ಗಡೀಲಿ ಮಹಾ ಉದ್ಧಟತನ; ಮತ್ತೆ ತಂಟೆ ತೆಗೆದ ಪವಾರ್, ಕರ್ನಾಟಕದ ಕಾನೂನು ಹೋರಾಟಕ್ಕಿಲ್ಲ ಪವರ್

Untitled-1
Published on

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಇತ್ತ ಮರಾಠಿಗರಿಗಾಗಿ ಕರ್ನಾಟಕ ಸರ್ಕಾರ ಮರಾಠ ಅಭಿವೃದ್ಧಿ ಪ್ರಾಧಿಕಾರ ರಚನೆಯ ಉಡುಗೊರೆ ಪ್ರಕಟಿಸಿದರೆ ಅತ್ತ ರಾಜ್ಯದ ಬೆಳಗಾವಿ, ಕಾರವಾರ, ಬೀದರ್ ಜಿಲ್ಲೆಗಳ 814 ಹಳ್ಳಿ ಹಾಗೂ ಪಟ್ಟಣಗಳ ಮೇಲೆ ಕಣ್ಣಿಟ್ಟಿರುವ ಮಹಾರಾಷ್ಟ್ರ ಮತ್ತೊಮ್ಮೆ ಗಡಿವಿವಾದ ಕೆದಕಿ ಉದ್ಧಟತನ ಮೆರೆದಿದೆ. ‘ಬಾಳಾ ಠಾಕ್ರೆ ಅವರು ಬೆಳಗಾವಿ, ಕಾರವಾರ, ನಿಪ್ಪಾಣಿ ಒಳಗೊಂಡ ಸಂಯುಕ್ತ ಮಹಾರಾಷ್ಟ್ರದ ಕನಸು ಕಾಣುತ್ತಿದ್ದರು. ಆ ಕನಸನ್ನು ನನಸು ಮಾಡುವ ಕಾಲ ಈಗ ಬಂದಿದೆ’ ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ದಾಷ್ಟರ್್ಯದ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಅಸ್ಮಿತೆಯನ್ನೇ ಕೆಣಕಿದ್ದಾರೆ. ಇತ್ತ ರಾಜ್ಯ ಸರ್ಕಾರ ಮಾತ್ರ ತನ್ನ ನಿರ್ಲಕ್ಷ್ಯ ಮನೋಭಾವ ಮುಂದುವರಿಸಿದೆ.

ಕನ್ನಡ ರಾಜ್ಯೋತ್ಸವದ ದಿನವೂ ಮಹಾರಾಷ್ಟ್ರದ ಮಂತ್ರಿಗಳೆಲ್ಲ ಕಪ್ಪು ಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದ್ದರು. ಕಳೆದ ವರ್ಷ ಮಹಾ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯೇ ಗಡಿ ವಿವಾದ ಕೆದಕಿ ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿದ್ದರು. ಒಟ್ಟಿನಲ್ಲಿ ಮಹಾರಾಷ್ಟ್ರ ರಾಜಕೀಯ ಕಾರಣಗಳಿಗೆ ರಾಜ್ಯದೊಂದಿಗಿನ ಗಡಿ ವಿವಾದ ಜೀವಂತವಾಗಿರಿಸಲು ಪ್ರಯತ್ನಿಸುತ್ತಲೇ ಇದೆ.

