ಜನರ ದೇಹದ ತಾಪಮಾನ ತಿಳಿಸುವ ಕನ್ನಡಕ; ಕ್ಷಣಾರ್ಧದಲ್ಲಿ ಜ್ವರಪೀಡಿತರನ್ನು ಗುರುತಿಸುತ್ತೆ!

sun glasses
Published on

ಹ್ಯಾಂಗ್​ಝೌ: ಕರೊನಾ ಸೋಂಕಿತರು ಅಕ್ಕಪಕ್ಕದಲ್ಲಿರುವುದನ್ನು ತಿಳಿಸಲು ಭಾರತ ಸರ್ಕಾರ ಆರೋಗ್ಯ ಸೇತು ಮೊಬೈಲ್​ ಆ್ಯಪ್​ ಅನ್ನು ಬಿಡುಗಡೆ ಮಾಡಿದೆ. ಇದರ ಅಳವಡಿಕೆಯನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತನೆಯನ್ನೂ ನಡೆಸಿದೆ. ಇದರ ನಡುವೆ ಕರೊನಾದ ಉಗಮ ಸ್ಥಾನ ಚೀನಾದಲ್ಲಿ ದೂರದಿಂದಲೇ ಜನರ ದೇಹದ ತಾಪಮಾನ ತಿಳಿಸುವಂಥ ಕನ್ನಡಕಗಳನ್ನು ಆವಿಷ್ಕರಿಸಲಾಗಿದೆ.

ಕೃತಕ ಬುದ್ಧಿಮತ್ತೆ (ಎಐ) ಆಧಾರಿತವಾದ ಈ ಕನ್ನಡಕಗಳು ವ್ಯಕ್ತಿಯನ್ನು ನೋಡುತ್ತಲೇ ಆತನ ದೇಹದ ತಾಪಮಾನವನ್ನು ತಿಳಿಸುತ್ತವೆ. ಇದರಿಂದಾಗಿ ಜ್ವರಪೀಡಿತರಾಗಿರುವವರನ್ನು ಗುರುತಿಸಿ, ತಕ್ಷಣವೇ ಕ್ವಾರಂಟೈನ್​ಗೆ ಒಳಪಡಿಸಲು ಅನುಕೂಲವಾಗಲಿದೆ ಎನ್ನಲಾಗಿದೆ.

ಚೀನಾದ ರಾಕಿಡ್​ ಕಾರ್ಪೋರೇಷನ್​ ಎಂಬ ಸಂಸ್ಥೆ ಈ ಕನ್ನಡಕಗಳನ್ನು ಆವಿಷ್ಕರಿಸಿದ್ದು, ವಿವಿಧ ಕಚೇರಿಗಳ ಭದ್ರತಾ ಸಿಬ್ಬಂದಿಗೆ ವಿತರಿಸಿದೆ. ಪೂರ್ವ ಚೀನಾದ ಹ್ಯಾಂಗ್​ಝೌನ ಕ್ಸಿಕ್ಸಿ ವೆಟ್​ಲ್ಯಾಂಡ್​ನ ಭಾಗವಾದ ಹಾಂಗ್​ಯುವಾನ್​ ಪಾರ್ಕ್​ನಲ್ಲಿರುವ ಕಚೇರಿಗಳ ಭದ್ರತಾ ಸಿಬ್ಬಂದಿ ಈ ಕನ್ನಡಕಗಳನ್ನು ಧರಿಸಿಕೊಂಡು, ಉದ್ಯೋಗಿಗಳ ದೈಹಿಕ ತಾಪಮಾನವನ್ನು ಗಮನಿಸುತ್ತಿದ್ದಾರೆ.

ವ್ಯಕ್ತಿಯು 1 ಮೀಟರ್​ ದೂರದಲ್ಲಿರುವಾಗಲೇ ಈ ಕನ್ನಡಕಗಳು ಆ ವ್ಯಕ್ತಿಯ ದೇಹದ ತಾಪಮಾನದ ಬಗ್ಗೆ ನಿಖರವಾಗಿ ಮಾಹಿತಿ ಒದಗಿಸುತ್ತಿವೆ. ಈ ಕನ್ನಡಕ ಧರಿಸಿರುವವರು 2 ನಿಮಿಷದಲ್ಲಿ ಏಕಕಾಲಕ್ಕೆ ನೂರಾರು ಮಂದಿಯ ದೇಹದ ತಾಪಮಾನವನ್ನು ಗಮನಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರಿಂದಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ವಿಷಯದಲ್ಲಿ ಉದ್ದನೆ ಸರತಿಸಾಲುಗಳು ಆಗದಂತೆ ತಡೆಯಲು ಅನುಕೂಲವಾಗುತ್ತಿದೆ ಎಂದು ಕಂಪನಿ ಪ್ರತಿಪಾದಿಸಿದೆ.

100 ಗ್ರಾಂ ತೂಕ: ಈ ಕನ್ನಡಕಗಳಿಗೆ ಕ್ಯಾಮರಾ ಮತ್ತು ಕೇಬಲ್​ಗಳನ್ನು ಜೋಡಣೆ ಮಾಡಲಾಗಿರುತ್ತದೆ. ಆದರೂ ಸಾಮಾನ್ಯ ಸನ್​ಗ್ಲಾಸ್​ನಂತೆ ಗೋಚರಿಸುವ ಇವು ಕೇವಲ 100 ಗ್ರಾಂ ಭಾರವಾಗಿರುತ್ತವೆ. ಯಾರಿಗಾದರೂ ಜ್ವರ ಇದ್ದರೆ ತಕ್ಷಣವೆ ಗುರುತಿಸುವ ಈ ಕನ್ನಡಕಗಳು ಅವರ ವಿವರಗಳನ್ನು ಡಿಜಿಟಲ್​ ಮಾದರಿಯಲ್ಲಿ ದಾಖಲಿಸಿಕೊಳ್ಳುವ ಜತೆಗೆ ಸ್ವಯಂಚಾಲಿತವಾಗಿ ಸೂಚನೆಯನ್ನೂ ನೀಡುತ್ತವೆ. ಈ ಕನ್ನಡಕಗಳು ರಿಯಲ್​ ಟೈಮ್​ ಫೇಸ್​ ರೆಕಗ್ನಿಷನ್​ ಸೌಲಭ್ಯವನ್ನು ಹೊಂದಿರುತ್ತವೆ.

ಹೆದ್ದಾರಿಗಳಲ್ಲಿ ಭದ್ರತಾ ಕಾರ್ಯದಲ್ಲಿ ನಿಯೋಜನೆಗೊಂಡಿರುವ ಪೊಲೀಸರು, ಸಾರ್ವಜನಿಕ ಭದ್ರತಾ ಬ್ಯೂರೋದ ಸಿಬ್ಬಂದಿ, ಸಂಚಾರ ಪೊಲೀಸರಿಗೂ ಈ ಕನ್ನಡಕಗಳನ್ನು ನೀಡಲಾಗಿದ್ದು, 2020ರ ಜನವರಿಯಿಂದಲೂ ಇವನ್ನು ಬಳಸುತ್ತಿರುವುದಾಗಿ ರಾಕಿಡ್​ ಕಾರ್ಪೋರೇಷನ್​ ಹೇಳಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net