3 ವರ್ಷ ಆದ ಮೇಲೆ ಉಪ್ಪಿ ಸಿಕ್ಕಿರೋದು... ವೇದಿಕೆ ಮೇಲೆ 'UI' ಮಾಂತ್ರಿಕನಿಗೆ ಪ್ರಿಯಾಂಕಾ ಟಕ್ಕರ್​

ವಿಜಯವಾಣಿ - 2024-12-17T212353.574
Published on

UI Release: ಇದೇ ಡಿ.20ರಂದು ಜಾಗತಿಕವಾಗಿ ಬಹುತೇಕ ಚಿತ್ರಮಂದಿರಗಳಲ್ಲಿ ತೆರೆ ಕಾಣಲು ಸಜ್ಜಾಗಿರುವ ನಟ ಉಪೇಂದ್ರ ನಟಿಸಿ, ನಿರ್ದೇಶಿಸಿರುವ ಪ್ಯಾನ್ ಇಂಡಿಯಾ ‘ಯುಐ’ ಮೇಲೆ ಸದ್ಯ ಅಪಾರ ನಿರೀಕ್ಷೆಗಳು ಮೂಡಿವೆ. ತಮ್ಮ ಪ್ರತಿ ಚಿತ್ರದ ಕಥೆಯಲ್ಲಿಯೂ ವಿಭಿನ್ನತೆ ಹಾಗೂ ವಿಶೇಷತೆ ಜತೆಗೆ ಒಂದು ಆಳವಾದ ಸಂದೇಶ ಅಡಗಿಸಿಡುವ ಉಪೇಂದ್ರ, ಇದೀಗ 2040ರ ವೇಳೆಗೆ ಜಗತ್ತಿನಲ್ಲಿ ಏನೆಲ್ಲಾ ಬದಲಾವಣೆಗಳು ಆಗಿರುತ್ತದೆ, ಯಾವೆಲ್ಲಾ ರೀತಿ ಜನರು ಬದಲಾಗಲಿದ್ದಾರೆ ಎಂಬುದನ್ನು ಈ ಚಿತ್ರದ ಮೂಲಕ ಜನರಿಗೆ ಅರ್ಥೈಸಲು ಮುಂದಾಗಿದ್ದಾರೆ. ಈಗಾಗಲೇ 'ವಾರ್ನರ್' ರಿಲೀಸ್​ನಲ್ಲಿಯೇ ಭರ್ಜರಿ ಸದ್ದು ಮಾಡಿರುವ ಯುಐ, ನೋಡುಗರ ನಿರೀಕ್ಷೆಗಳನ್ನು ದುಪ್ಪಟ್ಟಾಗಿಸಿದೆ. ಇನ್ನು ಇತ್ತೀಚೆಗಷ್ಟೇ ಸಿನಿಮಾದ ಪ್ರೀ-ರಿಲೀಸ್ ಈವೆಂಟ್​ ನಡೆದಿದ್ದು, ಚಿತ್ರತಂಡ ಹಲವಾರು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದೆ.

3 ವರ್ಷಗಳ ನಂತರ

10 ವರ್ಷಗಳ ನಂತರ ಯುಐ ಮೂಲಕ ನಿರ್ದೇಶನಕ್ಕೆ ಮರಳಿರುವ ಡಿಫರೆಂಟ್ ಡೈರೆಕ್ಟರ್​, ಜಗತ್ತಿನಲ್ಲಿ ನಡೆಯುತ್ತಿರುವ ಹಲವು ಬಹುಮುಖ್ಯ ಬೆಳವಣಿಗೆಗಳು ಮತ್ತು ಚರ್ಚೆಯಾಗುತ್ತಿರುವ ವಿಷಯಗಳನ್ನು ಬೆಳ್ಳಿ ಪರದೆಯ ಮೇಲೆ ಜನರ ಮುಂದಿಡಲು ವಿನೂತನ ಪ್ರಯತ್ನ ಮಾಡಿದ್ದಾರೆ. ಇದರ ಯಶಸ್ಸಿಗೆ ಎದುರುನೋಡುತ್ತಿರುವ ಚಿತ್ರತಂಡ, ನಿನ್ನೆಯಷ್ಟೇ ಬೆಂಗಳೂರಿನಲ್ಲಿ ಪ್ರೀ-ರಿಲೀಸ್ ಈವೆಂಟ್​ ಹಮ್ಮಿಕೊಂಡಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಆಗಮಿಸಿದ್ದ ನಟ-ನಟಿಯರ ನಂತರ ಮಾತನಾಡಿದ ಉಪೇಂದ್ರ ಅವರ ಪತ್ನಿ ಪ್ರಿಯಾಂಕಾ, ಉಪ್ಪಿ ಅವರು ಮೂರು ವರ್ಷಗಳ ನಂತರ ನನ್ನನ್ನು ಭೇಟಿಯಾಗ್ತಿದ್ದಾರೆ ಎಂಬ ವಿಷಯವನ್ನು ಬಹಿರಂಗವಾಗಿ ಹೇಳಿದರು.

