2015ರ ಬಳಿಕದ ಅಕ್ರಮ ರೆಸಾರ್ಟ್, ಹೋಂಸ್ಟೇ ತೆರವು

ವಿಜಯವಾಣಿ (12)
Published on

ವಸ್ತುನಿಷ್ಠ ಮಾಹಿತಿ ಸಲ್ಲಿಸಲು ಅಧಿಕಾರಿಗಳಿಗೆ ಸಚಿವ ಖಂಡ್ರೆ ಮತ್ತೆ ಸೂಚನೆ

ಬೆಂಗಳೂರು: ರಾಜ್ಯದ ಪಶ್ಚಿಮಘಟ್ಟ ಹಾಗೂ ಇತರ ಘಟ್ಟ ಪ್ರದೇಶದಲ್ಲಿ ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರದಲ್ಲಿ ಸ್ಥಳೀಯರ ಪ್ರತಿರೋಧ ಹಾಗೂ ಇಲಾಖೆ ಅಧಿಕಾರಿಗಳ ಉದಾಸೀನ ಅರಣ್ಯ ಸಚಿವ ಈಶ್ವರ ಖಂಡ್ರೆ ಚಿಂತೆಗೆ ಕಾರಣವಾಗಿದೆ. ಉತ್ತರಕನ್ನಡ ಜಿಲ್ಲೆಯ ಶಿರೂರು ಸೇರಿ ಘಟ್ಟ ಪ್ರದೇಶದಲ್ಲಿ ಭೂಕುಸಿತಗಳು ಹೆಚ್ಚುತ್ತಿವೆ. ಸಾರ್ವಜನಿಕ ಸಂರಕ್ಷಣೆ, ಜೀವವೈವಿಧ್ಯತೆ ತಾಣ, ಹಲವು ನದಿಗಳ ಮೂಲವಾಗಿರುವ ಘಟ್ಟ ಪ್ರದೇಶ ಸಂರಕ್ಷಣೆ ಅತ್ಯಂತ ಮುಖ್ಯವಾಗಿದೆ ಎಂಬ ಕಳಕಳಿ ವ್ಯಕ್ತಪಡಿಸಿದ್ದರು. ಅರಣ್ಯಭೂಮಿ ಒತ್ತುವರಿ ಮಾಡಿಕೊಂಡು ನಡೆಯುತ್ತಿರುವ ರೆಸಾರ್ಟ್, ಹೋಂ ಸ್ಟೇ, ತೋಟ ಮತ್ತು ಬಡಾವಣೆಗಳ ನಿಖರ ಮಾಹಿತಿ ಸಲ್ಲಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಅರಣ್ಯ ಭೂಮಿ 2015ರ ನಂತರ ಒತ್ತುವರಿ, ಅಕ್ರಮ ರೆಸಾರ್ಟ್, ಹೋಂ ಸ್ಟೇ, ತೋಟ, ಬಡಾವಣೆ ಬಗ್ಗೆ ಮಾಹಿತಿ ದೋಷಮುಕ್ತವಾಗಿರಬೇಕು. ವಸ್ತುಸ್ಥಿತಿ ಮರೆಮಾಚಿದ ಮಾಹಿತಿ ನೀಡಿರುವುದು ಕಂಡುಬಂದರೆ ಸಂಬಂಧಿತ ವಲಯ ಅಧಿಕಾರಿಗಳನ್ನೇ ಹೊಣೆ ಮಾಡಲಾಗುವುದು ಎಂದೂ ಎಚ್ಚರಿಸಿದ್ದರು. ಇದೀಗ ಪುನಃ ಎರಡನೇ ಬಾರಿ ಎಚ್ಚರಿಕೆ ಸಂದೇಶ ಕಳಿಸಿದ್ದು ವರದಿ ಕೇಳಿದ್ದಾರೆ.