ಕೋರ್ಟ್​ನಲ್ಲಿದೆ ಪ್ರಕರಣ: ಗಡಿ ವಿವಾದ ಸಂಬಂಧ ಮಹಾರಾಷ್ಟ್ರ ಸರ್ಕಾರ 2004ರಲ್ಲಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರೂ ಈವರೆಗೆ ಒಂದೇ ಒಂದು ಬಾರಿಯೂ ವಿಚಾರಣೆ ನಡೆದಿಲ್ಲ. ಸುಪ್ರೀಂಕೋರ್ಟ್ ಆ ಅರ್ಜಿಯನ್ನು ವಿಚಾರಣೆಗೂ ಅಂಗೀಕರಿಸಿಲ್ಲ. ಹೀಗಿದ್ದರೂ ಮಹಾರಾಷ್ಟ್ರದ ರಾಜಕಾರಣಿಗಳು ಮಾತ್ರ ಆಗಾಗ್ಗೆ ಗಡಿ ತಂಟೆ ಕೆದಕುತ್ತಲೇ ಇರುತ್ತಾರೆ. ಪ್ರತಿರೋಧ ತೋರಬೇಕಿದ್ದ ರಾಜ್ಯ ಮೌನವಾಗಿರುವುದೇ ಮಹಾರಾಷ್ಟ್ರದ ತಂಟೆ ಮಿತಿಮೀರಲು ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಸಮಿತಿ ರದ್ದು ಮಾಡಿಸಿದ್ದು: ಹಿಂದೆ ಸುಪ್ರೀಂ ಕೋರ್ಟ್ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಪ್ರಕರಣವೊಂದರಲ್ಲಿ ಸಾಕ್ಷ್ಯಗಳ ಸಂಗ್ರಹಕ್ಕೆ ಸಮಿತಿಯೊಂದನ್ನು ರಚಿಸುವ ಆದೇಶ ಹೊರಡಿಸಿತ್ತು. ಆದರೆ ಮಹಾರಾಷ್ಟ್ರದ ಮೊಕದ್ದಮೆ ಯನ್ನೇ ಇನ್ನೂ ವಿಚಾರಣೆಗೆ ಅಂಗೀಕರಿಸದ ಹಿನ್ನೆಲೆಯಲ್ಲಿ ಸಮಿತಿ ರಚನೆ ಆದೇಶವನ್ನು ರದ್ದು ಮಾಡಿಸಲಾಗಿತ್ತು ಎಂದು ಹೇಳಲಾಗುತ್ತದೆ.

ತಜ್ಞರ ವಾದವೇನು?: ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಕೆಲವು ಭಾಗಗಳನ್ನು ಕೇಳಿ ಸಂವಿಧಾನದ 131 ಪ್ರಕಾರ ಮೊಕದ್ದಮೆ ದಾಖಲಿಸಿದೆ. ಆದರೆ ಸಂವಿಧಾನದ ಕಲಂ 3ರ ಪ್ರಕಾರ ಈ ವಿಚಾರದ ಚರ್ಚೆ ಹಾಗೂ ನಿರ್ಣಯ ಕೈಗೊಳ್ಳುವುದಕ್ಕೆ ಸಂಸತ್​ಗೆ ಮಾತ್ರ ಅಧಿಕಾರವಿದೆ ಎಂಬುದು ರಾಜ್ಯದ ಕನ್ನಡಪರ ಹಾಗೂ ಕಾನೂನು ತಜ್ಞರ ವಾದವಾಗಿದೆ.

ಅಲ್ಲಿ ಸಿದ್ಧತೆ, ಇಲ್ಲಿ ಏಕಿಲ್ಲ?: ಮಹಾರಾಷ್ಟ್ರ ಸರ್ಕಾರ ಕಾನೂನು ಹೋರಾಟಕ್ಕೆ ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದೆ. ಆದರೆ ರಾಜ್ಯದಲ್ಲಿ ಯಾವ ಪ್ರಮಾಣದ ಸಿದ್ಧತೆ ಮಾಡಿಕೊಳ್ಳಬೇಕಿತ್ತೋ ಅಷ್ಟರ ಮಟ್ಟಿಗೆ ಆಗುತ್ತಿಲ್ಲ. ಮಹಾರಾಷ್ಟ್ರ ಸರ್ಕಾರ, ಸಚಿವರಾದ ಚಗನ್ ಭುಜಬಲ್ ಹಾಗೂ ಏಕನಾಥ ಸಿಂಗ್ ಅವರನ್ನು ಗಡಿ ಉಸ್ತುವಾರಿಗೆ ನೇಮಕ ಮಾಡಿದೆ. ಆ ಸಚಿವರು ಕಾನೂನು ತಂಡದ ಜತೆ ನಿರಂತರ ಸಂಪರ್ಕದಲ್ಲಿದ್ದಾರೆ. ರಾಜ್ಯದಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಚ್.ಕೆ. ಪಾಟೀಲ್ ಗಡಿ ಉಸ್ತುವಾರಿ ಸಚಿವರಾಗಿದ್ದರು. ಆದರೆ ಆ ನಂತರದ ಸಮ್ಮಿಶ್ರ ಸರ್ಕಾರ ಹಾಗೂ ಈಗಿನ ಸರ್ಕಾರದಲ್ಲಿ ಗಡಿ ಉಸ್ತುವಾರಿ ಸಚಿವರನ್ನೇ ನೇಮಕ ಮಾಡಿಲ್ಲ. ಆದ್ದರಿಂದ ಸರ್ಕಾರದ ಮಟ್ಟದಲ್ಲಿ ಈ ಬಗ್ಗೆ ಮೇಲುಸ್ತುವಾರಿ ಮಾಡುವವರೇ ಇಲ್ಲದಂತಾಗಿದೆ.

