ಈ ವಿಚಾರದಲ್ಲಿ ಅಕ್ಷಯ್​ ಕುಮಾರ್ ಅವರನ್ನೇ ಫಾಲೋ ಮಾಡ್ತಿದ್ದಾರೆ ಆಮೀರ್​ ಖಾನ್​!

ak_ak_im_
Published on

ಬಾಲಿವುಡ್​ನಲ್ಲಿ ಸಿನಿಮಾ ಕೆಲಸಗಲು ಮೊದಲಿನಂತಿಲ್ಲದಿದ್ದರೂ, ನಿಧಾನಕ್ಕೆ ಚುರುಕು ಪಡೆದುಕೊಳ್ಳುತ್ತಿದೆ. ಒಂದಾದ ಮೇಲೊಂದು ಸಿನಿಮಾ ತಂಡದವರು ಶೂಟಿಂಗ್​ ಕೆಲಸಗಳನ್ನು ಶುರು ಮಾಡಿದ್ದಾರೆ. ಇದೀಗ ಅಮೀರ್​ ಖಾನ್ ಸಹ ಶೂಟಿಂಗ್​ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಅಂದರೆ, ಸದ್ದಿಲ್ಲದೆ, ಲಾಲ್​ ಸಿಂಗ್​ ಛಡ್ಡಾ ಚಿತ್ರೀಕರಣದಲ್ಲಿ ಪಾಲ್ಗೊಳ್ಳಲು ವಿಮಾನ ಏರಿದ್ದಾರೆ.

ಈಗಾಗಲೇ ಬೆಲ್​ಬಾಟಂ ಸಿನಿಮಾ ಸಲುವಾಗಿ ಅಕ್ಷಯ್​ ಕುಮಾರ್ ಮತ್ತವರ ತಂಡ ವಿದೇಶಕ್ಕೆ ಹಾರಿದ್ದು, ಈಗಾಗಲೇ ಶೂಟಿಂಗ್​ನಲ್ಲಿ ತೊಡಗಿಸಿಕೊಂಡಿದ್ದಾರೆ. ಇದೀಗ ಅವರ ಹಾದಿಯಲ್ಲಿಯೇ ಆಮೀರ್ ಸಹ ವಿದೇಶಕ್ಕೆ ಹಾರಿದ್ದಾರೆ. ಲಾಕ್​ಡೌನ್​ ಹಿನ್ನೆಲೆಯಲ್ಲಿ ಕಳೆದ ನಾಲ್ಕು ತಿಂಗಳಿಂದ ಮನೆಯಲ್ಲಿಯೇ ಕಾಲ ಕಳೆದ ಆಮೀರ್​ ಖಾನ್​, ಈಗಷ್ಟೇ ಮನೆಯಿಂದ ಆಚೆ ಬಂದಿದ್ದಾರೆ. ಶೇ. 50 ಭಾಗದ ಚಿತ್ರೀಕರಣ ಮುಗಿಸಿಕೊಂಡಿರುವ ಲಾಲ್​ ಸಿಂಗ್​ ಛಡ್ಡಾ, ಸದ್ಯ ಟರ್ಕಿಯತ್ತ ಪ್ರಯಾಣ ಬೆಳೆಸಿದ್ದಾರೆ. ಈಗಾಗಲೇ ಒಂದಷ್ಟು ಫ್ಯಾನ್​ ಪೇಜ್​ಗಳಲ್ಲಿ ಆಮೀರ್​ ಅವರ ಜತೆಗಿನ ಫೋಟೋಗಳನ್ನು ಅಭಿಮಾನಿಗಳು ಶೇರ್​ ಮಾಡಿಕೊಂಡಿದ್ದಾರೆ.

ಇನ್ನು ಈ ಮಧ್ಯೆ ಚಿತ್ರವನ್ನು ಲಡಾಖ್​ನಲ್ಲಿ ಚಿತ್ರೀಕರಿಸಬೇಕು ಎಂಬುದು ಅಮೀರ್​ ಖಾನ್​ ಆಸೆಯಾಗಿತ್ತು. ಲಾಕ್​ಡೌನ್​ ಮುಗಿದ ಮೇಲೆ ಲಡಾಖ್​ನಲ್ಲಿ ಒಂದಿಷ್ಟು ಭಾಗದ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಈ ಮುನ್ನ ಸಿದ್ಧತೆ ನಡೆಸಿತ್ತು. ಈ ನಡುವೆ ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾದ ಯೋಧರ ನಡುವೆ ಸಂಘರ್ಷ ಉಂಟಾಗಿದ್ದರಿಂದ, ಲಡಾಖ್​ ಬಿಟ್ಟು ಕಾರ್ಗಿಲ್​ನಲ್ಲಿ ಚಿತ್ರೀಕರಣ ಮಾಡುವುದಕ್ಕೆ ಚಿತ್ರತಂಡ ಯೋಚಿಸಿತ್ತು.

ಈಗಾಗಲೇ ದೆಹಲಿ, ರಾಜಸ್ತಾನ, ಚಂಡೀಗಢ, ಅಮೃತಸರ, ಕೊಲ್ಕತ್ತಾ ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಲಾಗಿದೆ. ‘ಲಾಲ್​ ಸಿಂಗ್​ ಛಡ್ಡಾ’ ಚಿತ್ರದಲ್ಲಿ ಅಮೀರ್​ ಖಾನ್ ಜತೆಗೆ ಕರೀನಾ ಕಪೂರ್​, ವಿಜಯ್​ ಸೇತುಪತಿ ಮುಂತಾದವರು ನಟಿಸಿದ್ದು, ಅದ್ವೈತ್​ ಚಂದನ್​ ನಿರ್ದೇಶನ ಮಾಡುತ್ತಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net