ಹೊಸ ಕೃಷಿ ಕಾಯ್ದೆ ಐಚ್ಛಿಕ: ಹಳೇ ವ್ಯವಸ್ಥೆಯೂ ಮುಂದುವರಿಕೆ, ಆಯ್ಕೆ ರೈತರಿಗೆ ಸೇರಿದ್ದು...

Lead
Published on
  • ಕೃಷಿ ಬಿಕ್ಕಟ್ಟಿಗೆ ಮೋದಿ ಸೂತ್ರ | ಲೋಕಸಭೆಯಲ್ಲಿ ಪ್ರಕಟಣೆ

ನವದೆಹಲಿ: ಕೃಷಿ ಕ್ಷೇತ್ರದ ಸುಧಾರಣೆಗಾಗಿ ಜಾರಿಗೊಳಿಸಿ ರುವ ಹೊಸ 3 ಕಾನೂನುಗಳಿಂದ ಹಳೆಯ ಮಾರುಕಟ್ಟೆ ವ್ಯವಸ್ಥೆಯ ಮೇಲೆ ಯಾವುದೇ ಪರಿಣಾಮ ಉಂಟಾಗದು ಎಂದಿರುವ ಪ್ರಧಾನಿ ನರೇಂದ್ರ ಮೋದಿ, ಹಳೆಯದೋ ಅಥವಾ ಹೊಸತೋ ಎಂಬ ಆಯ್ಕೆ ರೈತರಿಗೆ ಬಿಟ್ಟಿದ್ದೆಂದು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ಬಿಕ್ಕಟ್ಟು ಪರಿಹಾರದ ನಿಟ್ಟಿನಲ್ಲಿ ಹೊಸ ಸೂತ್ರ ಮುಂದಿಟ್ಟಿದ್ದಾರೆ. ಬುಧವಾರ ಲೋಕಸಭೆಯಲ್ಲಿ ರಾಷ್ಟ್ರಪತಿಯವರ ಭಾಷಣಕ್ಕೆ ವಂದನಾ ನಿರ್ಣಯದ ಮೇಲೆ 90 ನಿಮಿಷ ಮಾತನಾಡಿದ ಅವರು ಭಾರತಕ್ಕೆ ಕೃಷಿ ಕಾನೂನುಗಳ ಅಗತ್ಯ ಏಕೆಂಬುದನ್ನು ನಿರೂಪಿಸಿದರು. ‘ಈ ಸದನ, ನಮ್ಮ ಸರ್ಕಾರ ಮತ್ತು ನಮಗೆಲ್ಲರಿಗೂ ಮೂರು ಕೃಷಿ ಕಾನೂನುಗಳ ವಿಚಾರವಾಗಿ ಧ್ವನಿ ಎತ್ತಿದ ರೈತರ ಬಗ್ಗೆ ಗೌರವವಿದೆ. ನಮ್ಮ ಸಂಪುಟದ ಉನ್ನತ ಸಚಿವರೆಲ್ಲರೂ ಪ್ರತಿಭಟನಾ ನಿರತ ರೈತರ ಜತೆಗೆ ಮಾತುಕತೆ ನಡೆಸುತ್ತಲೇ ಬಂದಿದ್ದಾರೆ. ರೈತರ ಬಗ್ಗೆ ನಮಗೆ ಅಪಾರ ಗೌರವವಿದೆ. ಹೊಸ ಕಾನೂನುಗಳಲ್ಲಿ ಯಾವುದೇ ಲೋಪ ದೋಷಗಳಿದ್ದರೂ, ಆ ಬಗ್ಗೆ ಚರ್ಚೆ ನಡೆಸುವುದಕ್ಕೆ ಮುಕ್ತ ಸ್ವಾಗತವಿದೆ. ಅಷ್ಟೇ ಅಲ್ಲ, ಆ ಲೋಪದೋಷ ಪರಿಷ್ಕರಣೆಗೂ ಸರ್ಕಾರ ಕ್ರಮ ತೆಗೆದುಕೊಳ್ಳುತ್ತದೆ’ ಎಂದರು.