ಕರ್ನಾಟಕ- ಮಹಾರಾಷ್ಟ್ರ ಗಡಿ ಕುರಿತು ಮಹಾಜನ್ ವರದಿಯೇ ಅಂತಿಮ. ಮಹಾರಾಷ್ಟ್ರ ಡಿಸಿಎಂ ಅಜಿತ್ ಪವಾರ್ ಗಡಿ ಸಮಸ್ಯೆ ಬಗ್ಗೆ ಕ್ಯಾತೆ ತೆಗೆದಿರುವುದನ್ನು ನಾವು ಒಪ್ಪುವುದಿಲ್ಲ. ಅಣ್ಣ ತಮ್ಮಂದಿರಂತೆ ಇರುವ ಮರಾಠ ಮತ್ತು ಕನ್ನಡಿಗರ ಮಧ್ಯೆ ದ್ವೇಷ ಹುಟ್ಟಿಸುವುದು ಅಪರಾಧ. | ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಬಾಳಾ ಠಾಕ್ರೆ ಅವರು ಸದಾ ಬೆಳಗಾವಿ, ಕಾರವಾರ, ನಿಪ್ಪಾಣಿ ಒಳಗೊಂಡ ಸಂಯುಕ್ತ ಮಹಾರಾಷ್ಟ್ರದ ಅಭಿವೃದ್ಧಿ ಬಗ್ಗೆ ಕನಸು ಕಾಣುತ್ತಿದ್ದರು. ನಾವೆಲ್ಲ ಒಟ್ಟಾಗಿ ಸೇರಿ ಆ ಕನಸನ್ನು ನನಸು ಮಾಡುವ ಕಾಲ ಬಂದಿದೆ. | ಅಜಿತ್ ಪವಾರ್ ಮಹಾರಾಷ್ಟ್ರ ಡಿಸಿಎಂ

ಆಗದಿರುವುದು

  • ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಈವರೆಗೆ ಏನೇನು ಕೆಲಸ ಮಾಡಿದೆ? ಕಾನೂನು ಹೋರಾಟದಲ್ಲಿ ರಾಜ್ಯವನ್ನು ಎಷ್ಟರ ಮಟ್ಟಿಗೆ ಸಿದ್ಧ ಗೊಳಿಸಿದೆ ಎಂಬ ಮಾಹಿತಿ ಇಲ್ಲ.
  • ಪ್ರಾಧಿಕಾರಕ್ಕೆ ಕಚೇರಿಯೂ ಸರಿಯಾಗಿಲ್ಲ, ಗಡಿ ಅಭಿವೃದ್ಧಿ ಯನ್ನೇ ಪ್ರಾಧಿಕಾರ ಮರೆತಿದೆ.
  • ರಾಜ್ಯದ ವಿಷಯಗಳ ಕುರಿತು ಸುಪ್ರೀಂನ ಕಾನೂನು ತಜ್ಞರ ತಂಡದ ಜತೆ ಇತ್ತೀಚೆಗೆ ಚರ್ಚೆಯೇ ನಡೆದಿಲ್ಲ.
  • ಗಡಿ ಸಂರಕ್ಷಣಾ ಆಯೋಗ, ಗಡಿ ಅಭಿವೃದ್ಧಿ ಪ್ರಾಧಿಕಾರ ಈವರೆಗೆ ಏನೇನು ಕೆಲಸ ಮಾಡಿದೆ? ಕಾನೂನು ಹೋರಾಟದಲ್ಲಿ ರಾಜ್ಯವನ್ನು ಎಷ್ಟರ ಮಟ್ಟಿಗೆ ಸಿದ್ಧಗೊಳಿಸಿದೆ ಎಂಬ ಮಾಹಿತಿ ಇಲ್ಲ.
  • ಪ್ರಾಧಿಕಾರಕ್ಕೆ ಒಂದು ಕಚೇರಿಯೂ ಸರಿಯಾಗಿಲ್ಲ.
  • ಗಡಿ ಭಾಗದಲ್ಲಿ ಅಭಿವೃದ್ಧಿಯನ್ನೇ ಪ್ರಾಧಿಕಾರ ಮರೆತು ಬಿಟ್ಟಿದೆ.
  • ರಾಜ್ಯದ ವಿಷಯಗಳ ಕುರಿತು ಸುಪ್ರೀಂನ ಕಾನೂನು ತಜ್ಞರ ತಂಡದ ಜತೆ ಇತ್ತೀಚೆಗೆ ಚರ್ಚೆಯೇ ನಡೆದಿಲ್ಲ.

