

ನವದೆಹಲಿ: ಕರೊನಾ ಸಾಂಕ್ರಾಮಿಕದಿಂದ ದೇಶ ತತ್ತರಿಸುತ್ತಿರುವ ಸಂದರ್ಭದಲ್ಲಿ ಕೃಷಿ ವಲಯ ಮುನ್ನಡೆ ಕಾಯ್ದುಕೊಂಡಿದ್ದು, ಏಪ್ರಿಲ್ನಿಂದ ಸೆಪ್ಟೆಂಬರ್ವರೆಗಿನ ಎರಡು ತ್ರೖೆಮಾಸಿಕದಲ್ಲಿ ಕೃಷಿ ಸರಕಿನ ರಫ್ತು ಪ್ರಮಾಣ ಶೇ. 43ಕ್ಕೆ ಹೆಚ್ಚಳ ಕಂಡಿದೆ. ಈ ಅವಧಿಯಲ್ಲಿ 53,626 ಕೋಟಿ ರೂ. ರಫ್ತು ವಹಿವಾಟು ನಡೆಸಿದ್ದರೆ, ಕಳೆದ ವರ್ಷ ಇದೇ ಅವಧಿಯಲ್ಲಿ 37,397 ಕೋಟಿ ರೂ. ವಹಿವಾಟು ದಾಖಲಾಗಿತ್ತು. 2019-20ರ ಮೊದಲೆರಡು ತ್ರೖೆಮಾಸಿಕದಲ್ಲಿ ಕೃಷಿ ವಾಣಿಜ್ಯ ವಹಿವಾಟಿನ ಕೊರತೆ 2,133 ಕೋಟಿ ರೂ. ಇತ್ತು, ಆದರೆ ಈ ಸಾರಿ 9,002 ಕೋಟಿ ರೂ.ಸಕಾರಾತ್ಮಕತೆ ತೋರುವ ಮೂಲಕ ಕೊರತೆ ನೀಗಿದೆ.
ಮೊದಲ ತ್ರೖೆಮಾಸಿಕದ ಅವಧಿಯ (ಏಪ್ರಿಲ್-ಜೂನ್) 90 ದಿನದಲ್ಲಿ 68 ದಿನ ಲಾಕ್ಡೌನ್ ಇದ್ದರೂ ಅತ್ಯವಶ್ಯಕ ಕೃಷಿ ಉತ್ಪನ್ನಗಳಲ್ಲಿ ಏಕದಳ, ದ್ವಿದಳ, ಎಣ್ಣೆಕಾಳು, ಸಂಸ್ಕರಿಸಿದ ಖಾದ್ಯ ತೈಲ, ಸಕ್ಕರೆ, ಹಣ್ಣು, ತರಕಾರಿ ರಫ್ತಿನ ಪ್ರಮಾಣ ಶೇ. 23ರಷ್ಟು ವೃದ್ಧಿಸಿತ್ತು. ಲಾಕ್ಡೌನ್ ಕಾರಣ ಮಾಂಸ ಮತ್ತು ಸಮುದ್ರದ ಉತ್ಪನ್ನಗಳ ಸರಬರಾಜು ಪೂರೈಕೆ ಜಾಲಕ್ಕೆ ಅಡಚಣೆಯಾಯಿತು. ಇವುಗಳ ರಫ್ತು ಪ್ರಮಾಣದ ಮಾಹಿತಿ ದೊರೆತ ನಂತರವಷ್ಟೆ ಒಟ್ಟಾರೆ ಕೃಷಿ ಉತ್ಪನ್ನಗಳ ರಫ್ತಿನ ಮಾಹಿತಿ ಸಿಗುತ್ತದೆ ಎಂದು ಕೇಂದ್ರ ಕೃಷಿ ಸಚಿವಾಲಯದ ವರದಿ ತಿಳಿಸಿದೆ.
ಪ್ರಸಕ್ತ ಸಾಲಿನ ಮೊದಲ ತ್ರೖೆಮಾಸಿಕದಲ್ಲಿ ಎಲ್ಲ ವಲಯದಲ್ಲೂ ಹಿನ್ನಡೆಯಾಗಿ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ದರ ಮೈನಸ್ 23.9ಕ್ಕೆ ಕುಸಿಯಿತು. ಆದರೆ, ಈ ಸಂಕಷ್ಟದಲ್ಲೂ ಕೃಷಿ ವಲಯ ಶೇ. 3.4ರಷ್ಟು ವೃದ್ಧಿ ದಾಖಲಿಸಿತು.
2020-21ರ ಮೊದಲೆರಡು ತ್ರೖೆಮಾಸಿದಕಲ್ಲಿ ಬಾಸುಮತಿ ಮತ್ತು ಬಾಸುಮತಿ ಅಲ್ಲದ ಅಕ್ಕಿಯ ರಫ್ತಿನ ಮೌಲ್ಯ 30,781 ಕೋಟಿಯಷ್ಟಿದೆ. ಮೊದಲ ತ್ರೖೆಮಾಸಿಕದಲ್ಲಿ ಬಾಸುಮತಿ ಅಕ್ಕಿಯೇ ರಫ್ತಿನ ಪಟ್ಟಿಯಲ್ಲಿ ಮೊದಲಿದ್ದು, 8,591 ಕೋಟಿ ಮೌಲ್ಯದ್ದಾಗಿದೆ. ಬಾಸುಮತಿ ಅಲ್ಲದ ಅಕ್ಕಿ 2,392 ಕೋಟಿ ರೂ.ಯದ್ದಾಗಿದೆ. 2019ರ ಮೊದಲ ತ್ರೖೆಮಾಸಿಕಕ್ಕೆ ಹೋಲಿಸಿದರೆ ಈ ಎರಡೂ ರೀತಿಯ ಅಕ್ಕಿಗಳ ರಫ್ತಿನ ವೃದ್ಧಿಯ ಮೌಲ್ಯ 4,818 ಕೋಟಿ ರೂ.. ರಫ್ತು ನಿಷೇಧಕ್ಕೂ ಮುನ್ನ 2,087 ಕೋಟಿ ರೂ. ಮೌಲ್ಯ ಈರುಳ್ಳಿ ವಿದೇಶಗಳಿಗೆ ಸರಬರಾಜು ಆಗಿದೆ.