

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸುಗಮ ಸಂಚಾರ ಮತ್ತು ಪ್ರಯಾಣದ ಸಮಯ ತಗ್ಗಿಸುವ ಉದ್ದೇಶದಿಂದ ಪ್ರಮುಖ ಜಂಕ್ಷನ್‌ಗಳಲ್ಲಿ ಕೃತಕ ಬುದ್ಧಿಮತ್ತೆ (ಎಐ) ತಂತ್ರಜ್ಞಾನ ಆಧರಿತ ಸಿಗ್ನಲ್ ಕಂಟ್ರೋಲ್ ಸಿಸ್ಟಂ ಅಳವಡಿಕೆ ಮಾಡಲಾಗಿದೆ.
ಪ್ರಾಯೋಗಿಕವಾಗಿ ಅನುಷ್ಠಾನಕ್ಕೆ ತಂದಿದ್ದ ‘ಬೆಂಗಳೂರು ಅಡಾಪ್ಟಿವ್ ಟ್ರಾಫಿಕ್ ಕಂಟ್ರೋಲ್ ಸಿಸ್ಟಂ’ (ಬಿಎಟಿಸಿಎಸ್) ಯೋಜನೆ ಮುಂದುವರಿದ ಭಾಗವಾಗಿ 165 ಜಂಕ್ಷನ್‌ಗಳ ಪೈಕಿ 123 ಕಡೆಗಳಲ್ಲಿ ನೂತನ ಸಿಗ್ನಲ್‌ಗಳನ್ನು ಅಳವಡಿಸಲಾಗಿದೆ. ವಾಹನಸವಾರ, ಚಾಲಕರಿಗೆ ಸುಗಮಸಂಚಾರ ಮಾತ್ರವಲ್ಲದೆ ಪ್ರಯಾಣದ ಸಮಯ ಕಡಿಮೆಯಾಗುತ್ತಿದೆ ಎಂದು ನಗರ ಸಂಚಾರ ವಿಭಾಗದ ಜಂಟಿ ಆಯುಕ್ತ ಎಂ.ಎನ್. ಅನುಚೇತ್ ತಿಳಿಸಿದ್ದಾರೆ.
ನಗರದಲ್ಲಿ 435 ಜಂಕ್ಷನ್‌ಗಳಿವೆ. ಬಿಎಟಿಸಿಎಸ್ ಯೋಜನೆಯಡಿ 165 ಜಂಕ್ಷನ್‌ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ರಸ್ತೆಗಳಲ್ಲಿ ಉಂಟಾಗುವ ಅನಿರೀಕ್ಷಿತ ಸಂಚಾರ ಸಿಕ್ಕು, ಭಾರೀ ಮಳೆ, ರಸ್ತೆ ಅಪಘಾತ, ಮರ ಬೀಳುವುದು, ವಾಹನ ಕೆಟ್ಟು ನಿಲ್ಲುವುದು ಸೇರಿ ವಿವಿಧ ಪರಿಸ್ಥಿತಿಯನ್ನು ನಿರ್ವಹಿಸಲು ಅನುಕೂಲವಾಗುವಂತೆ ಸಿಡ್ಯಾಕ್ ಸಂಸ್ಥೆ ಅಭಿವೃದ್ಧಿಪಡಿಸಿರುವ ಕೋಸಿಕೋಸ್ಟ್ ಎಟಿಸಿಎಸ್ ಅಪ್ಲಿಕೇಶನ್ ಅನ್ನು ಈ ವ್ಯವಸ್ಥೆ ಬಳಸಿಕೊಳ್ಳಲಿದೆ ಎಂದಿದ್ದಾರೆ.