ಆಗಬೇಕಿರುವುದು

  • ಗಡಿ ಉಸ್ತುವಾರಿ ಸಚಿವರ ನೇಮಕವಾಗಬೇಕು, ಆ ಸಚಿವರು ಬೆಳಗಾವಿಗೆ ಸೇರಿದವರಾಗಬಾರದು.
  • ಗಡಿ ಅಭಿವೃದ್ಧಿ ಪ್ರಾಧಿಕಾರಕ್ಕೆ ತಕ್ಷಣ ಅಧ್ಯಕ್ಷರ ನೇಮಕವಾಗಬೇಕು, ಪ್ರಾಧಿಕಾರಕ್ಕೆ ಹೆಚ್ಚಿನ ಹಣ ಕೊಟ್ಟು, ಗಡಿ ಅಭಿವೃದ್ಧಿಗೆ ಆದ್ಯತೆ ನೀಡಬೇಕು.
  • ಗಡಿ ಸಂರಕ್ಷಣಾ ಆಯೋಗ ಪುನಾರಚನೆಯಾಗಬೇಕು.
  • ಕಾನೂನು ಸಮಿತಿಗಳು ಸಹ ಪುನಾರಚನೆಯಾಗಬೇಕು.
  • ಮಹಾರಾಷ್ಟ್ರ ಪದೇ ಪದೆ ಕೆದಕದಂತೆ ಎಚ್ಚರಿಕೆ ಕೊಡುವ ನಿಟ್ಟಿನಲ್ಲಿ ಕಾನೂನು ತಂಡದ ಜತೆ ಚರ್ಚೆಯಾಗಬೇಕು.
  • ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರದ ಕಚೇರಿಗಳು ಬೆಳಗಾವಿಗೆ ಸ್ಥಳಾಂತರ ಮಾಡಬೇಕು.

