

ಬೆಂಗಳೂರು: ಬೆಂಗಳೂರು ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಎ.ಎಚ್.ಆನಂದ್ ಅವರ ಮನೆಗೆ ಪಕ್ಷದ ಅಭ್ಯರ್ಥಿ ಅ. ದೇವೇಗೌಡ ಅವರೊಂದಿಗೆ ಮಾಜಿ ಡಿಸಿಎಂ ಸಿ.ಎನ್. ಅಶ್ವತ್ಥನಾರಾಯಣ ಮತ್ತಿತರ ಮುಖಂಡರು ಭೇಟಿ ಕೊಟ್ಟು ಸಮಾಲೋಚನೆ ನಡೆಸಿದರು.
ಈ ಬಾರಿಯ ಚುನಾವಣೆಯಲ್ಲಿ ಕಣಕ್ಕಿಳಿಯಲು ಆನಂದ್ ಅಪೇಕ್ಷೆ ಪಟ್ಟು ನೋಂದಣಿ ಪ್ರಕ್ರಿಯೆ ನಡೆಸಿದ್ದರು. ಆದರೆ, ಅಭ್ಯರ್ಥಿ ಆಯ್ಕೆ ವೇಳೆ ಪಕ್ಷವು ಅ.ದೇವೇಗೌಡರನ್ನೇ ಪುನಃ ಕಣಕ್ಕಿಳಿಸಲು ತೀರ್ಮಾನಿಸಿತು. ಈ ಹಿನ್ನೆಲೆಯಲ್ಲಿ ಆನಂದ್ ಚುನಾವಣೆ ಚಟುವಟಿಕೆಯಿಂದ ದೂರು ಉಳಿದಿದ್ದರು. ಇದನ್ನು ಮನಗಂಡ ಪಕ್ಷವು ಅವರ ಮನವೊಲಿಕೆ ಕಾರ್ಯ ನಡೆಸಿತು.
ಚುನಾವಣೆಗೆ ಬಾಕಿ ಇರುವ ದಿನಗಳಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿ ಪರವಾಗಿ ಕೆಲಸ ಮಾಡುವಂತೆ ಪಕ್ಷದ ಮುಖಂಡರು ಆನಂದ್ ಅವರನ್ನು ಕೋರಿತು.
ಇದೇ ವೇಳೆ ಪಕ್ಷದ ರಾಜ್ಯ ಅಧ್ಯಕ್ಷರಾದ ಬಿ. ವೈ .ವಿಜಯೇಂದ್ರ ಆನಂದ್‌ಗೆ ದೂರವಾಣಿ ಕರೆ ಮಾಡಿ, ನೀವು ಮತ್ತು ನಿಮ್ಮ ತಂಡ ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಬೇಕೆಂದು ಸೂಚನೆಯನ್ನು ನೀಡಿದ್ದಾರೆ.
ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ನನ್ನ ಜತೆಯಲ್ಲಿ ನೊಂದಾವಣೆ ಕಾರ್ಯದಲ್ಲಿ ಭಾಗವಹಿಸಿದ ಎಲ್ಲರೂ ಬಿಜೆಪಿ ಅಭ್ಯರ್ಥಿ ಅ.ದೇವೇಗೌಡ ಕ್ರಮ ಸಂಖ್ಯೆ ಒಂದು ಮೊದಲನೇ ಪ್ರಶಸ್ತ್ಯದ ಮತ ನೀಡಬೇಕೆಂದು ಎಲ್ಲರಲ್ಲೂ ಮನವಿ ಮಾಡುತ್ತೇನೆಂದು ಆನಂದ್ ಇದೇ ವೇಳೆ ತಿಳಿಸಿದ್ದಾರೆ.