ಹಿಂದಿನ ಸಂಚಾರ ನಿರ್ವಹಣಾ ವ್ಯವಸ್ಥೆಗಿಂತ ಭಿನ್ನವಾಗಿರುವ ಬಿಎಟಿಸಿಎಸ್ ಕ್ಯಾಮರಾಗಳ ಮಾಹಿತಿ ಆಧರಿಸಿ ರಸ್ತೆಯಲ್ಲಿನ ವಾಹನಗಳ ಸಾಂದ್ರತೆಯನ್ನು ತಿಳಿದು ವಿಶ್ಲೇಷಣೆ ಮಾಹಿತಿ ಸಿಗ್ನಲ್‌ಗೆ ಮಾಹಿತಿ ರವಾನಿಸುತ್ತದೆ. ಈ ಮಾಹಿತಿ ಆಧರಿಸಿ ಸಿಗ್ನಲ್‌ಗಳು ಕಾರ್ಯ ನಿರ್ವಹಿಸುವುದರಿಂದ ವಾಹನ ಸವಾರ/ ಚಾಲಕರು ಅನವಶ್ಯಕವಾಗಿ ಸಿಗ್ನಲ್‌ಗಳಲ್ಲಿ ಕಾಯುವುದು ತಪ್ಪುತ್ತದೆ. ಮೊದಲಿನಂತೆ ನಿಗದಿತ ಸಮಯ ಬರುವವರೆಗೂ ಸಿಗ್ನಲ್‌ನಲ್ಲಿ ಕಾಯಬೇಕಿಲ್ಲ. ಎಐ ಸಿಗ್ನಲ್‌ಗಳು ವಾಹನಗಳ ಸಾಂದ್ರತೆಯನ್ನು ವಿಶ್ಲೇಷಣೆ ಮಾಡಿಕೊಂಡು ಸಿಗ್ನಲ್ ನೀಡಲಿದೆ. ಇದರಿಂದ ಸವಾರರ ಪ್ರಯಾಣದ ಸಮಯ ಕಡಿಮೆ ಆಗುವುದಲ್ಲದೆ, ವಾಹನಗಳ ಇಂಧನ ದಕ್ಷತೆಯನ್ನು ಸುಧಾರಿಸುತ್ತದೆ ಎಂದು ಮಾಹಿತಿ ನೀಡಿದ್ದಾರೆ.
ಈಗಾಗಲೆ ಈ ಸಿಗ್ನಲ್‌ಗಳನ್ನು ಅಳವಡಿಸಿರುವ ಕಡೆಗಳಲ್ಲಿ ಉತ್ತಮ ಫಲಿತಾಂಶ ಬಂದಿದೆ. ಹೊಸ ಸಿಗ್ನಲ್‌ಗಳನ್ನು ಅಳವಡಿಸಿದ ಕಡೆಗಳಲ್ಲಿ ಶೇ.20 ವಾಹನ ಸವಾರ/ಚಾಲಕರ ಪ್ರಯಾಣದ ಅವಧಿ ತಗ್ಗಿದೆ. ಬೆಂಗಳೂರು, ಹೈದರಾಬಾದ್ ಸೇರಿ ಭಾರತದ 30ಕ್ಕೂ ಹೆಚ್ಚು ನಗರಗಳಲ್ಲಿ ಈ ಯೋಜನೆ ಯಶಸ್ವಿಯಾಗಿದ್ದು, ಶೇ.15 ಸಂಚಾರ ಸಿಕ್ಕು ತಗ್ಗಿಸಿದೆ ಎಂದು ಹೇಳಿದ್ದಾರೆ.
ಟಿಎಂಸಿಯಿಂದ ನಿಯಂತ್ರಣ
ಬಿಎಟಿಸಿಎಸ್ ಸಿಗ್ನಲ್‌ಗಳನ್ನು ‘ಟ್ರಾಫಿಕ್ ನಿರ್ವಹಣ ಕೇಂದ್ರ’ದಿಂದ (ಟಿಎಂಸಿ) ನಿರ್ವಹಿಸಲಾಗುತ್ತದೆ. ಪ್ರತಿಯೊಂದು ಸಿಗ್ನಲ್‌ನಲ್ಲಿ ಮಾನವಚಾಲಿತ, ಫಿಕ್ಸ್ ್ಡಸಿಗ್ನಲ್, ವಾಹನ ಸಂಖ್ಯೆ ಆಧಾರಿತ ಮತ್ತು ಬಿಎಟಿಸಿಎಸ್ ಮೂಡ್‌ನಲ್ಲಿ ನಿರ್ವಹಣೆ ಮಾಡಬಹುದು. ಯಾವ ಸಿಗ್ನಲ್ ಯಾವ ಮೂಡ್‌ನಲ್ಲಿ ನಿರ್ವಹಿಸಿದರೆ ಒಳಿತು ಎಂಬುದರ ಬಗ್ಗೆ ಅಧ್ಯಯನ ನಡೆಯುತ್ತಿದೆ. ಆದಷ್ಟು ಮಾವನಚಾಲಿತ ಸಿಗ್ನಲ್ ನಿರ್ವಹಣೆ ಕಡಿಮೆ ಮಾಡಲು ನಿರ್ಧರಿಸಲಾಗಿದೆ. ಇದಲ್ಲದೆ, ಎಲ್ಲ ಸಿಗ್ನಲ್‌ಗಳನ್ನು ಸಂಯೋಜನೆ ಮಾಡಿದ್ದು, ಏಕಕಾಲಕ್ಕೆ 6ರಿಂದ 8 ಸಿಗ್ನಲ್‌ಗಳನ್ನು ಗ್ರೀನ್ ಮಾಡಲು ಅವಕಾಶವಿದೆ ಎಂದು ಅನುಚೇತ್ ತಿಳಿಸಿದ್ದಾರೆ.
