ಇಕ್ಕಟ್ಟಿನ ಪರಿಸ್ಥಿಯಲ್ಲಿ ರಾಜಕೀಯ ಮಾಡಬೇಕಾದ ಸ್ಥಿತಿ ಇತ್ತು... ಸದ್ಯ ಆಚೆ ಬಂದಿದ್ದೇನೆ: ಆರ್. ಶಂಕರ್

r shankar
Published on

ಬೆಂಗಳೂರು: ಯಾರ ಮೇಲೂ ಕೋಪವಿಲ್ಲ. ನನ್ನ ಮೇಲೆ ನನಗೆ ಸಿಟ್ಟಿದೆ. ಒಳ್ಳೆಯದು ಮಾಡೋದಕ್ಕೆ ನನಗೆ ಈ ಪರಿಸ್ಥಿತಿ ಬಂತು ಅಂತ ಬೇಜಾರು ಇದೆ ಎಂದು ರಾಜೀನಾಮೆ ಬಳಿಕ ಆರ್. ಶಂಕರ್ ಹೇಳಿದ್ದಾರೆ.

ರಾಣೆಬೆನ್ನೂರು ಬಿಜೆಪಿ ಟಿಕೆಟ್ ಹಾಲಿ ಶಾಸಕ ಅರುಣ್ ಕುಮಾರ್‌ಗೆ ಸಿಕ್ಕ ಹಿನ್ನೆಲೆಯಲ್ಲಿ ಅಸಮಾಧಾನಗೊಂಡ ಮಾಜಿ ಸಚಿವ ಆರ್.ಶಂಕರ್ ಅವರು ಎಂ.ಎಲ್.ಸಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು,ನಾನು ಎಂಎಲ್ ಸಿ ಆಗಿಯೇ ಇರಬಹುದಿತ್ತು. ನಮ್ಮ ಕಾರ್ಯಕರ್ತರ ಒತ್ತಡಕ್ಕೆ ಮಣಿದು ರಾಜೀನಾಮೆ ನೀಡದಿದ್ದೇನೆ. ತಾಲೂಕಿನ ಜನರ ಸೇವೆ ಮಾಡುವ ಆಸೆ ಇದೆ. ಜನರ ಮಾತಿಗೆ ಬೆಲೆ ಕೊಟ್ಟು ರಾಜೀನಾಮೆ ನೀಡಿದ್ದೇನೆ. ನನ್ನ ಜನ ಕೈ ಹಿಡಿಯುವ ನಿರೀಕ್ಷೆ ಇದೆ. ಇಕ್ಕಟ್ಟಿನ ಪರಿಸ್ಥಿಯಲ್ಲಿ ರಾಜಕೀಯ ಮಾಡುವ ಸ್ಥಿತಿ ಇತ್ತು. ಸದ್ಯ ಆಚೆ ಬಂದಿದ್ದೇನೆ ಎಂದಿದ್ದಾರೆ.

ಯಾರ ಮೇಲೂ ಸಿಟ್ಟಿಲ್ಲ..ನನ್ನ ಮೇಲೆ ನನಗೆ ಸಿಟ್ಟಿದೆ:

ಸ್ಪರ್ಧೆ ಮಾಡುವ ವಿಚಾರಕ್ಕೆ ಬಂದರೆ ಎರಡೂ ಮೂರು ದಿನಗಳಲ್ಲಿ ಅಂತಿಮ ನಿರ್ಧಾರ ಮಾಡುತ್ತೇನೆ. ಪಕ್ಷೇತರ ಸ್ಪರ್ಧೆ ಮಾಡಬೇಕೋ..? ಅಥವಾ ಬೇರೆ ಪಕ್ಷದಿಂದ ಸ್ಪರ್ಧೆ ಮಾಡಬೇಕೋ ..? ಎನ್ನುವುದರ ಬಗ್ಗೆ ತೀರ್ಮಾನ ಮಾಡುತ್ತೇನೆ. ಆದರೆ ಆರ್ ಶಂಕರ್ ಗೆಲ್ಲುತ್ತಾನೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬಿಜೆಪಿ ನಾಯಕರು ಭೇಟಿ ಮಾಡುವ ವಿಚಾರಕ್ಕೆ ನಿನ್ನೆಯವರೆ ಅವಕಾಶ ಇತ್ತು. ಬೆಳಗ್ಗೆವರೆಗೂ ಸಿಎಂ ಸೇರಿದಂತೆ ಯಾರು ನನ್ನ ಜೊತೆಗೆ ಮಾತನಾಡಿಲ್ಲ. ನನ್ನ ಮನೆಗೆ ಬಂದು ಕರೆದುಕೊಂಡು ಹೋಗಿ ಹೀಗೆ ಮಾಡಿದ್ರು ಅನ್ನೋ ನೋವು ಇದೆ. ಈ ಹಿಂದೆ ದುಡುಕಿ ಅವರು ಹೇಳಿದ ಹಾಗೇ ಕೇಳಿದೆ ಅದಕ್ಕೆ ಹೀಗೆ ಆಗಿದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net