ನನ್ನ ಜತೆಯೇ ನಿಮ್ಮ ವಿವಾಹ

"ಯುಐ ಉಪೇಂದ್ರ ಅವರ ಸಿನಿ ವೃತ್ತಿಯಲ್ಲಿ ಒಂದೊಳ್ಳೆ ಚಿತ್ರವಾಗಿ ಹೊರಹೊಮ್ಮಲಿದೆ. ಆ ನಂಬಿಕೆ ನನಗಿದೆ. ಒಬ್ಬ ಅಭಿಮಾನಿಯಾಗಿ ನನಗೆ ಈ ಚಿತ್ರದ ಯಶಸ್ಸಿನ ಬಗ್ಗೆ ಭರವಸೆಯಿದೆ. ನಮಸ್ಕಾರ ಉಪೇಂದ್ರ ಅವರೇ ನಾನು ಪ್ರಿಯಾಂಕಾ. ಮೂರು ವರ್ಷ ಆದ ನಂತರ ನನಗೆ ಸಿಗ್ತಿದ್ದೀರಾ. ತುಂಬ ಖುಷಿ ಆಗ್ತೀದೆ. ಮೊನ್ನೆ ನಮ್ಮ ದಾಂಪತ್ಯ ವಾರ್ಷಿಕೋತ್ಸವ ಆಯಿತು. ನಿಮ್ಮನ್ನು ಮದುವೆಯಾದವಳು ನಾನೇ. ನನ್ನ ಜತೆಯೇ ನಿಮ್ಮ ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ದಾರೆ, ಕಾಲೇಜಿಗೆ ಹೋಗ್ತಿದ್ದಾರೆ" ಎಂದು ಎಲ್ಲರ ಮುಂದೆಯೇ ನಗೇ ಚಟಾಕಿ ಸಿಡಿಸಿದರು. ಇದೇ ಶುಕ್ರವಾರ (ಡಿ.20) ತೆರೆ ಕಾಣಲಿರುವ ಯುಐ ಚಿತ್ರವನ್ನು ಕಣ್ತುಂಬಿಕೊಳ್ಳಲು ಸದ್ಯ ಸಿನಿಪ್ರಿಯರು ಕಾತರದಿಂದ ಕಾಯುತ್ತಿದ್ದು, ಮೊದಲ ದಿನವೇ ಬಾಕ್ಸ್ ಆಫೀಸ್​ನಲ್ಲಿ ಎಷ್ಟು ಗಳಿಕೆ ಕಾಣಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಪ್ರಿಯಾಂಕಾ ಹೇಳಿಕೆ ಹಿಂದಿದೆ ಈ ಕಾರಣ

ಸಿನಿಪ್ರೇಕ್ಷಕರಿಗೆ ಸದಾ ತಮ್ಮ ಚಿತ್ರದಲ್ಲಿ ಗೊಂದಲ ಮೂಡಿಸುವ ಉಪ್ಪಿ, ಒಂದು ಬಾರಿ ಸಿನಿಮಾ ನೋಡುವವರು, ಎರಡೆರೆಡು ಬಾರಿ ನೋಡಿ ಅರ್ಥೈಸಿಕೊಳ್ಳಬೇಕು. ಆ ರೀತಿ ಚಿತ್ರವನ್ನು ತಯಾರಿಸಿರುತ್ತಾರೆ. ಇದು ಅವರ ನಿರ್ದೇಶನ ಕೆಲಸಗಳಿಗೆ ಹೆಚ್ಚು ಒತ್ತು ನೀಡುತ್ತದೆ. ಇದಕ್ಕಾಗಿಯೇ ತಮ್ಮ ಸಮಯವನ್ನು ಸಂಪೂರ್ಣವಾಗಿ ಯುಐಗೆ ಮೀಸಲಿಟ್ಟಿದ್ದ ಉಪೇಂದ್ರ, ಕಳೆದ ಮೂರು ವರ್ಷಗಳಿಂದ ಸಿನಿಮಾಗಾಗಿ ಸಖತ್ ಬಿಜಿಯಾಗಿದ್ದರು. ತಮ್ಮ ಕುಟುಂಬಸ್ಥರಿಗೆ ಸಿಗದಷ್ಟು ಯುಐ ಕೆಲಸದಲ್ಲಿ ತೊಡಗಿಸಿಕೊಂಡಿದ್ದರು. ಈ ವಿಷಯವನ್ನು ಪರೋಕ್ಷವಾಗಿ ತಮಾಷೆ ರೂಪದಲ್ಲಿ ಹೇಳಿದ ಪ್ರಿಯಾಂಕಾ ಉಪೇಂದ್ರ, ಸಿನಿಮಾದ ಗೆಲುವಿಗೆ ಶುಭಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net