ಈ ಹಿಂದೆ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಮುಖೇನ ರವಾನೆಯಾದ ಸಚಿವರ ಟಿಪ್ಪಣಿ ಪ್ರಕಾರ 10 ದಿನಗಳೊಳಗೆ ವಸ್ತುನಿಷ್ಠ ಮಾಹಿತಿ ಸಲ್ಲಿಕೆಯಾಗಬೇಕಾಗಿತ್ತು. ಆದರೆ ಈ ಕೆಲಸ ಆಗದ ಕಾರಣ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಭೂದಾಖಲೆ) ಆ.23ರಂದು ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ/ ಅರಣ್ಯ ಸಂರಕ್ಷಣಾಧಿಕಾರಿಗೆ ಮತ್ತೊಮ್ಮೆನಿರ್ದೇಶನ ನೀಡಿದ್ದಾರೆ. ಒತ್ತುವರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ವೈಯಕ್ತಿಕ ಗಮನಹರಿಸಿ ಪರಿಶೀಲಿಸಿ ವಸ್ತುನಿಷ್ಠ ಮಾಹಿತಿ ಸಲ್ಲಿಸಲು ನೀಡಿರುವ ನಿರ್ದೇಶನಗಳನ್ನು ಪುನರುಚ್ಚರಿಸಲಾಗಿದೆ ಎಂದು ಇಲಾಖೆ ಉನ್ನತಾಧಿಕಾರಿ ಬರೆದ ಪತ್ರದಲ್ಲಿ ತಿಳಿಸಿ, ಅತಿ ಜರೂರು ಎಂದೂ ಉಲ್ಲೇಖಿಸಿದ್ದಾರೆ.

ಮುಗಿದ ಗಡುವು: ಮಾಹಿತಿ ಸಲ್ಲಿಸಲು ಸಚಿವರು ಆ.6ರಂದು ಬರೆದ ಪತ್ರದಲ್ಲಿ ವಿಧಿಸಿದ್ದ 10 ದಿನಗಳ ಗಡುವು ಮುಗಿದಿದೆ. ಇಲಾಖೆ ಉನ್ನತಾಧಿಕಾರಿ ಆ.13ರಂದು ಪತ್ರ ಬರೆದು 10 ದಿನಗಳ ಕಳೆದರೂ ಮಾಹಿತಿ ಲಭ್ಯವಾಗಿಲ್ಲ ಎನ್ನುವುದಕ್ಕೆ ಆ.23ರ ಮತ್ತೊಂದು ಪತ್ರವೇ ಪುರಾವೆಯಾಗಿದೆ. ಈ ಹಿನ್ನೆಲೆಯಲ್ಲಿ ಇಲಾಖೆ ವಲಯ, ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಾರ್ಯವೈಖರಿಯು ಸಚಿವ ಖಂಡ್ರೆ ಅವರನ್ನು ಚಿಂತೆಗೀಡು ಮಾಡಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಜನವಸತಿ, ಸಾಗುವಳಿ, ಬಡಾವಣೆಗಳಿಗಿಂತ 2015ರ ಬಳಿಕ ಎಗ್ಗಿಲ್ಲದೆ ಅರಣ್ಯ ಒತ್ತುವರಿ, ಅಕ್ರಮ ಚಟುವಟಿಕೆಗಳು ಪಶ್ಚಿಮಘಟ್ಟಕ್ಕೆ ಆಪತ್ತು ತಂದಿವೆ ಎಂಬ ಕಳವಳಕ್ಕೆ ಖಂಡ್ರೆ ಸ್ಪಂದಿಸಿದ್ದರು. ಅರಣ್ಯ ಮೂಲ ನಿವಾಸಿಗಳು, 2015ರ ಪೂರ್ವ ನೆಲೆಗಳು, ಸಾಗುವಳಿ, ಮೂರು ಎಕರೆಗಿಂತ ಕಡಿಮೆ ಒತ್ತುವರಿಗೆ ವಿನಾಯಿತಿ ನೀಡಿ, ಉಳಿದ ಒತ್ತುವರಿ ತೆರವಿಗೆ ಮುಂದಾಗಿದ್ದಾರೆ.

