ಲೋಕ ಸಮರದ ಬಳಿಕ ಗ್ಯಾರಂಟಿಗಳು ಸ್ಥಗಿತ; ವಿಜಯೇಂದ್ರ‌ ಭವಿಷ್ಯ

VIJAYENDRA
Published on

ಬೆಂಗಳೂರು: ಐದು ಗ್ಯಾರಂಟಿ ಯೋಜನೆಗಳನ್ನು ಬಿಜೆಪಿ ವಿರೋಧಿಸುವುದಿಲ್ಲ, ನಿಲ್ಲಿಸಲು ಒತ್ತಾಯಿಸುತ್ತಿಲ್ಲ. ಆದರೆ ಲೋಕಸಭೆ ಸಮರದ ಬಳಿಕ ಕಾಂಗ್ರೆಸ್ ಸರ್ಕಾರವೇ ಐದು‌ ಗ್ಯಾರಂಟಿಗಳನ್ನು ಸ್ಥಗಿತಗೊಳಿಸಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಭವಿಷ್ಯ ನುಡಿದರು.

ಪಕ್ಷದ ರಾಜ್ಯ ಕಚೇರಿಯಲ್ಲಿ ಮಂಗಳವಾರ ಸುದ್ದಿಗಾರರ ಜತೆಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳು ಲೋಕಸಭೆ ಚುನಾವಣೆ ಗಿಮಿಕ್ ಎನ್ನುವುದು ಪ್ರಬುದ್ಧರಾಗಿರುವ ರಾಜ್ಯದ ಜನತೆ ಅರಿತಿದ್ದಾರೆ. ಐದು ಯೋಜನೆಗಳ ಅನುಷ್ಠಾನದಲ್ಲಿ ರಾಜ್ಯ ಸರ್ಕಾರ‌ ನಡೆದುಕೊಳ್ಳುತ್ತಿರುವ ರೀತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ.

ಉಚಿತ ಸೌಲಭ್ಯಗಳನ್ನು ಒದಗಿಸುವ ಯೋಜನೆಗಳಿಂದ ಆರ್ಥಿಕವಾಗಿ ಹೊರೆಯಾಗಲಿದೆ. ಆರ್ಥಿಕ ಅಶಿಸ್ತಿಗೆ ಕಾರಣವಾಗಲಿದೆ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ‌ ಗೊತ್ತಿದೆ. ಆದರೂ ಯಾವುದೇ ಸಮಸ್ಯೆಯಾಗಿಲ್ಲವೆಂದು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದಾರೆ. ಆಂತರಿಕ ಆರ್ಥಿಕ ವಿಚಾರಗಳನ್ನು ಪರೋಕ್ಷವಾಗಿ ಮಾರ್ಗ ಕಂಡುಕೊಂಡಿದ್ದಾರೆ.

ಹೊಸ ಕಾರ್ಯಕ್ರಮ ತೋರಿಸಲಿ

ಸಿಎಂಗೆ ನೂತನವಾಗಿ ಆರ್ಥಿಕ ಸಲಹೆಗಾರರಾಗಿ ನೇಮಕವಾಗಿರುವ ಬಸವರಾಜ ರಾಯರಡ್ಡಿ ಅವರು ನೀಡುತ್ತಿರುವ ಹೇಳಿಕೆಗಳಲ್ಲಿ ಹೊಸದೇನಿಲ್ಲ. ಆರ್ಥಿಕ ಬಿಕ್ಕಟ್ಟಿನ ಬಗ್ಗೆ ಸಿಎಂ ಇಂಗಿತವನ್ನೇ ಹೊರ ಹಾಕುತ್ತಿದ್ದಾರೆ. ಲೋಕಸಭೆ ಚುನಾವಣೆ ನಂತರ ಗ್ಯಾರಂಟಿಗಳನ್ನು ನಿಲ್ಲಿಸುವುದಕ್ಕೆ ಪೀಠಿಕೆಯಾಗಿದೆ ಎಂದು ಬಿ.ವೈ.ವಿಜಯೇಂದ್ರ ಹೇಳಿದರು.

ಕಳೆದ ಏಳು ತಿಂಗಳ ಅವಧಿಯಲ್ಲಿ ಒಂದೇ ಒಂದು ಹೊಸ ಅಭಿವೃದ್ಧಿ ಕಾರ್ಯಕ್ರಮ ಅಥವಾ ಯೋಜನೆ ಜಾರಿಗೆ‌ ತಂದಿರುವುದು ತೋರಿಸಲಿ ಎಂದು ಸವಾಲೆಸೆದ ಅವರು, ಅಭಿವೃದ್ಧಿ ಕೆಲಸ ಸ್ಥಗಿತ, ಕ್ಷೇತ್ರಕ್ಕೆ ಅನುದಾನವಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಶಾಸಕರು ಅಸಮಾಧಾನ ಹೊರ ಹಾಕುತ್ತಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಶಾಸಕರಿಗೂ ಬೇಸರವಾಗಿರುವುದು ಸಹಜವೆಂದರು.

ಕಾಂಗ್ರೆಸ್ ನಲ್ಲಿ ಉಪಮುಖ್ಯಮಂತ್ರಿಗಳ ಹುದ್ದೆ ಬಗ್ಗೆ ಚರ್ಚೆ ನಡೆಯುತ್ತಿರುವುದು ಆ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ‌ ಹೆಚ್ಚು ಮಾತನಾಡಲು ಬಯಸುವುದಿಲ್ಲ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಅವರನ್ನು ಕಟ್ಟಿ ಹಾಕುವ ತಂತ್ರಗಾರಿಕೆ ಎನ್ನುವುದು ಸ್ಪಷ್ಟವಾಗಿದೆ ಎಂದು ಬಿ.ವೈ.ವಿಜಯೇಂದ್ರ ಪುನರುಚ್ಚರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net