ಬರೋಬ್ಬರಿ 44 ವರ್ಷದ ಬಳಿಕ ಮತ್ತೆ ಒಂದಾದ ತಾಯಿ-ಮಗಳು: ಇಬ್ಬರು ಜತೆಯಾಗಿದ್ದೇ ಬಲು ರೋಚಕ! Daughter

Daughter
Published on

Daughter : ತಾನು ಮತ್ತೆಂದೂ ನೋಡುವುದಿಲ್ಲ ಎಂದು ಭಾವಿಸಿದ್ದ ಮಗಳು ತನ್ನ ಕಣ್ಣ ಮುಂದೆ ಕಾಣಿಸಿಕೊಂಡಾಗ ಆ ತಾಯಿಯ ಸಂತೋಷವನ್ನು ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ಅದು ಖಂಡಿತವಾಗಿಯೂ ದೇವರ ಬಹುದೊಡ್ಡ ಉಡುಗೊರೆಯಂತೆಯೇ ಭಾಸವಾಗುತ್ತದೆ. ಇಲ್ಲಿ ಈ ತಾಯಿ ಅನುಭವಿಸಿದ್ದು ಕೂಡ ಅದನ್ನೇ.

1975, ಮೇ ತಿಂಗಳಲ್ಲಿ ದಕ್ಷಿಣ ಕೊರಿಯಾದ ಹಾನ್ ಟೇ ಎಂಬಾಕೆ ತನ್ನ ಆರು ವರ್ಷದ ಮಗಳನ್ನು ಮನೆಯಲ್ಲಿಯೇ ಬಿಟ್ಟು ಮಾರುಕಟ್ಟೆಗೆ ಹೋದಳು. ಕೆಲಸ ಮುಗಿಸಿ ಮನೆಗೆ ಹಿಂದಿರುಗಿದಾಗ, ತನ್ನ ಮಗಳು ಕ್ಯುಂಗ್-ಹಾ ಕಣ್ಮರೆಯಾಗಿದ್ದಳು. ತನ್ನ ಮಗಳಿಗಾಗಿ ಸಾಧ್ಯವಿರುವ ಎಲ್ಲ ರೀತಿಯಲ್ಲಿ ಹುಡುಕಾಡಿದಳು. ಆದರೆ, ಯಾವುದೇ ಪ್ರಯೋಜನವಾಗಲಿಲ್ಲ. ಹುಡುಕಿ, ಹುಡುಕಿ ತುಂಬಾ ದಣಿದಿದ್ದ ಹಾನ್​ ಟೇ, ತನ್ನ ಮಗಳು ಮತ್ತೆ ಸಿಗುತ್ತಾಳೆ ಎಂಬ ಭರವಸೆಯನ್ನು ಕಳೆದುಕೊಂಡರು.

ಆದಾಗ್ಯೂ, 2019ರಲ್ಲಿ ಡಿಎನ್ಎ ಹೊಂದಾಣಿಕೆಯ ಮೂಲಕ ತಮ್ಮ ಮಗಳನ್ನು ಮರಳಿ ಪಡೆಯಲು ಹಾನ್​ ಟೇಗೆ ಸಾಧ್ಯವಾಯಿತು. ಜನ್ಮ ನೀಡಿದ ಪಾಲಕರನ್ನು ಕೊರಿಯನ್ನರನ್ನು ದತ್ತು ಪಡೆದ ವಿದೇಶಿಯರ ಡಿಎನ್ಎ ಜೊತೆ ಸಂಪರ್ಕಿಸುವ ವಿಧಾನವಾಗಿದೆ. ಇದರ ಸಹಾಯದಿಂದ, ಹಾನ್​ ಟೇ ತಮ್ಮ ಮಗಳೊಂದಿಗೆ ಮತ್ತೆ ಒಂದಾಗಲು ಸಾಧ್ಯವಾಯಿತು. ಹಾನ್​ ಟೇ ಅವರ ಡಿಎನ್ಎ, ಕ್ಯಾಲಿಫೋರ್ನಿಯಾದಲ್ಲಿ ನರ್ಸ್ ಆಗಿ ಕೆಲಸ ಮಾಡುವ ಬೆಂಡರ್ ಜೊತೆ ಹೊಂದಾಣಿಕೆಯಾಯಿತು.

ಇದಾದ ಬಳಿಕ ಬೆಂಡರ್ ಮತ್ತು ಹಾನ್ ಟೇ ಗುರುತನ್ನು ದೃಢೀಕರಿಸಲು ಫೋನ್‌ನಲ್ಲಿ ಅನೇಕ ಬಾರಿ ಮಾತನಾಡಿಸಲಾಯಿತು. ಅದಾದ ನಂತರ, ಬೆಂಡರ್ ಅವರು ಸಿಯೋಲ್‌ಗೆ ಹೋಗಿ ತನ್ನ ತಾಯಿ ಹಾನ್ ಟೇ ಅವರನ್ನು ಭೇಟಿಯಾದರು. ಈ ವೇಳೆ ಬೆಂಡರ್​ ತುಂಬಾ ಭಾವುಕರಾಗಿದ್ದರು. ಆದರೆ, ಹಾನ್ ಟೇ ಇದೆಲ್ಲದರಿಂದ ತುಂಬಾ ಆಶ್ಚರ್ಯಚಕಿತರಾದರು. ನಾನು ನೋಡುತ್ತಿರುವುದು ನಿಜವೇ? ಎಂದು ಒಂದು ಕ್ಷಣ ಗೊಂದಲಕ್ಕೆ ಒಳಗಾದರು. ಆದಾಗ್ಯೂ, ಹಾನ್​ ಟೇ, ಬೆಂಡರ್‌ನ ಕೂದಲನ್ನು ಮುಟ್ಟಿ, ಆಕೆಯೇ ತನ್ನ ಮಗಳೆಂದು ದೃಢಪಡಿಸಿದರು ಮತ್ತು ಅಪ್ಪಿಕೊಂಡು ಕಣ್ಣೀರಾಕಿದರು.

