ಈರುಳ್ಳಿ ಬೆಳೆ ಪರಿಶೀಲಿಸಿದ ಕೃಷಿ ವಿಜ್ಞಾನಿ, ಅಧಿಕಾರಿಗಳು

14-GPT-3
Published on


ಚಾಮರಾಜನಗರ : ತೋಟಗಾರಿಕೆ ಇಲಾಖೆ ಅಧಿಕಾರಿಗಳು ಹಾಗೂ ಕೃಷಿ ವಿಜ್ಞಾನಿಗಳು ಜಂಟಿಯಾಗಿ ಗುಂಡ್ಲುಪೇಟೆ ತಾಲೂಕಿನ ಈರುಳ್ಳಿ ಬೆಳೆಗಾರರ ಜಮೀನಿಗೆ ಭೇಟಿ ನೀಡಿ ಕಳಪೆ ಬಿತ್ತನೆ ಹಾಗೂ ರೋಗಗಳಿಂದ ಬಾಧಿಸುತ್ತಿದ್ದ ಈರುಳ್ಳಿ ಬೆಳೆಯನ್ನು ಪರಿಶೀಲಿಸಿದರು.


ಈರುಳ್ಳಿ ಬೆಳೆಗೆ ರೋಗಬಾಧೆ ಎಂಬ ಶೀರ್ಷಿಕೆಯಡಿ ವಿಜಯವಾಣಿ ಡಿ.11ರಂದು ವಿಶೇಷ ವರದಿ ಪ್ರಕಟಿಸಿತ್ತು. ಈ ವರದಿ ಬೆನ್ನಲ್ಲೇ ಚಾಮರಾಜನಗರ ಕೃಷಿ ವಿಜ್ಞಾನ ಕೇಂದ್ರದ ರೋಗ ತಜ್ಞ ಡಾ.ಪಂಪನಗೌಡರ್ ಹಾಗೂ ಕೃಷಿ ಹವಾಮಾನ ತಜ್ಞ ಎಚ್.ಪಿ. ರಜತ್ ಜಂಟಿಯಾಗಿ ಹಂಗಳ, ಬೇರಂಬಾಡಿ ಸೇರಿದಂತೆ ಸುತ್ತಮುತ್ತಲ ಗ್ರಾಮದಲ್ಲಿ ಈರುಳ್ಳಿ ಬೆಳೆದಿರುವ ಬೆಳೆಗಾರರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದರು. ಜತೆಗೆ ರೋಗ ನಿಯಂತ್ರಣಕ್ಕೆ ಅನುಸರಿಸಬೇಕಾದ ಕ್ರಮಗಳ ಬಗ್ಗೆ ರೈತರಿಗೆ ಮಾರ್ಗದರ್ಶನ ನೀಡಿದರು.


ಈರುಳ್ಳಿಗೆ ತುಂತುರು ನೀರಾವರಿ ಪದ್ಧತಿಯನ್ನು ಅಳವಡಿಸಿದ್ದು ಸದ್ಯ 30-40 ದಿನಗಳ ಸಸಿಗಳಲ್ಲಿ ಸಸಿಗಳ ರಸಹೀರುವ ಕೀಟಬಾಧೆ ಹಾಗೂ ಎಲೆಚುಕ್ಕೆ ರೋಗದ ಜತೆಗೆ ಚಿಬ್ಬುರೋಗ ಇರುವುದನ್ನು ಪತ್ತೆಹಚ್ಚಿದ್ದಾರೆ. ಲಘು ಪೋಷಕಾಂಶದ ಕೊರತೆಯಿಂದ ರೋಗ ಕಾಣಿಸಿಕೊಳ್ಳುತ್ತಿರುವುದರಿಂದ ಇದರ ನಿವಾರಣೆಗೆ ಇಮಿಡೋಕ್ಲೋಪೀಡಿಯಾ, ಕಾರ್ಬನ್ ಡೈಜಂ ಹಾಗೂ ಮ್ಯಾಂಕೋಜೆಬ್ ಶಿಲೀಂಧ್ರನಾಶಕ ಬಳಕೆ ಬಗ್ಗೆ ಶಿಫಾರಸು ಮಾಡಿದ್ದಾರೆ.
ಹೆಚ್ಚಿನ ವಿವರಗಳಿಗೆ ಸ್ಥಳೀಯ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಬಿ.ಭಾಸ್ಕರ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net