ಅಹಮದಾಬಾದ್​ಗೆ ಸೂಪರ್ ಸ್ಪ್ರೆಡರ್ಸ್ ಕಂಟಕ!

page 9 2
Published on

ಅಹಮದಾಬಾದ್: ಗುಜರಾತ್​ನ ಅಹಮದಾಬಾದ್​ನಲ್ಲಿ ತರಕಾರಿ, ಹಣ್ಣು ಮಾರಾಟಗಾರರು ಹಾಗೂ ಅಂಗಡಿ ವ್ಯಾಪಾರಸ್ಥರಿಗೆ ಕಳೆದ ಮೇ 7 ರಿಂದ 14ರವರೆಗೆ ನಡೆಸಿದ ಬೃಹತ್ ಕರೊನಾ ಪರೀಕ್ಷೆ ಅಭಿಯಾನದ ವರದಿಯಲ್ಲಿ 700 ಜನರಿಗೆ ಸೋಂಕು ದೃಢಪಟ್ಟಿರುವುದು ಬಹಿರಂಗವಾಗಿದೆ. ಇವರೆಲ್ಲರೂ ಈಗಾಗಲೇ ನೂರಾರು ಜನರ ಜತೆಗೆ ವ್ಯವಹಾರ ನಡೆಸಿರುವುದರಿಂದ ಆತಂಕ ಮತ್ತಷ್ಟು ಉಲ್ಬಣವಾಗಿದೆ.

ತರಕಾರಿ, ಹಣ್ಣು ಮಾರಾಟಗಾರರಿಂದ ದೊಡ್ಡ ಪ್ರಮಾಣದಲ್ಲಿ ಜನರಿಗೆ ಸೋಂಕು ಪಸರಿಸುವ ಸಾಧ್ಯತೆ ಇರುವುದರಿಂದ ಇವರನ್ನು ಸೂಪರ್ ಸ್ಪ್ರೆಡರ್ಸ್ ಎಂದು ಕರೆಯಲಾಗಿದೆ. ಇದರಲ್ಲಿ ದಿನಸಿ ಅಂಗಡಿ ವರ್ತಕರು, ಹಾಲು ಮಾರಾಟಗಾರರು, ಪೆಟ್ರೋಲ್ ಬಂಕ್ ಕೆಲಸಗಾರರು, ಕಸ ಶೇಖರಿಸುವವರು ಸೇರಿ ಅನೇಕ ವೃತ್ತಿಯ ಜನರು ಸೇರಿದ್ದಾರೆ. ಇವರ ಕೆಲಸದ ಸ್ವರೂಪದಿಂದಾಗಿ ಇವರು ಹೆಚ್ಚು ಜನರಿಗೆ ಸೋಂಕು ಪಸರಿಸಿರುವ ಸಾಧ್ಯತೆ ಹೆಚ್ಚಿರುತ್ತದೆ.

ಅಹಮದಾಬಾದ್ ಅಧಿಕಾರಿಗಳು ಮೇ 7 ರಿಂದ 14ರವರೆಗೆ ಹಾಲು, ಔಷಧ ಮಳಿಗೆಗಳ ವ್ಯಾಪಾರವನ್ನು ಹೊರತುಪಡಿಸಿ ಎಲ್ಲ ರೀತಿಯ ವಹಿವಾಟನ್ನು ಸ್ಥಗಿತಗೊಳಿಸಿ ಬೃಹತ್ ಪ್ರಮಾಣದಲ್ಲಿ ಕರೊನಾ ಪರೀಕ್ಷೆ ನಡೆಸಿದ್ದರು. ಸುಮಾರು 33,500 ಜನರನ್ನು ಸ್ಕ್ರೀನಿಂಗ್ ತಪಾಸಣೆಗೆ ಒಳಪಡಿಸಲಾಗಿದ್ದು, 12,500 ಜನರಿಗೆ ಕರೊನಾ ವೈದ್ಯಕೀಯ ಪರೀಕ್ಷೆ ನಡೆಸಲಾಗಿತ್ತು. ಇದರಲ್ಲಿ 700 ಜನರಿಗೆ ಸೋಂಕು ದೃಢಪಟ್ಟಿದ್ದು, ಅವರನ್ನೆಲ್ಲ ಐಸೋಲೇಷನ್​ಗೆ ಒಳಪಡಿಸಲಾಗಿದೆ ಎಂದು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಜೀವ್ ಗುಪ್ತಾ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಏಪ್ರಿಲ್ 20 ರಂದು ನಡೆಸಿದ್ದ ವೈದ್ಯಕೀಯ ಪರೀಕ್ಷೆ ಅಭಿಯಾನದಲ್ಲಿ ಸುಮಾರು 350 ಸೂಪರ್ ಸ್ಪ್ರೆಡರ್​ಗಳಿಗೆ ಸೋಂಕು ತಗುಲಿದ್ದು ಪತ್ತೆಯಾಗಿತ್ತು. ಈ ಹಿನ್ನೆಲೆ ಅಧಿಕ ಪ್ರಮಾಣದಲ್ಲಿ ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದ್ದು, ಸೂಪರ್ ಸ್ಪ್ರೆಡರ್​ಗಳಿಂದ ಸೋಂಕು ಇತರ ಜನರಿಗೆ ಪಸರಿಸುತ್ತಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಲಾಗುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net