ಸ್ನೇಹಿತನಿಂದಲೇ ಆಫ್ರಿಕಾ ಮಹಿಳೆ ಹತ್ಯೆ

murder
Arrest of murder suspects
Published on

ಬೆಂಗಳೂರು: ಚಿಕ್ಕಜಾಲ ಬಳಿಯ ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಪತ್ತೆಯಾಗಿದ್ದ ಆಫ್ರಿಕಾ ಮೂಲದ ಮಹಿಳೆ ಶವದ ಗುರುತು ಪತ್ತೆ ಆಗಿದ್ದು, ಹತ್ಯೆ ಮಾಡಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಆಫ್ರಿಕಾದ ಲೋವಿತ್ (31) ಮೃತ ಮಹಿಳೆ. ಈಕೆಯ ಹತ್ಯೆ ಮಾಡಿದ ಆರೋಪಿ ಸ್ಯಾಮ್‌ಸಾಂಗ್ ಓಾಂಗೋ ಎಂಬಾತನ್ನು ಚಿಕ್ಕಜಾಲ ಪೊಲೀಸರು ಬಂಧಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲಸ ನಿಮಿತ್ತ ಭಾರತಕ್ಕೆ ಬಂದಿದ್ದ ಲೋವಿತ್, ಎಲೆಕ್ಟ್ರಾನಿಕ್ ಸಿಟಿಯಲ್ಲಿ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದಳು. ಆರೋಪಿ ವ್ಯಾಪಾರದ ಸಲುವಾಗಿ ಬಂದು ಬಿಟಿಎಂ ಲೇಔಟ್‌ನಲ್ಲಿ ಬಾಡಿಗೆ ಮನೆಯಲ್ಲಿ ನೆಲೆಸಿದ್ದ. ಮೋಟರ್ ಕಂಪನಿಯ ಬಿಡಿ ಭಾಗಗಳನ್ನು ನೈಜೀರಿಯಾಗೆ ರ್ತು ಮಾಡುತ್ತಿದ್ದ. ಇದರ ನಡುವೆ ಇಬ್ಬರಿಗೂ ಪರಿಚಯವಾಗಿದ್ದು, ಸ್ನೇಹಿತರಾಗಿದ್ದರು. ಕೆಲ ತಿಂಗಳ ಹಿಂದೆ ಲೋವಿತ್ ಬಳಿ ಆರೊಪಿ ಸ್ಯಾಮ್‌ಸಾಂಗ್ ಕೈಸಾಲ ಪಡೆದುಕೊಂಡಿದ್ದ.

ಆದರೆ, ವಾಪಸ್ ಹಣ ಕೊಟ್ಟಿರಲಿಲ್ಲ. ತನ್ನ ಹಣವನ್ನು ವಾಪಸ್ ಕೊಡುವಂತೆ ಲೋವತ್ ಪದೇ ಪದೆ ಪೀಡಿಸುತ್ತಿದ್ದಳು. ಇದೇ ಕಾರಣಕ್ಕೆ ಆರೋಪಿ ಆಕೆಯ ಕತ್ತು ಹಿಸುಕಿ ಮತ್ತು ಕಾರಿನ ಜಾಕ್ ರಾಡ್‌ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ. ಕೃತ್ಯ ಎಸಗಿದ ಮೇಲೆ ಶವವನ್ನು ಕಾರಿನಲ್ಲಿ ತಂದು ತರಹುಣಸೆ ಗ್ರಾಮದ ನಿರ್ಜನ ಪ್ರದೇಶದಲ್ಲಿ ಎಸೆದು ಹೋಗಿದ್ದ.

ಸಾರ್ವಜನಿಕರು ನೀಡಿದ ಮಾಹಿತಿ ಮೇರೆಗೆ ಅಪರಿಚಿತ ಮಹಿಳೆ ಶವ ಪ್ರಕರಣದ ತನಿಖೆ ಕೈಗೊಂಡ ಚಿಕ್ಕಜಾಲ ಪೊಲೀಸರು, ಮಹಿಳೆಯ ಶವದ ಗುರುತು ಪತ್ತೆಹಚ್ಚಿದ್ದರು. ಅಲ್ಲದೆ, ಆಕೆಯ ಮೊಬೈಲ್ ನಂಬರ್ ಸಿಡಿಆರ್ ಕಲೆ ಹಾಕಲಾಯಿತು. ಶವ ಎಸೆದು ಹೋಗಿದ್ದ ಕಾರಿನ ಗುರುತು ಪತ್ತೆ ಹಚ್ಚುವ ಸಲುವಾಗಿ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದಾಗ ಕಾರಿನ ನೋಂದಣಿ ಲಭ್ಯವಾಯಿತು. ಈ ಎಲ್ಲ ತಾಂತ್ರಿಕ ಸಾಕ್ಷಾೃಧಾರಗಳನ್ನು ಇಟ್ಟುಕೊಂಡು ಆರೋಪಿಯನ್ನು ಪತ್ತೆ ಹಚ್ಚಲಾಗಿದೆ. ಲೋವಿತ್, ಬಳಿ ಸಾಲ ತೆಗೆದುಕೊಂಡಿದ್ದೆ.

ವಾಪಸ್ ಕೊಡಲು ಸಾಧ್ಯವಾಗಿರಲಿಲ್ಲ. ಪದೇ ಪದೆ ಸಾಲ ವಾಪಸ್ ಕೊಡುವಂತೆ ಪೀಡಿಸುತ್ತಿದ್ದಳು ಮತ್ತು ಅಸಭ್ಯ ಪದಗಳಿಂದ ನಿಂದಿಸುತ್ತಿದ್ದಳು. ಇದೇ ಕಾರಣಕ್ಕೆ ಕೊಲೆ ಮಾಡಿದ್ದಾಗಿ ಆರೋಪಿ ಹೇಳಿಕೆ ನೀಡಿದ್ದಾನೆ. ಆದರೆ, ಕೊಲೆ ಎಲ್ಲಿ ಮಾಡಿದ್ದಾನೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net