54 ವರ್ಷಗಳ ಬಳಿಕ ಬಂಕೆ ಬಿಹಾರಿ ಖಜಾನೆ ಓಪನ್​! ಅಷ್ಟಕ್ಕೂ ಏನೆಲ್ಲ ಸಿಕ್ತು? ಹೀಗಿದೆ ಇತಿಹಾಸ | Banke Bihari

ವಿಜಯವಾಣಿ (85)
Published on

Banke Bihari: ಈ ಹಿಂದೆ ಪುರಿ ಜಗನ್ನಾಥ ದೇವಾಲಯದ ಖಜಾನೆಯನ್ನು ಒಂದಷ್ಟು ವರ್ಷಗಳ ಬಳಿಕ ತೆರೆಯಲಾಗಿತ್ತು. ಈಗ ಅದೇ ರೀತಿ ಮತ್ತೊಂದು ದೇವಾಲಯದ ಖಜಾನೆ ಓಪನ್​ ಮಾಡಲಾಗಿದೆ. ಅಷ್ಟಕ್ಕೂ ಆ ಖಜಾನೆಯಲ್ಲಿ ಏನಿದೆ? ಎಂಬ ಕುತೂಹಲ ಹಲವರಲ್ಲಿ ಮೂಡಿದ್ದು ಸಹಜ. ಜನರು ತೀರ ಆಸಕ್ತಿಯಿಂದ ಎದುರು ನೋಡುತ್ತಿದ್ದ ಆ ದೇವಾಲಯ ಮಥುರಾದ ವೃಂದಾವನದಲ್ಲಿರುವ ಬಂಕೆ ಬಿಹಾರಿ. ಈ ದೇಗುಲದ ಖಜಾನೆಯನ್ನು 54 ವರ್ಷಗಳ ಬಳಿಕ ಇದೀಗ ತೆರೆಯಲಾಗಿದೆ.

19ನೇ ಶತಮಾನದ ಮಥುರಾದ ಬಂಕೆ ಬಿಹಾರಿ ದೇವಾಲಯದ ಖಜಾನೆಯನ್ನು ಸುಪ್ರೀಂ ಕೋರ್ಟ್ ನೇಮಿಸಿದ ಉನ್ನತಾಧಿಕಾರ ಸಮಿತಿಯ ನಿರ್ದೇಶನದ ಮೇರೆಗೆ ಮೊದಲು ಶನಿವಾರ, ನಂತರದಲ್ಲಿ ಎರಡನೇ ಬಾರಿಗೆ ಭಾನುವಾರ (ಅ.19) ತೆರೆಯಲಾಯಿತು. ದೇಗುಲದ ಗರ್ಭಗುಡಿಯ ಪಕ್ಕದಲ್ಲಿರುವ ಖಜಾನೆಯನ್ನು ಅಲ್ಲಿನ ಅರ್ಚಕರು ಮತ್ತು ತಂಡವು ತೆರೆದು ನೋಡಿದ್ದು, ಹಿತ್ತಾಳೆ ನಾಣ್ಯಗಳು ಸೇರಿದಂತೆ ಹಲವು ಪ್ರಾಚೀನ ಕಾಲದ ವಸ್ತುಗಳು ದೊರೆತಿವೆ.

ಖಜಾನೆಯಲ್ಲಿ ಸಿಕ್ಕಿದ್ದೇನು?

"ಗುಲಾಲ್​ನಿಂದ ಲೇಪಿತವಾದ ಬೆಳ್ಳಿಯ ಕೋಲುಗಳು, ಹೊಳೆಯುವ ಚಿನ್ನದ ಹಿಡಿ, ರತ್ನಗಳು ಮತ್ತು ಪಾತ್ರೆಗಳು ಸಿಕ್ಕಿವೆ. ಆದರೆ, ಆಸ್ತಿಗೆ ಸಂಬಂಧಿಸಿದ ಯಾವುದೇ ದಾಖಲೆಗಳು ಲಭಿಸಿಲ್ಲ. ಹಲವು ಹಿತ್ತಾಳೆ ಮತ್ತು ತಾಮ್ರದಿಂದ ಮಾಡಿದ ವಸ್ತುಗಳಾಗಿವೆ. ಪ್ರಸ್ತುತ, ನಿಖರವಾಗಿ ಯಾವುದರ ಬಗ್ಗೆಯೂ ಹೇಳಲು ಸಾದ್ಯವಿಲ್ಲ. ಕಾರಣ, ಅವುಗಳು ಧೂಳಿನಿಂದ ಕೂಡಿದೆ. ಇದರೊಂದಿಗೆ, ಕೆಲವು ಪೆಟ್ಟಿಗೆಗಳು ಕೂಡ ಲಭಿಸಿವೆ. ಆದರೆ, ತೆರೆಯಲು ಸಾಧ್ಯವಾಗ್ತಿಲ್ಲ" ಎಂದು ದೇವಸ್ಥಾನದ ಅರ್ಚಕ ದಿನೇಶ್​ ಗೋಸ್ವಾಮಿ ತಿಳಿಸಿದ್ದಾರೆ.

