ಕರೊನಾ ಮತ್ತೆ ಕಟ್ಟೆಚ್ಚರ: 5 ಹಂತದ ಕ್ರಮಗಳ ಅನುಷ್ಠಾನಕ್ಕೆ ಕೇಂದ್ರ ಸೂಚನೆ

Corona
Published on

ನವದೆಹಲಿ: ಆಗ್ನೇಯ ಏಷ್ಯಾ ಮತ್ತು ಯುರೋಪ್ ದೇಶಗಳಲ್ಲಿ ಕೋವಿಡ್ ಪ್ರಕರಣ ಉಲ್ಬಣಗೊಳ್ಳುತ್ತಿರುವ ಬೆನ್ನಲ್ಲೇ ಸೋಂಕು ಪ್ರತಿಬಂಧಕಕ್ಕೆ ಸೂಚಿಸಿರುವ ಐದು ಹಂತದ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನ ಮಾಡುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ.

ಯೂರೋಪ್​ಗಳಲ್ಲಿ ಪರಿಸ್ಥಿತಿ ಗಂಭೀರವಾಗುತ್ತಿದೆ. ಭಾರತದಲ್ಲಿ ಇದಕ್ಕೆ ಅವಕಾಶ ಆಗಬಾರದು. ಪರೀಕ್ಷೆ, ನಿಗಾ, ಚಿಕಿತ್ಸೆ, ಕೋವಿಡ್ ನಿಯಮಗಳು ಅನುಸರಣೆ, ಲಸಿಕೆ ಐದು ಕ್ರಮಗಳು ಸಮರ್ಪಕವಾಗಿದ್ದರೆ, ದೇಶದ ಆರ್ಥಿಕತೆ ಮತ್ತು ಆಯಾ ಪ್ರದೇಶದ ಸಾಮಾಜಿಕ ಚಟುವಟಿಕೆಗಳು ಅಡೆತಡೆ ಇಲ್ಲದೆ ನಡೆಯುತ್ತವೆ ಎಂದು ಕೇಂದ್ರ ಹೇಳಿದೆ.

ಈ ಕುರಿತಂತೆ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಎಲ್ಲ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿದ್ದು, ಟೆಸ್ಟ್ ಸಂಖ್ಯೆ ಹೆಚ್ಚಿಸುವುದು, ಹೊಸ ತಳಿ ಗುರುತಿಸುವಿಕೆಯಲ್ಲಿ ತಡ ಆಗದಿರುವುದು, ಲಸಿಕೆ ಪಡೆದುಕೊಳ್ಳುವಂತೆ ಜನರನ್ನು ಉತ್ತೇಜಿಸುವ ಕಾರ್ಯಗಳು ನಿರಂತರವಾಗಿ ನಡೆಯಬೇಕು ಎಂದು ಸಲಹೆ ನೀಡಿದ್ದಾರೆ.

ಐಸಿಎಂಆರ್ ಮಾರ್ಗದರ್ಶಿಯಂತೆ ಪರೀಕ್ಷೆಗೆ ಸಂಗ್ರಹಿಸಿದ ಮಾದರಿಗಳನ್ನು (ಸ್ಯಾಂಪಲ್) ನಿಯಮಿತವಾಗಿ ಜೀನೋಮ್ ಸಿಕ್ವೆನ್ಸ್ ಮಾಡುವ ಐಎನ್​ಎಸ್​ಸಿಒಜಿಗೆ ಕಳುಹಿಸಿಕೊಡಬೇಕು. ಇದರಿಂದ ಹೊಸ ತಳಿಗಳನ್ನು ಬೇಗನೆ ಗುರುತಿಸಲು ಸಾಧ್ಯ. ಜತೆಗೆ ಸೋಂಕಿತರ ಹಿಸ್ಟರಿ ಗಮನಿಸುವುದು ಮತ್ತು ಅವರ ಸಂಪರ್ಕಕ್ಕೆ ಬಂದವರ ಮೇಲೆ ನಿಗಾ ಇರಿಸುವ ಕಾರ್ಯವು ಆಗಬೇಕು ಇದರಿಂದ ಸೋಂಕು ಸಾಮುದಾಯಿಕವಾಗುವುದನ್ನು ತಡೆಬಹುದು ಎಂದು ತಿಳಿಸಿದ್ದಾರೆ.

ಸೂಚನೆಗಳೇನು?

  • ಕೋವಿಡ್ ಮಾರ್ಗಸೂಚಿ ಪಾಲಿಸಿ
  • ಮಾಸ್ಕ್ ಧರಿಸುವುದನ್ನು ನಿಲ್ಲಿಸದಿರಿ
  • ದೈಹಿಕ ಅಂತರ ಕಾಯ್ದುಕೊಳ್ಳಬೇಕು
  • ಕೈಗಳನ್ನು ಸ್ವಚ್ಛ ಮಾಡಿಕೊಳ್ಳುತ್ತಿರಬೇಕು
  • ಗಾಳಿ ಶುದ್ಧವಾಗಿರುವಂತೆ ನೋಡಿಕೊಳ್ಳಿ
  • ಹಿರಿಯರಿಗೆ 3ನೇ ಡೋಸ್, ಮಕ್ಕಳಿಗೂ ವ್ಯಾಕ್ಸಿನ್ ಹಾಕಿಸಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net