ಕೃಷಿ ಸಾಲ ಮನ್ನಾ ಮಾಡಿ; ಕುಮಾರಸ್ವಾಮಿ ಒತ್ತಾಯ

HDK
Published on

ಬೆಂಗಳೂರು: ರೈತರ ಸರಣಿ ಅತ್ಮಹತ್ಯೆಗಳ ತೀವ್ರ ಕಳವಳ ವ್ಯಕ್ತಪಡಿಸಿದ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ರಾಜ್ಯ ಸರಕಾರ ಕೂಡಲೇ ರೈತರ ನೆರವಿಗೆ ಧಾವಿಸಬೇಕು ಹಾಗೂ ಕೃಷಿ ಸಾಲ ಮನ್ನಾ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕ್ಕೆಕಾರಕ್ಕೆ ಚೆಲ್ಲಾಟ, ರೈತರಿಗೆ ಮರಣ ಸಂಕಟ ಎಂಬಂತಾಗಿದೆ. ಒಂದೆಡೆ ರೈತರು ಆತ್ಮಹತ್ಯೆಗಳಿಗೆ ಶರಣಾಗುತ್ತಿದ್ದರೆ, ಈ ಕಾಂಗ್ರೆಸ್ ಪಕ್ಷಕ್ಕೆ ಅಧಿಕಾರದ ಆಟ. ಘಟಬಂಧನ್ ಕಟ್ಟುವುದರಲ್ಲಿ ಇರುವ ಆತುರ, ಅನ್ನದಾನ ಬದುಕು ಕಟ್ಟುವುದರಲ್ಲಿ ಇಲ್ಲ. ಹೀಗಿದೆ ಇವರ ಗ್ಯಾರಂಟಿ ವರಸೆ ಎಂದು ಲೇವಡಿ ಮಾಡಿದ್ದಾರೆ.

ಗ್ಯಾರಂಟಿ ಹಾಗೂ ಭಾಗ್ಯಗಳಿಂದ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಮಾಡುತ್ತೇವೆಂದು ಬೂಸಿಬಿಟ್ಟ ಕಾಂಗ್ರೆಸ್, ಅಧಿಕಾರಕ್ಕೆ ಬಂದ ಎರಡು ತಿಂಗಳು ಕಳೆಯುವ ಮುನ್ನವೇ ರಾಜ್ಯದಲ್ಲಿ ರೈತರ ಮರಣಮೃದಂಗ ಶುರುವಾಗಿದೆ. ಸುಭೀಕ್ಷೆಯ ನಾಡು ಕರ್ನಾಟಕದಲ್ಲಿ ಅನ್ನದಾತರು ಆತ್ಮಹತ್ಯೆಗೆ ಶರಣಾಗುತ್ತಾರೆ ಎಂದರೆ ಇವರು ತಲೆ ತಗ್ಗಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾವೇರಿ ಜಿಲ್ಲೆ ಒಂದರಲ್ಲಿಯೇ 18 ಮಂದಿ ಅನ್ನದಾತರು ಸಾವಿಗೆ ಶರಣಾಗಿರುವುದು, ಇನ್ನಿತರೆ ಜಿಲ್ಲೆಗಳಲ್ಲಿ ಅದೇ ಸರಣಿ ಶುರುವಾಗಿದೆ. ಇದು ನನಗೆ ತೀವ್ರ ಆಘಾತ ಉಂಟು ಮಾಡಿದೆ. ರೈತರ ಬದುಕಿಗೆ ಗ್ಯಾರಂಟಿ ಕೊಡದ ಈ ಸರಕಾರಕ್ಕೆ ನಾಚಿಕೆ ಆಗಬೇಕು ಎಂದು ಅವರು ಕಿಡಿ ಕಾರಿದ್ದಾರೆ.

ನಾನು ಮುಖ್ಯಮಂತ್ರಿ ಆಗಿದ್ದಾಗ, ಆ ಹಿಂದಿನ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಾಜ್ಯದಲ್ಲಿ ರೈತರ ಸರಣಿ ಆತ್ಮಹತ್ಯೆಗಳು ಆಗಿದ್ದವು. ನನ್ನ ಸರಕಾರ ಬಂದ ಕೂಡಲೇ ರೈತರ ಸಾಲ ಮನ್ನಾ ಮಾಡಿ ಅವರ ಜೀವ ಉಳಿಸುವ ಕೆಲಸ ಮಾಡಿದೆ. ಅದನ್ನೇ ಕಾಂಗ್ರೆಸ್ ಸರಕಾರ ಮಾಡಲಿ. ಕೃಷಿ ಅನುದಾನಕ್ಕೆ ಕತ್ತರಿ ಹಾಕುವ ಬದಲು ರೈತರಿಗೆ ಆರ್ಥಿಕ ನಿರಾಳತೆ ನೀಡಲಿ ಎಂದು ಒತ್ತಾಯ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net