30 ವರ್ಷಗಳಿಂದ ಕೇಶ ವಿನ್ಯಾಸಕಿಯಾಗಿ ಕೆಲಸ ಮಾಡುತ್ತಿರುವ ಹಾನ್ ಟೇ, ಆ ಅನುಭವದ ನಂತರ ತನ್ನ ಮಗಳ ಕೂದಲನ್ನು ಮುಟ್ಟಿ ಅದು ತನ್ನ ಮಗು ಎಂದು ಖಚಿತಪಡಿಸಿಕೊಂಡರು. ಹಾನ್ ಟೇ ಅವರ ಮಗಳು ಕ್ಯುಂಗ್, ಒಬ್ಬ ವಿಚಿತ್ರ ಮಹಿಳೆ ತನ್ನ ಬಳಿಗೆ ಬಂದು, ನಿನ್ನ ತಾಯಿಗೆ ಇನ್ನು ನಿನ್ನ ಅಗತ್ಯವಿಲ್ಲ ಎಂದು ಹೇಳಿದಳು. ನನ್ನನ್ನು ರೈಲ್ವೆ ನಿಲ್ದಾಣಕ್ಕೆ ಕರೆದೊಯ್ಯಲಾಯಿತು. ಅಲ್ಲಿ, ಪೊಲೀಸ್ ಅಧಿಕಾರಿಗಳು ನನ್ನನ್ನು ಎತ್ತಿಕೊಂಡು ಒಂದು ಅನಾಥಾಶ್ರಮಕ್ಕೆ ಸೇರಿಸಿದರು ಮತ್ತು ಅಲ್ಲಿಂದ ಅಮೆರಿಕಕ್ಕೆ ಕರೆದೊಯ್ಯಲಾಯಿತು. ಆದರೆ, ವರ್ಜೀನಿಯಾದ ದಂಪತಿ ನನ್ನನ್ನು ದತ್ತು ಪಡೆದಿದ್ದಾರೆ ಎಂದು ಕ್ಯುಂಗ್​ ಹೇಳಿದರು.

ಅಂದಹಾಗೆ, ಹಾನ್ ಟೇ ಅವರ ಇಷ್ಟು ವರ್ಷಗಳ ಮಾನಸಿಕ ಯಾತನೆಗೆ, ದಕ್ಷಿಣ ಕೊರಿಯಾದಲ್ಲಿ ನಡೆಯುತ್ತಿರುವ ವಿದೇಶಿ ದತ್ತು ಕಾರ್ಯಕ್ರಮವೇ ಕಾರಣ ಎಂದು ಹೇಳಲಾಗುತ್ತಿದೆ. ಹೀಗಾಗಿ ಅದನ್ನು ಪ್ರಶ್ನಿಸಿ ಸರ್ಕಾರದ ವಿರುದ್ಧ ಮೊಕದ್ದಮೆ ಹೂಡಿದ್ದಾರೆ. ತನ್ನ ಮಗಳನ್ನು ನೋಡದೆ ತಾನು ಎಷ್ಟು ನರಕಯಾತನೆ ಅನುಭವಿಸಿದೆ ಎಂದು ಹೇಳಲು ಸಾಧ್ಯವಿಲ್ಲ. ತುಂಬಾ ನೋವನ್ನು ಅನುಭವಿಸಿದ್ದೇನೆ ಎಂದು ಹಾನ್​ ಟೇ ಹೇಳಿದರು.

ಇದೇ ಸಂದರ್ಭದಲ್ಲಿ ಈ ವರ್ಷದ ಆರಂಭದಲ್ಲಿ ದಕ್ಷಿಣ ಕೊರಿಯಾದ ಸರ್ಕಾರ, ಕೈಗಾರಿಕಾ ಲಾಭಕ್ಕಾಗಿ ಮಕ್ಕಳನ್ನು ಸಾಮೂಹಿಕವಾಗಿ ರಫ್ತು ಮಾಡುತ್ತಿರುವ ಆರೋಪ ಹೊತ್ತಿಕೊಂಡಿವೆ ಮತ್ತು ತನಿಖೆಗಳು ಅವರು ಮಾನವ ಹಕ್ಕುಗಳ ಉಲ್ಲಂಘನೆಯನ್ನು ಮಾಡುತ್ತಿರುವುದಾಗಿ ಬಹಿರಂಗಪಡಿಸಿವೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net