ಲಾಡೆನ್ ಹತ್ಯೆಗಿಂತ ಮಹತ್ವದ್ದು: ಸೇನಾ ಕಮಾಂಡರ್ ಸುಲೇಮಾನಿ ವಿರುದ್ಧದ ದಾಳಿಗೆ ವಿಶೇಷ ಸ್ಥಾನ

Nation 1
Published on

ವಾಷಿಂಗ್ಟನ್: ಕಾಸಿಂ ಸುಲೇಮಾನಿಯ ಹತ್ಯೆ ಅಲ್ ಖೆೈದಾ ಸಂಘಟನೆಯ ಮುಖ್ಯಸ್ಥ ಒಸಾಮಾ ಬಿನ್ ಲಾಡೆನ್ ಮತ್ತು ಐಸಿಸ್ ಸಂಸ್ಥಾಪಕ ಅಬು ಬಕರ್ ಅಲ್-ಬಗ್ದಾದಿಯ ಹತ್ಯೆಗಿಂತಲೂ ಹೆಚು ್ಚ ಭೌಗೋಳಿಕ ಮತ್ತು ರಾಜಕೀಯ ಮಹತ್ವದ ವಿದ್ಯಮಾನ ಎಂದು ಭಾವಿಸಲಾಗಿದೆ. ಒಬ್ಬ ವ್ಯಕ್ತಿಯನ್ನು ಗುರಿಯಾಗಿಸಿ ಅಮೆರಿಕ ನಡೆಸಿದ ದಾಳಿಗಳಲ್ಲಿ ಇದಕ್ಕೆ ವಿಶೇಷ ಸ್ಥಾನವಿದೆ.

ಶುಕ್ರವಾರದ ದಾಳಿ ಒಂದು ಸರ್ಕಾರದ ಸೇನಾ ಮುಖ್ಯಸ್ಥನ ವಿರುದ್ಧ ನಡೆದ ಕಾರ್ಯಾಚರಣೆ. ಸುಲೇಮಾನಿ ಅಡಗಿಕೊಂಡಿರಲಿಲ್ಲ. ಮುಕ್ತವಾಗಿ ಓಡಾಡಿಕೊಂಡಿದ್ದ. ಭಯೋತ್ಪಾದಕನೆಂದು ಆತಿಥೇಯ ದೇಶವೂ ಸೇರಿದಂತೆ ಇತರ ದೇಶಗಳು ಘೋಷಿಸಿದ್ದ ಒಬ್ಬನನ್ನು ಕೊಲ್ಲುವುದು ಬೇರೆಯೇ ವಿಚಾರ. ಆದರೆ, ಸುಲೇಮಾನಿಯನ್ನು ಭಯೋತ್ಪಾದಕ ಎಂದು ಅಮೆರಿಕ ಘೋಷಿಸಿತ್ತೇ ಹೊರತು, ಆತಿಥೇಯ ದೇಶ ಇರಾಕ್ ಹಾಗೆಂದು ಪರಿಗಣಿಸಿರಲಿಲ್ಲ. ಇಂಥದ್ದರಲ್ಲಿ ಅವನ ಹತ್ಯೆ ಬೇರೆಯೇ ಸಂಗತಿ ಎಂದು ಅಟ್ಲಾಂಟಿಕ್ ಮಂಡಳಿ ಅಭಿಪ್ರಾಯಪಟ್ಟಿದೆ.

