ಅಪಘಾತಕ್ಕೀಡಾಗಿದ್ದ ಕಾರು; ನೆರವಿಗೆ ಧಾವಿಸಿದ ಮಿನಿಸ್ಟರು…

Araga
Published on

ಶಿವಮೊಗ್ಗ: ತೀರ್ಥಹಳ್ಳಿ ತಾಲೂಕಿನ ಕುಡುಮಲ್ಲಿಗೆ ಸಮೀಪ ಅಪರಿಚಿತ ಕಾರೊಂದು ಅಪಘಾತಕ್ಕೀಡಾಗಿತ್ತು. ಕಾರಿನಲ್ಲಿದ್ದ ಶಿವಮೊಗ್ಗದ ನಿವಾಸಿಗಳು ಕಾರ್ಕಳಕ್ಕೆ ಹೋಗುತ್ತಿದ್ದರು; ಮಕ್ಕಳ ಪರೀಕ್ಷೆ ಬರೆಸುವ ಕಾರಣಕ್ಕೆ ಶಿವಮೊಗ್ಗದ ಕುಟುಂಬ ಹೋಗುತ್ತಿತ್ತು. ಈ ವೇಳೆ ಅಚಾನಕ್ಕಾಗಿ ರಸ್ತೆ ಪಕ್ಕದ ಚರಂಡಿಗೆ ಅವರ ಕಾರು ಇಳಿದು, ಅದನ್ನು ಮೇಲೆ ತರಲಾಗದೇ ಒದ್ದಾಡುತ್ತಿದ್ದರು.

ಈ ಸಂದರ್ಭದಲ್ಲಿ, ಇದೇ ಮಾರ್ಗವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುತ್ತಿದ್ದರು. ದಾರಿಯಲ್ಲಿ ಕಾರು ಅಪಘಾತವಾಗಿದ್ದ ದೃಶ್ಯ ಕಂಡ ತಕ್ಷಣ ತಮ್ಮ ಕಾರು ನಿಲ್ಲಿಸಲು ಡ್ರೈವರ್​​ಗೆ ಸೂಚಿಸಿದರು. ಜತೆಗೆ ತಮ್ಮೊಡನಿದ್ದವರನ್ನೂ ಕಾರಿನಿಂದ ಇಳಿಸಿದರು. ಅಪಘಾತಕ್ಕೀಡಾದ ಕಾರನ್ನು ತಮ್ಮ ಸಿಬ್ಬಂದಿ ಹಾಗೂ ಸ್ಥಳೀಯರ ನೆರವಿನಿಂದ ಮೇಲಕ್ಕೆತ್ತಿಸಿ, ಆ ಕುಟುಂಬ ಕಾರ್ಕಳಕ್ಕೆ ತೆರಳಲು ಸಹಾಯ ಮಾಡಿದರು. ಅಪಘಾತಕ್ಕೀಡಾದ ಕುಟುಂಬದವರಿಗೆ ಅದೃಷ್ಟವಶಾತ್​​ ಯಾವುದೇ ಹಾನಿಯಾಗಿರಲಿಲ್ಲ. ನಂತರ ಗೃಹ ಸಚಿವರು ಅವರೆಲ್ಲರಿಗೂ ಧೈರ್ಯ ತುಂಬಿ ಕಳುಹಿಸಿದರು.

ಸುಮಾರು ಒಂದು ವರ್ಷದ ಹಿಂದೆ ನಡೆದ ಅಪಘಾತ ಪ್ರಕರಣವೊಂದರಲ್ಲೂ ಗೃಹ ಸಚಿವರು ಮಾನವೀಯತೆ ತೋರಿದ್ದರು. ತೀರ್ಥಹಳ್ಳಿಯಿಂದ ಶಿವಮೊಗ್ಗಕ್ಕೆ ಬರುವ ಮಾರ್ಗಮಧ್ಯದ ಮಂಡಗದ್ದೆ ಬಳಿ ಬೈಕ್​​ ಅಪಘಾತವಾಗಿತ್ತು. ಬೈಕ್​​ನಲ್ಲಿದ್ದ ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿದ್ದರು. ಇದನ್ನು ಗಮನಿಸಿದ ಗೃಹ ಸಚಿವರು ತಮ್ಮ ಕಾರನ್ನು ನಿಲ್ಲಿಸಿ, ಸ್ವತಃ ತಾವೇ ಗಾಯಾಳುಗಳಿಗೆ ನೀರು ಕುಡಿಸಿ ಉಪಚರಿಸಿದ್ದರು. ನಂತರ ಆ್ಯಂಬುಲೆನ್ಸ್​​ ಬರುವುದು ತಡವಾಗುತ್ತದೆಂದು, ತಮ್ಮ ಎಸ್ಕಾರ್ಟ್​ ವಾಹನದಲ್ಲೇ ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ಕರೆತಂದು ದಾಖಲು ಮಾಡಿ, ಚಿಕಿತ್ಸೆ ಕೊಡಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net