

ಮುಂಬೈ: ನಟಿ ಅದಿತಿ ರಾವ್ ಹೈದರಿ ಮತ್ತು ನಟ ಸಿದ್ಧಾರ್ಥ್ ತೆಲಂಗಾಣದ 400 ವರ್ಷಗಳಷ್ಟು ಹಳೆಯದಾದ ಶ್ರೀ ರಂಗನಾಯಕಸ್ವಾಮಿ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಇಬ್ಬರಿಗೂ ಎರಡನೇ ಮದುವೆ. ಈ ವರ್ಷದ ಮಾರ್ಚ್ನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಈ ಜೋಡಿ 2021 ರಿಂದ ರಿಲೇಷನ್ಷಿಪ್ನಲ್ಲಿದ್ದರು.
2021 ರಲ್ಲಿ ಸೆಟ್ಟೇರಿದ ತೆಲುಗು ಚಿತ್ರ ಮಹಾಸಮುದ್ರಂ ಚಿತ್ರೀಕರಣದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಮೊದಲು ಭೇಟಿಯಾದರು. ಅವರ ಡೇಟಿಂಗ್ ಜೀವನವು 2023 ರಲ್ಲಿ ಬೆಳಕಿಗೆ ಬಂದಿತು.
ಅದಿತಿ ಈ ಹಿಂದೆ ಸತ್ಯದೀಪ್ ಮಿಶ್ರಾ ಎಂಬುವವರನ್ನು ವಿವಾಹವಾಗಿದ್ದರು. ಬಳಿಕ ಅವರಿಗೆ ವಿಚ್ಛೇದನ ನೀಡಿದ್ದರು. ಸಿದ್ಧಾರ್ಥ್ ಮೊದಲು ಮೇಘನಾ ನಾರಾಯಣ್ ಎಂಬುವವರನ್ನು ವಿವಾಹವಾಗಿದ್ದು, 2007 ರಲ್ಲಿ ಇಬ್ಬರೂ ವಿಚ್ಛೇದನ ಪಡೆದೊಕೊಂಡಿದ್ದರು. ಹೀಗಾಗಿ ಇಬ್ಬರಿಗೂಇದು ಎರಡನೇ ಮದುವೆಯಾಗಿದೆ.
ಈ ನವಜೋಡಿಯ ವಯಸ್ಸಿನ ಬಗ್ಗೆ ನೋಡುವುದಾದರೆ ಅದಿತಿ 1986ರ ಅಕ್ಟೋಬರ್ 28 ರಂದು ಆಂಧ್ರಪ್ರದೇಶದ ಹೈದರಾಬಾದ್ನಲ್ಲಿ ಜನಿಸಿದ್ದು, ಪ್ರಸ್ತುತ ಅವರಿಗೆ 37 ವರ್ಷ. ಇನ್ನು ಸಿದ್ದಾರ್ಥ್ 1979ರ ಏಪ್ರಿಲ್ 17 ರಂದು ಚೆನ್ನೈನಲ್ಲಿ ಜನಿಸಿದ್ದು, 44ವರ್ಷ. ಇವರಿಬ್ಬರ ನಡುವೆ 7 ವರ್ಷದ ವಯಸ್ಸಿನ ವ್ಯತ್ಯಾಸವಿದೆ.
ಅದಿತಿ ಕೊನೆಯದಾಗಿ ಸಂಜಯ್ ಲೀಲಾ ಬನ್ಸಾಲಿಯವರ ನೆಟ್ಫ್ಲಿಕ್ಸ್ ಸರಣಿ ಹೀರಾಮಂಡಿಯಲ್ಲಿ ಕಾಣಿಸಿಕೊಂಡರು. ಸಿದ್ಧಾರ್ಥ್ ಕಮಲ್ ಹಾಸನ್ ನಾಯಕನಾಗಿದ್ದ ಇಂಡಿಯನ್ 2 ನಲ್ಲಿ ನಟಿಸಿದ್ದರು.