ಸೇಡು ನಿಗೂಢ?: ಇರಾನ್ ಯಾವ ರೀತಿಯಲ್ಲಿ ಸೇಡು ತೀರಿಸಿಕೊಳ್ಳಲಿದೆ ಎನ್ನುವುದು ಕೂಡ ಚರ್ಚೆಗೆ ಗ್ರಾಸ ಒದಗಿಸಿದೆ. ಇರಾಕ್​ನೊಳಗೆ ತೀವ್ರ ಹಿಂಸಾಚಾರಕ್ಕೆ ಕಾರಣವಾಗಲಿದೆಯೇ ಅಥವಾ ಸೌದಿ ಅರೇಬಿಯಾ ಮತ್ತು ಯುಎಇಯಂಥ ದೇಶಗಳಲ್ಲಿ ಅಮೆರಿಕ ಹಾಗೂ ಮಿತ್ರರ ವಿರುದ್ಧ ಇರಾನ್ ತಿರುಗಿ ಬೀಳಲಿದೆಯೇ ಎನ್ನುವುದನ್ನು ಕಾದು ನೋಡಬೇಕಿದೆ. ಅಲ್ಲದೆ ಅದಕ್ಕೆ ಅಮೆರಿಕ ಪ್ರತಿಕ್ರಿಯೆ ಹೇಗಿರಲಿದೆ ಎನ್ನುವುದು ಕೂಡ ಕಳವಳಕ್ಕೆ ಕಾರಣವಾಗಿದೆ.

ಪಾಕ್ ತರಬೇತಿ: ಸುಲೇಮಾನಿ ಹತ್ಯೆ ವಿದ್ಯಮಾನದ ನಂತರ ಪಾಕಿಸ್ತಾನದ ಭದ್ರತಾ ಪಡೆಗಳಿಗೆ ತರಬೇತಿ ಕಾರ್ಯಕ್ರಮ ಪುನರಾರಂಭಿಸಲು ಅಮೆರಿಕ ನಿರ್ಧರಿಸಿದೆ. ಈ ಕುರಿತು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮೈಕ್ ಪೊಂಪಿಯೊ ಮಾಹಿತಿ ನೀಡಿದ್ದಾರೆ.

ಮತ್ತೆ ದಾಳಿ?

ಸುಲೇಮಾನಿ ಮತ್ತಿತರರ ಹತ್ಯೆಯ ಮರುದಿನವೇ ಇರಾಕ್​ನ ಅರೆಸೇನಾ ಪಡೆ ಹಷೇದ್ ಅಲ್ ಷಾಬಿಯ ಕಮಾಂಡರ್​ನನ್ನು ಹತ್ಯೆ ಮಾಡಲು ವೈಮಾನಿಕ ದಾಳಿ ನಡೆದಿದೆ ಎಂದು ಸರ್ಕಾರಿ ಟಿವಿ ವರದಿ ಮಾಡಿದೆ. ಇರಾನ್ ಬೆಂಬಲಿತ ಷಿಯಾ ಉಗ್ರರ ಸಂಘಟನೆಗಳ ಕೂಟವಾದ ಪಾಪ್ಯುಲರ್ ಮೊಬಿಲೈಸೇಷನ್ ಫೋರ್ಸಸ್ (ಪಿಎಂಎಫ್) ಗುರಿಯಾಗಿಸಿ ಶನಿವಾರ ನಡೆದ ದಾಳಿಯಲ್ಲಿ ಆರು ಜನರು ಮೃತಪಟ್ಟರು ಎಂದು ಅದು ತಿಳಿಸಿದೆ. ಆದರೆ ಇದನ್ನು ಅಮೆರಿಕ ಅಲ್ಲಗಳೆದಿದೆ.