ಬೆಳಗಾವಿ ರಾಜ್ಯದ್ದು

ಬೆಳಗಾವಿಗಾಗಿಯೇ ಮಹಾರಾಷ್ಟ್ರ ಸಾಕಷ್ಟು ಬಾರಿ ಕರ್ನಾಟಕವನ್ನು ಕೆದಕುತ್ತಿದೆ. ಹೀಗೆ ಕೆದಕಿದಾಗಲೆಲ್ಲ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂಬುದು ಸ್ಪಷ್ಟವಾಗುತ್ತಿದೆ.
  • 1956ರಲ್ಲಿ ರಾಜ್ಯಗಳ ಪುನಾರಚನೆ ಆಯೋಗ ಬೆಳಗಾವಿಯನ್ನು ಕರ್ನಾಟಕಕ್ಕೆ ಸೇರಿಸಿದೆ.
  • 1966ರಲ್ಲಿ ರಚನೆಯಾಗಿ 1967ರಲ್ಲಿ ವರದಿ ನೀಡಿದ ಮಹಾಜನ್ ಆಯೋಗ ಸಹ ಬೆಳಗಾವಿ ಕರ್ನಾಟಕಕ್ಕೆ ಸೇರಿದ್ದು ಎಂದು ಹೇಳಿದೆ. ಬೆಳಗಾವಿ ಡಿಸಿ ಕಚೇರಿಯಲ್ಲಿ ದಾಖಲೆಗಳೆಲ್ಲ ಕನ್ನಡದಲ್ಲಿಯೇ ಇವೆ ಎಂಬುದು ದಾಖಲಾಗಿದೆ.
  • ಸಂಸತ್ತಿನಲ್ಲಿ ಬೆಳಗಾವಿ ಸಂಬಂಧಿಸಿದ ನಿಲುವಳಿ ಬಂದಾಗ ಮಹಾರಾಷ್ಟ್ರ ಪರ ಆಗಿಲ್ಲ.
  • 1920ರಲ್ಲಿ ಮುಂಬೈನಲ್ಲಿ ನಡೆದ ಕಾಂಗ್ರೆಸ್ ಮಹಾಧಿವೇಶನದಲ್ಲಿಯೂ ಕೇಳ್ಕರ್ ಸೇರಿ ಯಾರೊಬ್ಬರು ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂದು ಬೇಡಿಕೆ ಮಂಡಿಸಿಲ್ಲ.

‘ಕರ್ನಾಟಕ’ ಉಸ್ಕಾ ಬಾಪ್ ಕಾ ನಹೀ.. ಹಮಾರಾ ಹೈ’ ‘ಕರ್ನಾಟಕ ಅವರಪ್ಪನದ್ದಲ್ಲ, ನಮ್ಮದು..’ ಅವರು ಏನ್ ಹೇಳಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಕರ್ನಾಟಕ ಮಾತೆ ನಮ್ಮ ತಾಯಿ. ನಮ್ಮ ಜಿಲ್ಲೆಗಳು ಅವರಿಗೆ ಸಂಬಂಧವಿಲ್ಲ. ನಮ್ಮ ತಾಯಿಯನ್ನು ರಕ್ಷಿಸಿಕೊಳ್ಳುವುದು ಹೇಗೆ ಎನ್ನುವುದು ನಮಗೆ ಗೊತ್ತಿದೆ. ಪವಾರ್ ಮಾತಿಗೆ ಬೆಲೆ ಕೊಡುವ ಅವಶ್ಯಕತೆಯಿಲ್ಲ. | ಪ್ರಭು ಚವ್ಹಾಣ ಪಶು ಸಂಗೋಪನಾ ಸಚಿವ ಗಡಿ ಸಂರಕ್ಷಣಾ ಆಯೋಗ ಹಾಗೂ ಗಡಿ ಅಭಿವೃದ್ಧಿ ಪ್ರಾಧಿಕಾರಗಳಿಗೆ ಬೆಂಗಳೂರಿನಲ್ಲಿ ಕೆಲಸ ಇಲ್ಲ. ಅವು ಇರಬೇಕಾಗಿರುವುದು ಬೆಳೆಗಾವಿಯಲ್ಲಿ. ಸರ್ಕಾರ ತಕ್ಷಣ ಗಡಿ ಉಸ್ತುವಾರಿ ಸಚಿವರ ನೇಮಕ ಮಾಡಬೇಕು. ಆ ಮೂಲಕ ಮಹಾರಾಷ್ಟ್ರ ಮತ್ತೆ ವಿವಾದ ಕೆದಕದಂತೆ ಎಚ್ಚರಿಕೆ ನೀಡಬೇಕು. ಸಣ್ಣ ಪ್ರತಿಕ್ರಿಯೆಯನ್ನೂ ನೀಡದ ಸರ್ಕಾರದ ನಿರ್ಲಕ್ಷ್ಯ ಸರಿಯಲ್ಲ. | ಅಶೋಕ್ ಚಂದರಗಿ ಕನ್ನಡಪರ ಚಿಂತಕ, ಬೆಳಗಾವಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net