಬರಬೇಕೆಂದರೆ ಈ ಬಾರಿ ಬಿಜೆಪಿ ಮತಗಳನ್ನು ನಿರ್ಲಕ್ಷಿಸುವಂತಿಲ್ಲ. ಬಿಜೆಪಿಯ ಹಿಂದುತ್ವ ರಾಜಕಾರಣ ತ.ನಾಡಿನಲ್ಲಿ ಮೊದಲ ಬಾರಿ ಫಸಲು ಕೊಡುವ ಲಕ್ಷಣಗಳು ಗೋಚರಿಸಿರುವುದೇ ಇದಕ್ಕೆ ಕಾರಣ.
ಬಿಹಾರದಲ್ಲಿ ಬಿಜೆಪಿ-ಜೆಡಿಯು ಮೈತ್ರಿ ಸರ್ಕಾರವಿದ್ದರೂ, ಅರುಣಾಚಲ ಪ್ರದೇಶದಲ್ಲಿ ಜೆಡಿಯುನ 7 ಶಾಸಕರಲ್ಲಿ 6 ಮಂದಿ ಬಿಜೆಪಿ ಸೇರ್ಪಡೆಯಾಗಿರುವುದರಿಂದ ಜೆಡಿಯು ನಾಯಕರು ಅಸಮಾಧಾನಗೊಂಡಿದ್ದಾರೆ. ಇದು ಮೈತ್ರಿ ರಾಜಕಾರಣದಲ್ಲಿ ಸ್ವಾಗತಾರ್ಹ ನಡೆಯಲ್ಲ ಎಂದು ಬಿಹಾರ ಜೆಡಿಯು ನಾಯಕ ಕೆ.ಸಿ. ತ್ಯಾಗಿ ಕಿಡಿಕಾರಿದ್ದಾರೆ. ಅರುಣಾಚಲ ಬೆಳವಣಿಗೆ ಬಿಹಾರ ಸರ್ಕಾರದ ಮೇಲೆ ಪರಿಣಾಮ ಬೀರದು ಎಂದು ಸಿಎಂ ನಿತೀಶ್ ಕುಮಾರ್ ಹೇಳಿದ್ದಾರೆ. ಜತೆಗೆ ಸಿಎಂ ಹುದ್ದೆ ಬೇಕೆಂದು ನಾನು ಕೇಳಿರಲಿಲ್ಲ. ಬಿಜೆಪಿ ಅತಿದೊಡ್ಡ ಪಕ್ಷ, ಈಗಲೂ ಹೊಸ ಸಿಎಂ ಅಭ್ಯರ್ಥಿಯನ್ನು ಆಯ್ಕೆ ಮಾಡಬಹುದು ಎಂದಿದ್ದಾರೆ. ಬಿಜೆಪಿ ನಡೆಯಿಂದ ಬೇಸರಗೊಂಡೇ ಅವರು ಈ ಮಾತುಗಳನ್ನಾಡಿದ್ದಾರೆ ಎಂದೂ ಹೇಳಲಾಗಿದೆ. ಏತನ್ಮಧ್ಯೆ, ‘ಬಿಹಾರದಲ್ಲಿ ಬಿಜೆಪಿ-ಜೆಡಿಯುನದ್ದು ಮುರಿಯಲಸಾಧ್ಯವಾದ ಮೈತ್ರಿ. ನನ್ನನ್ನು ಸಿಎಂ ಮಾಡಿ ಎಂದು ನಿತೀಶ್ ಹೇಳಿರಲಿಲ್ಲ. ಅವರ ನಾಯಕತ್ವದಲ್ಲಿ ಚುನಾವಣೆ ಎದುರಿಸಿದ ಮೇಲೆ ಸರ್ಕಾರಕ್ಕೆ ಅವರೇ ನಾಯಕರಾಗಬೇಕು ಎಂದು ಎರಡೂ ಪಕ್ಷಗಳು ತೀರ್ವನಿಸಿದವು’ ಎಂದು ಬಿಜೆಪಿ ನಾಯಕ ಸುಶೀಲ್ ಮೋದಿ ಸಮರ್ಥಿಸಿಕೊಂಡಿದ್ದಾರೆ.