ಕುದ್ಸ್ ಪಡೆ ವಿವರ

  • 1980ರ ಇರಾನ್-ಇರಾಕ್ ಸಮರದ ವೇಳೆ ರಚಿಸಲಾದದ್ದೇ ಕುದ್ಸ್ ಪಡೆ. ಕುದ್ಸ್ ಜೆರುಸಲೇಂ ಅನ್ನು ಸೂಚಿಸುತ್ತದೆ. ಪರ್ಷಿಯನ್ ಭಾಷೆಯಲ್ಲಿ ಕುದ್ಸ್ ಅಂದರೆ ಪವಿತ್ರ. ಅಮೆರಿಕ 2007ರಲ್ಲಿ ಇದರ ಮೇಲೆ ನಿಷೇಧ ಹೇರಿದೆ. ಇರಾಕ್​ನಲ್ಲಿ ರಹಸ್ಯವಾಗಿ ಕಾರ್ಯಾಚರಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿತ್ತು. ಸದ್ದಾಂ ಹುಸೇನ್ ವಿರುದ್ಧ ಹೋರಾಡುತ್ತಿದ್ದ ಕುರ್ದರಿಗೆ ನೆರವಾಗುವುದೂ ಉದ್ದೇಶವಾಗಿತ್ತು.
  • ಇದು ಇರಾನ್​ನ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕೋರ್​ನ ಸಹಾಯಕ ದಳವಾಗಿ ಕಾರ್ಯಾಚರಿಸುತ್ತದೆ. ಕಾಸಿಂ ಸುಲೇಮಾನಿ ಇದರ ಮುಖ್ಯಸ್ಥನಾಗಿದ್ದು, ಸೇನೆಯಲ್ಲಿ ಪ್ರಭಾವಿ ವ್ಯಕ್ತಿಯಾಗಿದ್ದ. ಆಯತೊಲ್ಲಾ ಅಲಿ ಖಮೇನಿ ನಂತರ ಎರಡನೇ ಸ್ಥಾನದಲ್ಲಿದ್ದ.
  • ಕುದ್ಸ್ ಪಡೆಯಲ್ಲಿ 10ರಿಂದ 20 ಸಾವಿರ ಯೋಧರಿದ್ದಾರೆ ಎನ್ನಲಾಗಿದೆ.
  • ಇರಾನ್-ಪರ ಮತ್ತು ಷಿಯಾ-ಪರ ಚಳವಳಿಗಳಿಗೆ ಕುದ್ಸ್ ನೆರವಾಗುತ್ತದೆ.
  • ಇರಾಕ್​ನಲ್ಲಿ ಐಸಿಸ್ ವಿರುದ್ಧ ಹೋರಾಟದಲ್ಲಿ ಕುದ್ಸ್ ನೆರವಾಗಿದೆ.
  • ಕುದ್ಸ್ ಮಾತೃ ಸಂಸ್ಥೆಯಾದ ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್ ಕೋರ್​ನ ಬಲ 1.50 ಲಕ್ಷ. ಇದು ಭೂಸೇನೆ, ನೌಕಾ ಸೇನೆ ಹಾಗೂ ವಾಯುಪಡೆ ಹೊಂದಿದ್ದು ಇರಾನ್​ನ ಬ್ಯಾಲಿಸ್ಟಿಕ್ ಕ್ಷಿಪಣಿ ಹಾಗೂ ಪರಮಾಣು ಕಾರ್ಯಕ್ರಮಗಳ ಉಸ್ತುವಾರಿ ನೋಡಿಕೊಳ್ಳುತ್ತದೆ.

ಲಖನೌನಲ್ಲಿ ಪ್ರತಿಭಟನೆ

ಇರಾನ್ ಸೇನಾ ಕಮಾಂಡರ್ ಕಾಸಿಂ ಸುಲೇಮಾನ್ ಹತ್ಯೆಯನ್ನು ಖಂಡಿಸಿ ಲಖನೌನಲ್ಲಿ ಷಿಯಾ ಪಂಗಡದ ಮುಸ್ಲಿಮರು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪೋಸ್ಟರ್ ತುಳಿಯುವ ಮೂಲಕ ಪ್ರತಿಭಟನೆ ನಡೆಸಿದರು.