‘‘ಅಸ್ತ್ರ0 ’ ಅಪ್ಲಿಕೇಷನ್
ಬೆಂಗಳೂರು ನಗರ ಸಂಚಾರ ಪೊಲೀಸ್ ವತಿಯಿಂದ ‘ಅಸ್ತ್ರ0’ ಮೊಬೈಲ್ ಆ್ಯಪ್ ಹೊರತಂದಿದ್ದು, ನಗರದ ಸಂಚಾರ ಸಿಕ್ಕನ್ನು ನೈಜ ಸಮಯದಲ್ಲಿ ತಿಳಿದುಕೊಳ್ಳಬಹುದು. ವಾಹನಸವಾರ, ಚಾಲಕರು, ತಾವು ತಲುಪಬೇಕಾದ ಸ್ಥಳಕ್ಕೆ ಯಾವ ಮಾರ್ಗದಲ್ಲಿ ಸಂಚಾರ ಸಿಕ್ಕು ಕಡಿಮೆ ಇದೆ, ಯಾವ ಮಾರ್ಗ ಉತ್ತಮ ಎಂಬುದನ್ನು ನೈಜ ಸಮಯದಲ್ಲಿ ತಿಳಿದುಕೊಳ್ಳಬಹುದು. ಜತೆಗೆ ರಸ್ತೆ ಅಪಘಾತದ ಬಗ್ಗೆ ಮತ್ತು ಸಂಚಾರ ಉಲ್ಲಂಸುವ ವಾಹನಗಳ ಬಗ್ಗೆ ವರದಿ ಮಾಡಬಹುದು. ತಮ್ಮ ವಾಹನಗಳ ಮೇಲೆ ಸಂಚಾರ ನಿಯಮ ಉಲ್ಲಂಘನೆ ದಂಡ ಇದೆಯೇ ಎಂಬುದನ್ನು ವೀಕ್ಷಣೆ ಸಹ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಅನುಚೇತ್ ಹೇಳಿದರು.
ಬಿಎಟಿಸಿಎಸ್ ಅನುಕೂಲ
* ಬಿಎಟಿಸಿಎಸ್ ಬಳಕೆ ಹಿಂದಿನ ಟ್ರಾಫಿಕ್ ನಿರ್ವಹಣೆಗಿಂತ ವಿಭಿನ್ನ
* ಸಂಚಾರ ಸಾಂದ್ರತೆ ಆಧರಿಸಿ ಸಿಗ್ನಲ್ ಸಮಯ ಹೊಂದಾಣಿಕೆ
* ಜಂಕ್ಷನ್‌ಗಳಲ್ಲಿ ಸಂಚಾರ ಸಿಕ್ಕು ಇಳಿಕೆಯಾಗಿ ಸುಗಮ ಸಂಚಾರ
* ಕೇಂದ್ರೀಕೃತ ನಿಯಂತ್ರಣ ಕೊಠಡಿಯಿಂದ ಟ್ರಾಫಿಕ್ ಸಿಗ್ನಲ್‌ಗಳ ನಿಗಾ
* ಅಂಬುಲೆನ್ಸ್ ಸೇರಿ ತುರ್ತು ಸೇವೆಗಳ ವಾಹನಗಳ ಸಂಚಾರಕ್ಕೆ ಆದ್ಯತೆ