ಎಕ್ಸಿಟ್​ ಪೋಲ್​​ ಬಳಿಕ ಪ್ರಧಾನಿ ಮೋದಿ ನೇತೃತ್ವದಲ್ಲಿ 7 ಸಭೆಗಳು: ಯಾವ್ಯಾವ ವಿಷಯ ಚರ್ಚಿಸಲಿದ್ದಾರೆ ಗೊತ್ತಾ?

Untitled-design-14-1
Published on

ಲೋಕಸಭಾ ಚುನಾವಣೆ 2024ರ ಏಳು ಹಂತಗಳ ಮತದಾನ ಪೂರ್ಣಗೊಂಡಿದೆ. ದೇಶದಲ್ಲಿ ಮತ್ತೊಮ್ಮೆ ಬಿಜೆಪಿ ನಾಯಕತ್ವದಲ್ಲಿ ಎನ್‌ಡಿಎ ಸರ್ಕಾರ ಬರಲಿದೆ ಎಂದು ಎಲ್ಲಾ ಎಕ್ಸಿಟ್ ಪೋಲ್‌ಗಳು ಭವಿಷ್ಯ ನುಡಿದಿವೆ. ಮೂರು ಎಕ್ಸಿಟ್ ಪೋಲ್‌ಗಳು ಎನ್‌ಡಿಎ 400 ಸ್ಥಾನಗಳ ಗಡಿ ದಾಟಲಿದೆ ಎಂದು ತಿಳಿಸಿವೆ. ಇದೇ ಸಂಭವಿಸಿದರೆ ಅದು ದೇಶದಲ್ಲಿ "ಮೋದಿ 3.0" ಯುಗ ಪ್ರಾರಂಭವಾಗಲಿದೆ. ಮತ ಎಣಿಕೆ ಫಲಿತಾಂಶ ಜೂನ್​ 4ರಂದು ಬರಲಿದ್ದು, ಸೋಲು-ಗೆಲುವಿನ ನೈಜ ಚಿತ್ರಣ ತಿಳಿಯಲಿದೆ.

ಬಿರುಬಿಸಿಲಿನಲ್ಲಿ ಚುನಾವಣಾ ಪ್ರಚಾರ, ವಿವೇಕಾನಂದ ಸ್ಮಾರಕದಲ್ಲಿ 45 ಗಂಟೆಗಳ ಕಾಲ ಧ್ಯಾನ ಪೂರ್ಣಗೊಂಡ ಬಳಿಕ ಪ್ರಧಾನಿ ಮೋದಿ ಅವರು ಕೆಲಸದ ಮೇಲೆ ತಮ್ಮ ಗಮನ ಕೇಂದ್ರಿಕರಿಸಲು ಪ್ರಾರಂಭಿಸಿದ್ದಾರೆ. ಭಾನುವಾರದಂದು (ಜೂನ್​​ 2) ವಿವಿಧ ಮತ್ತು ಪ್ರಮುಖ ವಿಷಯಗಳನ್ನು ಒಳಗೊಂಡ ಸುಮಾರು ಏಳು ಸಭೆಗಳನ್ನು ನಡೆಸಲಿದ್ದಾರೆ. ಈ ಸಭೆಗಳಲ್ಲಿ ಪ್ರಧಾನಿ ಮೋದಿ ಅವರು ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಿದ್ದಾರೆ ಮತ್ತು ಪ್ರತಿಕ್ರಿಯೆಯನ್ನು ತೆಗೆದುಕೊಳ್ಳಲಿದ್ದಾರೆ ಎಂದು ಸರ್ಕಾರಿ ಮೂಲಗಳು ತಿಳಿಸಿವೆ.

ಈ 7 ಸಭೆಗಳಲ್ಲಿ ಪ್ರಮುಖ ವಿಷಯಗಳೇನು?

  • ಇತ್ತೀಚಿನ ಚಂಡಮಾರುತದ ನಂತರದ ಪರಿಸ್ಥಿತಿಯ ಬಗ್ಗೆ ಮೊದಲ ಸಭೆ ನಡೆಸುವ ನಿರೀಕ್ಷೆಯಿದೆ. ವಿಶೇಷವಾಗಿ ಈಶಾನ್ಯ ರಾಜ್ಯಗಳ ಮೇಲೆ ಕೇಂದ್ರೀಕರಿಸಿದೆ. ಚಂಡಮಾರುತದ ನಂತರದ ಪರಿಸ್ಥಿತಿಯ ಕುರಿತು ಪ್ರಧಾನಿ ಮೋದಿ ಪರಿಶೀಲಿಸಲಿದ್ದಾರೆ.
  • ಇದಾದ ಬಳಿಕ ಮೋದಿ ಅವರು ದೇಶದಲ್ಲಿ ಬಿಸಿಗಾಳಿ ಮತ್ತು ವಿಪರೀತ ಬಿಸಿಲಿನ ಪರಿಸ್ಥಿತಿಯನ್ನು ಪರಿಶೀಲಿಸಲು ಸಭೆ ನಡೆಸಲಿದ್ದಾರೆ. ಮಾಹಿತಿಯ ಪ್ರಕಾರ, ಉತ್ತರ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಲಾಗಿದ್ದ 33 ನೌಕರರು ಸೇರಿದಂತೆ ಕನಿಷ್ಠ 58 ಜನರು ಶನಿವಾರ ಬಿಸಿಲಿನ ಬೇಗೆಯಿಂದ ಮೃತಪಟ್ಟಿದ್ದಾರೆ.
  • ವಿಶ್ವ ಪರಿಸರ ದಿನಾಚರಣೆಯನ್ನು ದೊಡ್ಡ ಮಟ್ಟದಲ್ಲಿ ಆಚರಿಸಲು ಸಿದ್ಧತೆ ಕುರಿತು ಸಭೆ ನಡೆಸಲಾಗುವುದು ಎನ್ನಲಾಗಿದೆ.
  • ತಮ್ಮ ಸರ್ಕಾರದ ಐತಿಹಾಸಿಕ ಮೂರನೇ ಅವಧಿಯಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮೋದಿ ಈಗಾಗಲೇ ಹೇಳಿದ್ದಾರೆ. ಆದ್ದರಿಂದ ಹೊಸ ಸರ್ಕಾರಕ್ಕೆ 100 ದಿನಗಳ ಕಾರ್ಯಕ್ರಮದ ಕಾರ್ಯಸೂಚಿಯನ್ನು ಪರಿಶೀಲಿಸಲು ಮೋದಿ ಸುದೀರ್ಘ ಚಿಂತನ ಮಂಥನ ಸಭೆ ನಡೆಸಲಿದ್ದಾರೆ. (ಏಜೆನ್ಸೀಸ್​​)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net