

ಪಂಚನಹಳ್ಳಿ: ಶರಣರಿಗೂ ಮತ್ತು ಕೃಷಿ ಕಾಯಕಕ್ಕೂ ಅವಿನಾಭಾವ ಸಂಬಂಧವಿತ್ತು. ಶರಣರ ಕಾಲದಲ್ಲಿ ಕೃಷಿಯೇ ಪ್ರಧಾನ ವೃತ್ತಿಯಾಗಿತ್ತು ಎಂದು ಸಾಹಿತಿ ಟಿ.ದಿನೇಶ್ ಹೇಳಿದರು.
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಕಡೂರು ತಾಲೂಕು ಘಟಕದಿಂದ ಭಾನುವಾರ ಮುತ್ತಾಣಗೆರೆ ಗ್ರಾಮದಲ್ಲಿ ಆಯೋಜಿಸಿದ್ದ ಶ್ರಾವಣ ಸಂಜೆ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಿದರು.
ಶರಣರು ಅತ್ಯಂತ ಶ್ರದ್ಧೆಯಿಂದ ಕೃಷಿ ಕಾಯಕದಲ್ಲಿ ತೊಡಗುತ್ತಿದ್ದರು. ಆ ಕಾಲದಲ್ಲಿ ಮಳೆಯಾಧಾರಿತ ಕೃಷಿ ಚಟುವಟಿಕೆ ಹೆಚ್ಚು ಪ್ರಚಲಿತವಾಗಿತ್ತು. ಆದರೆ ಇದೀಗ ಹುಟ್ಟಿಕೊಂಡಿರುವ ಬೋರ್ವೆಲ್ ಸಂಸ್ಕೃತಿ ರೈತರನ್ನು ಹಾಳು ಮಾಡುತ್ತಿದೆ. ಅಮೃತವಾಗಿದ್ದ ಹಾಲು ನಂಜಾಗುತ್ತಿರುವುದು ವಿಪರ್ಯಾಸ ಎಂದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂ.ಟಿ.ರಂಗನಾಥ ಸ್ವಾಮಿ, ಶರಣರ ಅನುಭವದ ನುಡಿಗಳು ಸೂರ್ಯ- ಚಂದ್ರರು ಇರುವವರೆಗೂ ಇರುತ್ತವೆ. ಇಡೀ ಜಗತ್ತು ವೈಜ್ಞಾನಿಕವಾಗಿ ಅಪಾರ ಸಾಧನೆ ಮಾಡುತ್ತಿದೆ. ಆದರೆ ಮಾನವೀಯ ಮೌಲ್ಯಗಳು ನೆಲಕಚ್ಚುತ್ತಿವೆ. ಇಂತಹ ಸಂದರ್ಭದಲ್ಲಿ ಶರಣ ಸಂದೇಶ ಸಾರುವ ಕಾರ್ಯಕ್ರಮಗಳು ಹೆಚ್ಚು ಪ್ರಸ್ತುತವೆನಿಸುತ್ತವೆ ಎಂದು ಹೇಳಿದರು.
ಶಿಕ್ಷಕ ಎಂ.ಆರ್.ಪ್ರಕಾಶ್ ಮಾತನಾಡಿ, ಮುಂದಿನ ದಿನಗಳಲ್ಲಿ ಜನರಿಂದ ವಂತಿಕೆ ರೂಪದಲ್ಲಿ ಪಡೆದ ಹಣವನ್ನು ಬ್ಯಾಂಕ್ನಲ್ಲಿ ಠೇವಣಿಯಿಟ್ಟು, ಅದರಿಂದ ಬರುವ ಬಡ್ಡಿ ಹಣದಲ್ಲಿ ಶ್ರಾವಣ ಸಂಜೆ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕು ರೈತ ಸಂಘದ ಅಧ್ಯಕ್ಷ ಎಂ.ನಿರಂಜನಮೂರ್ತಿ ಅಧ್ಯಕ್ಷತೆ ವಹಿಸಿದ್ದರು. ತಾಲೂಕು ಅಧ್ಯಕ್ಷ ಕೆ.ವಿರೂಪಾಕ್ಷಪ್ಪ, ಹೋಬಳಿ ಅಧ್ಯಕ್ಷೆ ಪಿ.ಗೀತಾ, ಕಲಾವಿದರಾದ ಕೆ.ಲೋಕೇಶ್, ಎಂ.ನಾಗರಾಜ್ ಇತರರಿದ್ದರು.