ಕೃಷಿ ಪತ್ತಿನ ಸಹಕಾರ ಸಂಘಗಳು ರೈತರ ಜೀವನಾಡಿ

Oplus_16908288
ಚನ್ನರಾಯಪಟ್ಟಣ ತಾಲೂಕು ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಮಾತನಾಡಿದರು. ಮಂಜೇಗೌಡ, ವೈ.ಎನ್.ಜಯಣ್ಣ, ಎಚ್.ಆರ್.ವೆಂಕಟೇಶ್‌ಮೂರ್ತಿ, ಕುರವಂಕ ರಾಮಕೃಷ್ಣ, ಭಾಗ್ಯಮ್ಮ, ಲತಾ ಶಂಭುಲಿಂಗೇಗೌಡ, ಜಿ.ಆರ್.ಶ್ರೀನಿವಾಸ್ ಇತರರಿದ್ದರು.
Published on

ಚನ್ನರಾಯಪಟ್ಟಣ: ಗ್ರಾಮೀಣ ಭಾಗದಲ್ಲಿನ ಜನರ ಅಭಿವೃದ್ಧಿಗೆ ಹೈನುಗಾರಿಕೆ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಜೀವನಾಡಿಯಾಗಿವೆ. ಸಹಕಾರ ಸಂಘಗಳೊಂದಿಗೆ ರೈತರು ಸಹಭಾಗಿತ್ವ ಹೊಂದುವ ಮೂಲಕ ಸಂಘದೊಂದಿಗೆ ತಾವು ಅಭಿವೃದ್ಧಿ ಸಾಧಿಸಲು ಸಾಧ್ಯವೆಂದು ರಾಜ್ಯ ಮಾರಾಟ ಮಹಾಮಂಡಳದ ನಿರ್ದೇಶಕ ಸಿ.ಎನ್.ಪುಟ್ಟಸ್ವಾಮೀಗೌಡ ಅಭಿಪ್ರಾಯಪಟ್ಟರು.

ಪಟ್ಟಣದಲ್ಲಿನ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಗುರುವಾರ ಆಯೋಜಿಸಿದ್ದ 2024-25ನೇ ಸಾಲಿನ ಸರ್ವಸದಸ್ಯರ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದ ಅವರು, ಷೇರುದಾರರು ಸೊಸೈಟಿಯ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗಿಯಾಗಿ ಹೆಚ್ಚು ವ್ಯವಹಾರ ನಡೆಸಿದಾಗ ಸಂಘವು ಹೆಚ್ಚು ಕ್ರಿಯಾಶೀಲವಾಗಿ ಹೊಸ ಚಟುವಟಿಕೆಯಲ್ಲಿ ತೊಡಗಿಕೊಳ್ಳುತ್ತದೆ. 2500ಕ್ಕೂ ಹೆಚ್ಚು ಸದಸ್ಯರನ್ನು ಹೊಂದಿರುವ ಸೊಸೈಟಿಯಲ್ಲಿ ಅವರೆಲ್ಲರ ಹಿತ ಕಾಯುವ ಜವಾಬ್ದಾರಿ ಆಡಳಿತ ಮಂಡಳಿಯದ್ದಾಗಿರಬೇಕು ಎಂದರು.

ಸಂಘದಡಿ 1,179 ಸದಸ್ಯರಿಗೆ 7.90 ಕೋಟಿ ರೂ.ಗಳನ್ನು ಶೂನ್ಯ ಬಡ್ಡಿ ದರದಲ್ಲಿ ಸಾಲ ನೀಡಲಾಗಿದೆ. 67 ಜನರಿಗೆ ಹೈನುಗಾರಿಕೆಗಾಗಿ 6.70 ಲಕ್ಷ ರೂ. ಸಾಲ, ಮಧ್ಯಮಾವಧಿ ಸಾಲವಾಗಿ 41 ಜನಕ್ಕೆ 2.69 ಕೋಟಿ ರೂ. ಸಾಲ ನೀಡಲಾಗಿದೆ. 84 ಜನರಿಗೆ ವ್ಯಾಪಾರ ಸಾಲವಾಗಿ 6.11 ಲಕ್ಷ ರೂ. ಸಾಲ ಮತ್ತು ಅನಿಲ ಸಂಪರ್ಕ ಸಾಲವನ್ನು 22 ಜನರಿಗೆ ನೀಡಲಾಗಿದೆ ಎಂದು ವಿವರಿಸಿದರು.