ದಾಖಲೆ, ಭೂ ಪತ್ರಗಳು ಸಿಕ್ಕಿಲ್ಲ!

2 ಹಿತ್ತಾಳೆ ನಾಣ್ಯ ಸೇರಿದಂತೆ ಒಂದಷ್ಟು ಚಿನ್ನ ಮತ್ತು ಬೆಳ್ಳಿಯ ಕೋಲುಗಳು ಪತ್ತೆಯಾಗಿವೆ. ಆದರೆ, ಈ ಹಿಂದೆ ಸಭೆಯಲ್ಲಿ ಚರ್ಚಿಸಿದಂತೆ, ಮೊಹರು ಮಾಡಿದ ದಾಖಲೆಗಳು, ಬಹುಮಾನಗಳು ಅಥವಾ ಭೂ ಪತ್ರಗಳು ಯಾವುದೂ ಲಭಿಸಿಲ್ಲ ಎಂದು ವರದಿಯಾಗಿದೆ.

ಈ ಹಿಂದೆ 1971ರಲ್ಲಿ….

ಬಂಕೆ ಬಿಹಾರಿ ಗರ್ಭಗುಡಿ ಅಡಿಯಲ್ಲಿರುವ ಖಜಾನೆಯನ್ನು ಕೊನೆಯ ಬಾರಿಗೆ 1971ರಲ್ಲಿ ತೆರೆಯಲಾಗಿತ್ತು. ಆ ಸಮಯದಲ್ಲಿ, ಅಮೂಲ್ಯವಾದ ಆಭರಣಗಳನ್ನು ಸುರಕ್ಷತೆಗಾಗಿ ದಡಕ್ಕೆ ಸ್ಥಳಾಂತರಿಸಲಾಯಿತು ಎಂದು ವರದಿಗಳು ತಿಳಿಸಿವೆ. ಮಾಹಿತಿಗಳ ಪ್ರಕಾರ, ಈ ಖಜಾನೆಯಲ್ಲಿ ಅಪರೂಪದ ಕಲಾಕೃತಿಗಳಿವೆ. ಅವುಗಳಲ್ಲಿ ಪಚ್ಚೆಗಳಿಂದ ಮಾಡಿದ ನವಿಲು ಹಾರ, ಸಹಸ್ರ ಫಣಿ, ಬೆಳ್ಳಿ ಶೇಷನಾಗ ಮತ್ತು ಚಿನ್ನದ ಕಲಶದ ನವರತ್ನಗಳು ಸೇರಿವೆ ಎಂದು ಈ ಹಿಂದೆ ನಡೆಸಿದ್ದ ಸಭೆಯಲ್ಲಿ ಚರ್ಚಿಸಲಾಗಿತ್ತು.