ಸ್ಥಗಿತವಾಗಿಲ್ಲ: ಕೃಷಿ ಕಾನೂನು ಜಾರಿಯಾದ ನಂತರದಲ್ಲಿ ಯಾವುದೇ ಕೃಷಿ ಮಂಡಿ ಮುಚ್ಚಲಾಗಿಲ್ಲ. ಅಂತೆಯೇ ಕನಿಷ್ಠ ಬೆಂಬಲ ಬೆಲೆ (ಎಂಎಸ್​ಪಿ)ಯನ್ನೂ ಸ್ಥಗಿತಗೊಳಿಸಲಾಗಿಲ್ಲ. ಬದಲು ಎಂಎಸ್​ಪಿಯನ್ನು ಹೆಚ್ಚಿಸಲಾಗಿದೆ. ಈ ವಾಸ್ತವಾಂಶಗಳನ್ನು ಯಾರಿಂದಲೂ ನಿರಾಕರಿಸಲಾಗದು ಮತ್ತು ನಿರ್ಲಕ್ಷಿಸಲೂ ಆಗದು ಎಂದು ಮೋದಿ ಪುನರುಚ್ಚರಿಸಿದರು. ಪ್ರಧಾನಿ ಭಾಷಣವನ್ನು ಧಿಕ್ಕರಿಸಿ ಕಾಂಗ್ರೆಸ್ ಸದಸ್ಯರು ಸಭಾತ್ಯಾಗ ಮಾಡಿದರು.

ಸತ್ಯ ಅರಗಿಸಿಕೊಳ್ಳಲಾಗುತ್ತಿಲ್ಲ: ಸಂಸತ್ ಕಲಾಪ ನಡೆಸಲು ಬಿಡದೆ ಇರುವವರೇ ರೈತರನ್ನು ‘ದಾರಿ ತಪ್ಪಿಸುವ’ ಕೆಲಸವನ್ನು ಪೂರ್ವಯೋಜಿತ ಕಾರ್ಯತಂತ್ರದ ಮೂಲಕ ಮಾಡುತ್ತಿದ್ದಾರೆ ಎಂಬುದು ಜಗತ್ತಿಗೇ ಗೊತ್ತಿದೆ. ಜನರಿಗೆ ಸತ್ಯದ ಅರಿವಾಗುತ್ತಿದೆ ಎಂಬ ವಿಷಯವನ್ನು ಇವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ಅವರ ಆಟಗಳೇನೇ ಇದ್ದರೂ, ಅವುಗಳ ಮೂಲಕ ಜನರ ವಿಶ್ವಾಸ ಗೆಲ್ಲಲಾಗದೆಂದೂ ಮೋದಿ ವಿಪಕ್ಷಗಳಿಗೆ ಟಾಂಗ್ ನೀಡಿದರು.

ಆಯ್ಕೆಗೆ ಅವಕಾಶ: ಕೃಷಿ ಕಾನೂನು ವಿಚಾರವಾಗಿ ಏರ್ಪಟ್ಟಿರುವ ಬಿಕ್ಕಟ್ಟನ್ನು ಪರಿಹರಿಸುವ ಉದ್ದೇಶವನ್ನು ಸ್ಪಷ್ಟಪಡಿಸಿದ ಮೋದಿ, ಭಾರತದ ಸಂಸ್ಕೃತಿ, ಹಬ್ಬಗಳೆಲ್ಲವೂ ಕೃಷಿಯೊಂದಿಗೆ ಬೆರೆತು ಹೋಗಿದೆ. ಬಿತ್ತನೆ, ನಾಟಿಯಿಂದ ಹಿಡಿದು ಕೊಯ್ಲಿನ ತನಕ ಈ ಹಬ್ಬಗಳು ಬೆಸೆದುಕೊಂಡಿವೆ. ಇದು ನಮ್ಮ ಸಂಸ್ಕೃತಿ ಹಾಗೂ ಪರಂಪರೆ. ನಮ್ಮ ಕೃಷಿಕರು ಸ್ವಾವಲಂಬಿಗಳಾಗಬೇಕು. ಅವರು ಉತ್ಪಾದಿಸಿದ ಉತ್ಪನ್ನಗಳನ್ನು ಮಾರಾಟ ಮಾಡುವ ಸ್ವಾತಂತ್ರ್ಯ ಅವರದ್ದೇ ಆಗಿರಬೇಕು. ಈ ದಿಶೆಯಲ್ಲಿ ಕೆಲಸ ಮಾಡಬೇಕಾದ ಅವಶ್ಯಕತೆ ಇದೆ. ಹೀಗಾಗಿ, ಹೊಸ ವ್ಯವಸ್ಥೆ ಜಾರಿಯಲ್ಲಿ ಇರಲಿದೆ. ಹಳೆಯದು ಬೇಕು ಎಂದು ಪ್ರತಿಪಾದಿಸುವ ರೈತರು ಹಳೆಯ ವ್ಯವಸ್ಥೆಯಲ್ಲೇ ಮುಂದುವರಿಯುವುದಕ್ಕೆ ಅವಕಾಶವಿದೆ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

