

ಆಗ್ರಾ: ಇನ್ನೇನು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸಿಕೊಳ್ಳಬೇಕು ಅಷ್ಟರೊಳಗೆ ಆ ವ್ಯಕ್ತಿಗೆ ಥಟ್ಟನೆ ಎಚ್ಚರವಾಗುವ ಅಥವಾ ಕಣ್ಣು ಮಿಟುಕಿಸುವ ಘಟನೆಗಳ ಬಗ್ಗೆ ಆಗಾಗ ಕೇಳುತ್ತಿರುತ್ತೇವೆ ಅಲ್ಲವೇ, ಇದೀಗ ಬಿಜೆಪಿ ನಾಯಕರೊಬ್ಬರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ ನಂತರ ಅವರು ಬದುಕುಳಿದ ಘಟನೆ ಉತ್ತರ ಪ್ರದೇಶದ ಆಗ್ರಾದಲ್ಲಿ ನಡೆದಿದೆ.
ಹೌದು, ಆಗ್ರಾದ ಬಿಜೆಪಿ ಮಾಜಿ ಅಧ್ಯಕ್ಷ ಮಹೇಶ್ ಬಾಘೇಲ್ ಇತ್ತೀಚೆಗೆ ಅನಾರೋಗ್ಯಕ್ಕೆ ಒಳಗಾಗಿದ್ದರು. ಕೂಡಲೇ ಕುಟುಂಬಸ್ಥರು ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಬಾಘೇಲ್ನನ್ನು ಪರೀಕ್ಷಿಸಿದ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು. ಕೊನೆಗೆ ಕುಟುಂಬ ಸದಸ್ಯರು ಬಾಘೇಲ್ ಅವರನ್ನು ಸರಾಯ್ ಖ್ವಾಜಾದಲ್ಲಿರುವ ಅವರ ನಿವಾಸಕ್ಕೆ ಕರೆತಂದರು. ಸಂಬಂಧಿಕರು ಕಣ್ಣೀರಿಟ್ಟರು. ಬಿಜೆಪಿ ನಾಯಕರೆಲ್ಲಾ ಅಂತಿಮ ದರ್ಶನಕ್ಕೆ ಬಂದರು. ಕುಟುಂಬಸ್ಥರು ಅಂತ್ಯಸಂಸ್ಕಾರಕ್ಕೆ ಸಿದ್ಧತೆ ನಡೆಸುತ್ತಿದ್ದರು.
ಆದರೆ ಮನೆಯವರು ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಿಕೊಳ್ಳುತ್ತಿರುವಾಗ ಮಹೇಶ್ ಬಾಘೇಲ್ ಕಣ್ಣು ತೆರೆದರು. ಇದರಿಂದ ಗಾಬರಿಗೊಂಡ ಕುಟುಂಬಸ್ಥರು ಮತ್ತೆ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಚಿಕಿತ್ಸೆಗೆ ಸ್ಪಂದಿಸುತ್ತಿರುವ ಬಾಘೇಲ್
ಮಹೇಶ್ ಬಾಘೇಲ್ ಕಣ್ಣು ತೆರೆದು ಕೈಕಾಲುಗಳನ್ನು ಆಡಿಸಿದಾಗ ಅಲ್ಲಿದ್ದವರೆಲ್ಲ ದಿಢೀರ್ ಗಾಬರಿಯಾದರು. ಆದರೆ ಅವರನ್ನು ತಕ್ಷಣವೇ ನ್ಯೂ ಆಗ್ರಾದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸದ್ಯ ವೈದ್ಯರು ಅವರನ್ನು ವೆಂಟಿಲೇಟರ್‌ನಲ್ಲಿಟ್ಟು ಚಿಕಿತ್ಸೆ ನೀಡುತ್ತಿದ್ದಾರೆ. ಮಹೇಶ್ ಬಾಘೇಲ್ ಸದ್ಯ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅವರ ಸಹೋದರ ಲಖನ್ ಸಿಂಗ್ ಬಾಘೇಲ್ ಕೂಡ ಬಹಿರಂಗಪಡಿಸಿದ್ದಾರೆ. ಅವರು ಸಂಪೂರ್ಣ ಗುಣಮುಖರಾಗಿ ಶೀಘ್ರದಲ್ಲೇ ಮನೆಗೆ ಮರಳಲಿದ್ದಾರೆ ಎಂದು ಕುಟುಂಬಸ್ಥರು ಭರವಸೆ ವ್ಯಕ್ತಪಡಿಸಿದ್ದು, ಬಾಘೆಲ್ ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ, ಶೀಘ್ರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.