ದೇವಾಲಯ ನಿರ್ವಹಣಾ ಸದಸ್ಯರು, ಸಿವಿಲ್ ನ್ಯಾಯಾಧೀಶರು, ಲೆಕ್ಕಪರಿಶೋಧಕರು ಮತ್ತು ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ಸಮಿತಿಯು ವಿಡಿಯೋಗ್ರಫಿ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಿದೆ. ಇತಿಹಾಸಕಾರರ ಪ್ರಕಾರ, 1864ರಲ್ಲಿ ನಿರ್ಮಿಸಲಾದ ಈ ಖಜಾನೆಯು ವೈಷ್ಣವ ಸಂಪ್ರದಾಯವನ್ನು ಅನುಸರಿಸುತ್ತದೆ. ಖಜಾನೆಯು ಭರತ್‌ಪುರ, ಕರೌಲಿ ಮತ್ತು ಗ್ವಾಲಿಯರ್ ಸಾಮ್ರಾಜ್ಯಗಳಿಂದ ಬಂದ ಉಡುಗೊರೆಗಳನ್ನು ಹಾಗೂ ಮೊಹರು ಮಾಡಿದ ದಾಖಲೆಗಳು, ಬಹುಮಾನಗಳು, ಕೃತಜ್ಞತಾ, ಭೂ ಪತ್ರಗಳನ್ನು ಈ ಪಟ್ಟಿಗೆ ಒಳಗೊಂಡಿದೆ ಎನ್ನಲಾಗಿದೆ.

ಎರಡು ಬಾರಿ ಕಳ್ಳತನ!

ಸ್ಥಳೀಯ ಮೂಲಗಳ ಪ್ರಕಾರ, ಖಜಾನೆಯನ್ನು ಕೊನೆಯದಾಗಿ 1971ರಲ್ಲಿ ಆಗಿನ ದೇವಾಲಯ ಸಮಿತಿ ಅಧ್ಯಕ್ಷ ಪ್ಯಾರೆಲಾಲ್ ಗೋಯಲ್ ಅವರ ಮೇಲ್ವಿಚಾರಣೆಯಲ್ಲಿ ತೆರೆದಿತ್ತು. ಅದಾದ ನಂತರ, ಖಜಾನೆಯಿಂದ ಹೊರತೆಗೆದ ಆಭರಣಗಳನ್ನು ಒಂದು ಪೆಟ್ಟಿಗೆಯಲ್ಲಿ ಇರಿಸಲಾಗಿತ್ತು. ಅದನ್ನು ಮಥುರಾದ ಭೂತೇಶ್ವರದಲ್ಲಿರುವ ಸ್ಟೇಟ್ ಬ್ಯಾಂಕ್‌ನ ಲಾಕರ್‌ನಲ್ಲಿ ಸಂಗ್ರಹಿಸಲಾಗಿತ್ತು. ಈ ನಿಟ್ಟಿನಲ್ಲಿ ಎಲ್ಲಾ ಸಮಿತಿ ಸದಸ್ಯರಿಗೆ ದಾಸ್ತಾನು ಒದಗಿಸಲಾಯಿತು. ಅನೇಕ ಮುನ್ನೆಚ್ಚರಿಕೆಗಳನ್ನು ತೆಗೆದುಕೊಂಡು ಅದನ್ನು ಕಾವಲು ಕಾಯುತ್ತಿದ್ದರೂ, ಬಂಕೆ ಬಿಹಾರಿ ದೇವಾಲಯದ ಖಜಾನೆಯಲ್ಲಿ ಕಳ್ಳತನಗಳು ನಡೆದಿವೆ ಎಂದು ಇತಿಹಾಸ ಹೇಳುತ್ತದೆ.

1926ರಲ್ಲಿ ಒಮ್ಮೆ ಮತ್ತು 1936ರಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ. ಕಳ್ಳತನದ ಘಟನೆಗಳಿಂದ ಗಾಬರಿಗೊಂಡು, ಮುಖ್ಯ ನೆಲಮಾಳಿಗೆಯ ಬಾಗಿಲನ್ನು ಮುಚ್ಚಲಾಯಿತು. ಕಾಣಿಕೆಗಳನ್ನು ನೀಡಲು ಕೇವಲ ಒಂದು ಸಣ್ಣ ಕಿಟಕಿ ಮಾತ್ರ ಉಳಿದಿತ್ತು. 2002ರಲ್ಲಿ ಒಮ್ಮೆ ಮತ್ತು 2004ರಲ್ಲಿ ಮತ್ತೊಮ್ಮೆ ಶೇಖರಣಾ ಕೊಠಡಿಯನ್ನು ತೆರೆಯಲು ಪ್ರಯತ್ನಿಸಲಾಯಿತು. ಆದಾಗ್ಯೂ, ಅಧಿಕೃತ ಅನುಮತಿಯ ಕೊರತೆಯಿಂದಾಗಿ ಆ ಪ್ರಯತ್ನಗಳು ವಿಫಲವಾದವು,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net