ಕಿಡಿಕಾರಿದ ಇರಾನ್ ಮಾಧ್ಯಮ

ಕಾಸಿಂ ಸುಲೇಮಾನಿ ಮತ್ತಿತರರ ಸಾವಿಗೆ ಇರಾನ್​ನ ಪತ್ರಿಕೆಗಳು ತೀಕ್ಷ್ಣ ಪ್ರತಿಕ್ರಿಯೆ ವ್ಯಕ್ತಪಡಿಸಿವೆ. ಅಮೆರಿಕದ ಸಶಸ್ತ್ರ ಪಡೆಗಳನ್ನು ‘ಭಯೋತ್ಪಾದಕರು’ ಎಂದಿರುವ ಹಲವು ಪತ್ರಿಕೆಗಳು, ಅಮೆರಿಕ ಮೂರ್ಖ ದೇಶ ಎಂದು ಜರೆದಿವೆ. ಗ್ಯಾಂಗ್​ಸ್ಟರ್​ಗಳನ್ನು ವಾಷಿಂಗ್ಟನ್​ನಿಂದ ಟೆಲ್ ಅವೀವ್​ನತ್ತ ಸೆಳೆದುತಂದ ದಿಟ್ಟ ಸೇನಾನಿ ಎಂದು ಸುಲೇಮಾನಿಯನ್ನು ಕೊಂಡಾಡಿವೆ. ಏಕಾಂಗಿ ವೀರ ಎಂದು ಹೊಗಳಿವೆ. ಸುಲೇಮಾನಿ ಒಬ್ಬ ವ್ಯಕ್ತಿಯಲ್ಲ. ಸಂಸ್ಕೃತಿಯಾಗಿದ್ದರು. ಸಂಸ್ಕೃತಿಯನ್ನು ಯಾವತ್ತೂ ಕೊಲ್ಲಲಾಗುವುದಿಲ್ಲ ಎಂದು ಟೆಹರಾನ್ ಟೈಮ್್ಸ ಸಂಪಾದಕೀಯ ಬರೆದಿದೆ.

ಬೇಹುಗಾರಿಕೆ ಮತ್ತು ಭಯೋತ್ಪಾದನೆ ಆರೋಪದ ಮೇಲೆ ಪಾಕ್​ನಲ್ಲಿ ಮರಣದಂಡನೆಗೆ ಗುರಿಯಾಗಿರುವ ಭಾರತದ ನೌಕಾಪಡೆ ಮಾಜಿ ಅಧಿಕಾರಿ ಕುಲಭೂಷಣ ಜಾಧವ್ ಪ್ರಕರಣದಲ್ಲಿ ಕಾಸಿಂ ಸುಲೇಮಾನಿ ಭಾರತದ ಪರ ಇದ್ದರು. | ಚಾಹಬಾರ್ ಬಂದರು ರಕ್ಷಣಾ ವಿಭಾಗದ ಹಿರಿಯ ಅಧಿಕಾರಿ

ಅಂತಿಮ ಯಾತ್ರೆಯಲ್ಲಿ ಜನಸ್ತೋಮ

ಕಾಸಿಂ ಸುಲೇಮಾನಿಯ ಅಂತಿಮ ಮೆರವಣಿಗೆಯಲ್ಲಿ ಅಪಾರ ಸಂಖ್ಯೆ ಜನರು ನೆರೆದಿದ್ದರು. ಸುಲೇಮಾನಿ ಯಲ್ಲದೆ ಮೃತಪಟ್ಟ ಇನ್ನೊಬ್ಬ ಸೇನಾಧಿಕಾರಿ ಅಬು ಮಹ್ದಿ ಅಲ್ ಮುಹಂದಿಗೆ ಗೌರವಪೂರ್ಣ ವಿದಾಯ ಹೇಳಲು ವ್ಯಾಪಕ ವ್ಯವಸ್ಥೆ ಮಾಡಲಾಗಿತ್ತು.

ಟೆಹರಾನ್​ನ ವ್ಯಾಪ್ತಿಗೆ ಸಿಕ್ಕಿದಲ್ಲೆಲ್ಲ ಅಮೆರಿಕದವರನ್ನು ಇರಾನ್ ಶಿಕ್ಷಿಸಲಿದೆ. ಟೆಲ್ ಅವೀವ್ ಮತ್ತು ಅಮೆರಿಕದ ಇತರ 35 ಮಹತ್ವದ ನೆಲೆಗಳು ವಾಸ್ತವವಾಗಿ ಇರಾನ್​ನ ಕೈಗೆಟಕುವಂತಿದೆ. | ಅಬುಹಮ್ಜಾ ಇರಾನ್ ಕಮಾಂಡರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net