ರೈತರ ಆಂದೋಲನ ಪವಿತ್ರವೆಂದು ಪರಿಗಣಿಸುವೆ. ಆದರೆ ಆಂದೋಲನ ಜೀವಿಗಳು ಆಂದೋಲನವನ್ನೇ ಹೈಜಾಕ್ ಮಾಡಿ ಹಿಂಸಾಚಾರವೆಸಗುತ್ತಿದ್ದಾರೆ. ಭಯೋತ್ಪಾದನಾ ಪ್ರಕರಣ ದಲ್ಲಿ ಜೈಲು ಸೇರಿದವರ ಫೋಟೋ ಪ್ರದರ್ಶಿಸುತ್ತಿದ್ದಾರೆ. | ನರೇಂದ್ರ ಮೋದಿ ಪ್ರಧಾನಿ

ಪ್ರಧಾನಿ ಮೋದಿ ಹೇಳಿದ್ದೇನು?

  • ಸಮಾಜದ ಪ್ರಗತಿ, ಬದುಕಿನ ಗುಣಮಟ್ಟ ಸುಧಾರಣೆಗೆ ಹೊಸ ಕಾನೂನನ್ನು ಜಾರಿಗೊಳಿಸಲಾಗುತ್ತಿದೆ.
  • ಒಂದು ದೇಶವಾಗಿ ಭಾರತ ಉಳಿಯದು ಎಂದೇ ಭವಿಷ್ಯ ನುಡಿಯಲಾಗಿತ್ತು. ಆದರೆ, ನಮ್ಮ ದೇಶದ ಜನರು ಆ ಭವಿಷ್ಯವನ್ನು ಸುಳ್ಳಾಗಿಸಿದರು.

ಕಾಂಗ್ರೆಸ್ ಡಿವೈಡೆಡ್ ಕನ್​ಫ್ಯೂಸ್ಡ್ ಪಾರ್ಟಿ: ಕಾಂಗ್ರೆಸ್ ನಾಯಕರ ವರ್ತನೆ, ಆಲೋಚನಾ ಕ್ರಮಗಳೆಲ್ಲವೂ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ವಿಭಿನ್ನವಾಗಿವೆ. ಯಾವುದೇ ವಿಷಯದಲ್ಲಿ ಒಂದು ಒಮ್ಮತದ ನಿಲುವಿಗೆ ಬರುವುದಕ್ಕೆ ಆ ಪಕ್ಷದವರಿಂದ ಸಾಧ್ಯವೇ ಆಗುತ್ತಿಲ್ಲ. ಇಂತಹ ಡಿವೈಡೆಡ್ ಮತ್ತು ಕನ್​ಫ್ಯೂಸ್ ಆಗಿರುವ ಪಕ್ಷದವರು ದೇಶಕ್ಕೆ ಏನೂ ಒಳಿತನ್ನು ಉಂಟುಮಾಡಲಾರರು ಎಂದು ಮೋದಿ ವಾಗ್ದಾಳಿ ನಡೆಸಿದರು.

ಕೃಷಿ ಹೂಡಿಕೆ ಅಗತ್ಯ: ಕೃಷಿ ಕ್ಷೇತ್ರ ನಿರೀಕ್ಷಿಸಿದ ಮಟ್ಟದಲ್ಲಿ ಮತ್ತು ಮಾದರಿಯಲ್ಲಿ ಈವರೆಗೆ ಹೂಡಿಕೆಗಳು ಆಗಿಲ್ಲ. ಈಗ ಹೂಡಿಕೆಗೆ ಆಹ್ವಾನ ನೀಡುವ ಮತ್ತು ಕೃಷಿ ಕ್ಷೇತ್ರದ ಆಧುನೀಕರಣಕ್ಕೆ ಕ್ರಮ ತೆಗೆದುಕೊಳ್ಳಬೇಕಾದ ಅವಶ್ಯಕತೆ ಇದೆ. ಇದು ಕೃಷಿ ಕ್ಷೇತ್ರದ ಸಬಲೀಕರಣದ ದೃಷ್ಟಿಯಿಂದ ಅತೀ ಅಗತ್ಯ ಎಂದು ಪ್ರಧಾನಿ ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net