ಕಳೆದ 13 ವರ್ಷಗಳಿಂದ ಬಾಕಿಯಿರುವ ಸ್ವ-ಸಹಾಯ ಸಂಘಗಳ ಗುಂಪುಗಳಿಗೆ ನೀಡಲಾಗಿರುವ 75 ಲಕ್ಷ ರೂ. ಸಾಲ ಮರುಪಾವತಿಗೆ ಹೆಚ್ಚಿನ ಕ್ರಮಕ್ಕೆ ಮುಂದಾಗಬೇಕೆಂದ ಅವರು, ಜಿಲ್ಲಾ ಸಹಕಾರಿ ಬ್ಯಾಂಕಿನಲ್ಲಿ ಹೊಸ ಸಾಲ ನೀಡಲು ಅನುಮೋದನೆಯಾಗಿದ್ದು, ಹೊಸ ಸಾಲಕ್ಕೆ ರೈತರು ಅರ್ಜಿ ಸಲ್ಲಿಸಲು ಅವಕಾಶವಿದೆ. ಕಸಬಾ ಸೊಸೈಟಿಯಡಿ 35 ರೈತರು ಹೊಸ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ ಎಂದರು.

ಸಭೆಯಲ್ಲಿ 2024-25ನೇ ಲೆಕ್ಕ ಪತ್ರದ ಮಂಡನೆಯನ್ನು ಸೊಸೈಟಿಯ ಸಿಇಒ ಸಿ.ಎನ್.ರಮೇಶ್ ಮಂಡಿಸಿದರು. ಮುಂದಿನ ಅರ್ಥಿಕ ವರ್ಷಕ್ಕೆ ಸೊಸೈಟಿಯು ಅಂದಾಜು ಪಟ್ಟಿ ಸಿದ್ಧಪಡಿಸುವಿಕೆಯ ಚರ್ಚೆಯ ಮೇಲೆ ಮಾತನಾಡಿದ ಷೇರುದಾರ ಕಾಳೇನಹಳ್ಳಿ ರಂಗಸ್ವಾಮಿ ಮಾತನಾಡಿ, ಮಧ್ಯಮಾವಧಿ ಸಾಲದಲ್ಲಿ ಸಾಲ ಪಡೆದ ಮೊತ್ತದ ಪೈಕಿ ಶೇ.20ರಷ್ಟು ಹಣ ಕಡಿತಗೊಳಿಸಿ ನೀಡುತ್ತಿದ್ದಾರೆ. ಇದರಿಂದ ರೈತರಿಗೆ ಅನ್ಯಾಯವಾಗುತ್ತದೆ. ಇದನ್ನು ಈ ಹಿಂದೆ ಇದ್ದಂತೆ ಶೇ.10ರಷ್ಟು ಹಿಡಿಯಲು ಅವಕಾಶವಾಗಬೇಕೆಂದರು.

ಸಂಘದ ಅಧ್ಯಕ ಸಿ.ಎಸ್.ಸುರೇಶ್ ಮಾತನಾಡಿ, ರೈತರು ಪಡೆದ ಸಾಲವನ್ನು ಸೂಕ್ತ ಸಮಯಕ್ಕೆ ಕಟ್ಟಿ, ಸಂಘದ ಅಭಿವೃದ್ಧಿಗೆ ಮುಂದಾಗಬೇಕೆಂದು ಮನವಿ ಮಾಡಿದರು. ಉಪಾಧ್ಯಕ್ಷ ಕುರವಂಕ ಮಂಜೇಗೌಡ, ನಿರ್ದೇಶಕರಾದ ವೈ.ಎನ್.ಜಯಣ್ಣ, ಎಚ್.ಆರ್.ವೆಂಕಟೇಶಮೂರ್ತಿ, ಕುರವಂಕ ರಾಮಕೃಷ್ಣ, ಭಾಗ್ಯಮ್ಮ, ಲತಾ ಶಂಭುಲಿಂಗೇಗೌಡ, ಜಿ.ಆರ್.ಶ್ರೀನಿವಾಸ್, ರವಿ ಮಳ್ಳೇನಹಳ್ಳಿ, ನಂಜುಂಡಯ್ಯ, ಮುದ್ದನಾಯಕ, ಕೆ.ಎನ್.ಶಂಕರ್ ಮತ್ತು ಸಂಘದ ಸಿಇಒ ಸಿ.ಎನ್.ರಮೇಶ್, ಲೆಕ್ಕಣಿಗ ಎಂ.ಪಿ.ಲೋಕೇಶ್, ಗುಮಾಸ್ತರಾದ ಎಂ.ಕೆ.ವಿನುತಾ, ಸಿ.ಎಸ್.ಹೇಮಾ, ರಾಘವೇಂದ್ರ ಹಾಗೂ ಸಹಾಯಕರಾದ ಡಿ.ಡಿ.ಗಿರೀಶ್, ಕೆ.ಸಿ.ವಿಕಾಸ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net