ಶಿವಮೊಗ್ಗದಲ್ಲಿ 18ರಿಂದ ಕೃಷಿ, ತೋಟಗಾರಿಕೆ ಮೇಳ

krishi
ಕೃಷಿ ಮೇಳದ ಅಂಗವಾಗಿ ಭರದಿಂದ ಸಾಗುತ್ತಿರುವ ಸ್ಟಾಲ್ ಹಾಗೂ ವೇದಿಕೆ ನಿರ್ಮಾಣ ಕಾರ್ಯ.
Published on

ಶಿವಮೊಗ್ಗ: ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯವು ಕೃಷಿ ಹಾಗೂ ತೋಟಗಾರಿಕೆ ಮೇಳಕ್ಕೆ ಸಜ್ಜಾಗುತ್ತಿದೆ. ನವುಲೆ ಕೃಷಿ ಮಹಾವಿದ್ಯಾಲಯದ ಆವರಣದಲ್ಲಿ ಅ.18ರಿಂದ 21ರವರೆಗೆ ಮೇಳ ನಡೆಯಲಿದೆ.

‘ಪೌಷ್ಟಿಕ ಆಹಾರಕ್ಕಾಗಿ ವಿಕಸಿತ ಕೃಷಿ’ ಎಂಬ ಧೈಯವಾಕ್ಯದೊಂದಿಗೆ ಈ ಬಾರಿಯ ಮೇಳ ಜರುಗಲಿದೆ. ಈ ಹಿಂದಿನ ಮೇಳಗಳಿಗೆ ಜನರು ಹಾಗೂ ರೈತ ಸಮುದಾಯದಿಂದ ದೊರೆತ ಬೆಂಬಲ ಗಮನಿಸಿ ಈ ಬಾರಿ ಇನ್ನೊಂದಿಷ್ಟು ಹೊಸತನ ಅಳವಡಿಸಿಕೊಳ್ಳಲಾಗುತ್ತಿದೆ ಎಂದು ವಿವಿ ಕುಲಪತಿ ಡಾ. ಆರ್.ಸಿ.ಜಗದೀಶ್ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಪೋಷಕಾಂಶ ಭರಿತ ಕೃಷಿ ಉತ್ಪಾದನೆ ಮತ್ತು ಗುಣಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಕೃಷಿ ಮೇಳದಲ್ಲಿ ಒತ್ತು ನೀಡಲಾಗುವುದು. ಸೇವಿಸುವ ಆಹಾರವು ಪೌಷ್ಟಿಕವಾಗಿರಬೇಕು. ನಮ್ಮ ದೇಹಕ್ಕೆ ಅಗತ್ಯವಿರುವ ಎಲ್ಲ ಪೋಷಕಾಂಶಗಳು ಸಿಗುವಂತಾಗಬೇಕು. ಸಮತೋಲನ ಕಾಯ್ದುಕೊಳ್ಳಬೇಕು. ಈ ಬಗ್ಗೆ ಮೇಳದಲ್ಲಿ ಬೆಳಕು ಚೆಲ್ಲಲಾಗುವುದು. ಕೃಷಿಯಲ್ಲಿ ನವೋದ್ಯಮ ಸ್ಥಾಪನೆ ಮಾಡಲು ಬಯಸುವವರಿಗೆ ಅಗತ್ಯ ಮಾಹಿತಿ ನೀಡಲು ಕೆಲವು ಸ್ಟಾಲ್‌ಗಳನ್ನು ಮೀಸಲಿರಿಸಲಾಗಿದೆ ಎಂದರು.
ಪ್ರಸ್ತುತ ಸಂದರ್ಭದಲ್ಲಿ ರಾಗಿ, ಜೋಳ, ಸಿರಿಧಾನ್ಯಗಳು, ದ್ವಿದಳ ಧಾನ್ಯಗಳನ್ನು ಹೆಚ್ಚಾಗಿ ಬೆಳೆಯುವುದರಿಂದ ವಿಕಸಿತ ಕೃಷಿಯನ್ನು ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂಬ ವಿಚಾರವನ್ನು ಮೇಳದ ಮೂಲಕ ಕೃಷಿಕರಿಗೆ ಮನದಟ್ಟು ಮಾಡಲಾಗುವುದು ಎಂದು ಹೇಳಿದರು.
ವಿವಿ ವಿಸ್ತರಣಾ ನಿರ್ದೇಶಕ ಡಾ. ಕೆ.ಟಿ.ಗುರುಮೂರ್ತಿ, ಶಿಕ್ಷಣ ನಿರ್ದೇಶಕ ಡಾ. ಹೇಮ್ಲಾ ನಾಯ್ಕ, ಕೃಷಿ ಡೀನ್ ಡಾ. ಡಿ.ತಿಪ್ಪೇಶ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net