ಒತ್ತುವರಿ ತೆರವು ನಿಲುವು ಸ್ಪಷ್ಟ

1978ರ ಏಪ್ರಿಲ್ 27ರ ಪೂರ್ವದ ಅರಣ್ಯ ಒತ್ತುವರಿ ಸಕ್ರಮಗೊಳಿಸಲು 1996ರಲ್ಲಿ ಕೇಂದ್ರ ಸರ್ಕಾರಕ್ಕೆ ರಾಜ್ಯ ಪ್ರಸ್ತಾವನೆ ಸಲ್ಲಿಸಿತ್ತು. ನಂತರ ಕೈಬಿಟ್ಟು ಹೋಗಿರುವ ಅರ್ಹ ಪ್ರಕರಣಗಳೆಂದು ಗುರುತಿಸಿ, ಕಾಯ್ದೆ ರೀತ್ಯ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಅರಣ್ಯ ಒತ್ತುವರಿ ಮತ್ತು ಒತ್ತುವರಿದಾರರ ಪಟ್ಟಾ ಜಮೀನು ಸೇರಿ ಮೂರು ಎಕರೆಗಿಂತ ಕಡಿಮೆಯಿರುವ ಒತ್ತುವರಿದಾರರನ್ನು ಒಕ್ಕಲೆಬ್ಬಿಸಬಾರದು ಎಂದು ಹಿಂದಿನ ಸರ್ಕಾರ ಆದೇಶಿಸಿತ್ತು. ಅಲ್ಲದೆ, ಬಿಬಿಎಂಪಿ, ಬಿಎಂಆರ್​ಡಿ, ಮಹಾನಗರ ಪಾಲಿಕೆ, ಅಭಿವೃದ್ಧಿ ಪ್ರಾಧಿಕಾರಗಳು, ನಗರ- ಪುರಸಭೆ ವ್ಯಾಪ್ತಿಯಲ್ಲಿ ಆಗಿರುವ ಅರಣ್ಯ ಒತ್ತುವರಿದಾರರಿಗೆ ಅನ್ವಯಿಸುವುದಿಲ್ಲ ಎಂದು ತಿಳಿಸಿತ್ತು.

2015ರ ಆದೇಶದ ಪ್ರಕಾರ ಎಷ್ಟಿದೆ?

2015, ಸೆಪ್ಟೆಂಬರ್ 21ರಂದು ಹೊರಡಿಸಿದ ಆದೇಶದಂತೆ ರಾಜ್ಯಾದ್ಯಂತ ಒಟ್ಟು ಅರಣ್ಯ ಒತ್ತುವರಿ ಪ್ರಕರಣಗಳ ಸಂಖ್ಯೆ 1,10,626 ಹಾಗೂ ಒಟ್ಟು ವಿಸ್ತೀರ್ಣ 2,04,442.16 ಎಕರೆಗಳಾಗಿವೆ. ಈ ಪೈಕಿ 30 ಎಕರೆಗೂ ಹೆಚ್ಚಿನ ವಿಸ್ತೀರ್ಣ- 133 ಪ್ರಕರಣಗಳು, 5344.33 ಎಕರೆ, 10 ರಿಂದ 30 ಎಕರೆವರೆಗಿನ ವಿಸ್ತೀರ್ಣ- 718 ಪ್ರಕರಣಗಳು, 12898.25 ಎಕರೆ, ಮೂರರಿಂದ 10 ಎಕರೆವರೆಗಿನ ವಿಸ್ತೀರ್ಣ- 23423 ಪ್ರಕರಣಗಳು, 71108.13 ಎಕರೆ, ಮೂರು ಎಕರೆಗಿಂತ ಕಡಿಮೆ ವಿಸ್ತೀರ್ಣ- 86352 ಪ್ರಕರಣಗಳು, 115089.25 ಎಕರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net