

Pakistani soldiers; ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ನಡುವೆ ಗಡಿ ಉದ್ವಿಗ್ನತೆ ತೀವ್ರಗೊಂಡಿದ್ದು, ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಇಂದು (ಅ.12) ಗಡಿಯಲ್ಲಿ ರಾತ್ರಿಯಿಡೀ ನಡೆಸಿದ ಕಾರ್ಯಾಚರಣೆಯಲ್ಲಿ 58 ಪಾಕಿಸ್ತಾನಿ ಸೈನಿಕರನ್ನು ಕೊಂದು 25 ಸೇನಾ ಠಾಣೆಗಳನ್ನು ತಮ್ಮ ವಶಕ್ಕೆ ಪಡೆದುಕೊಂಡಿವೆ ಎಂದು ಹೇಳಿದೆ.
ಈ ಬಗ್ಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅಫ್ಘಾನಿಸ್ತಾನದ ಆಡಳಿತಾರೂಢ ತಾಲಿಬಾನ್ ಆಡಳಿತದ ವಕ್ತಾರ ಜಬಿಹುಲ್ಲಾ ಮುಜಾಹಿದ್, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ಗಡಿಯಲ್ಲಿ ರಾತ್ರಿಯಿಡೀ ನಡೆದ ಘರ್ಷಣೆಗಳಲ್ಲಿ 58 ಪಾಕಿಸ್ತಾನಿ ಸೈನಿಕರು ಸಾವನ್ನಪ್ಪಿದ್ದಾರೆ ಮತ್ತು 30 ಮಂದಿ ಗಾಯಗೊಂಡಿದ್ದಾರೆ ಎಂದು ಘೋಷಿಸಿದ್ದಾರೆ. ಪಾಕಿಸ್ತಾನವು ಅಫ್ಘಾನಿಸ್ತಾನದ ಭೂಪ್ರದೇಶ ಮತ್ತು ವಾಯುಪ್ರದೇಶವನ್ನು ಪದೇ ಪದೇ ಉಲ್ಲಂಘಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ ಪ್ರತೀಕಾರ ಎಂದು ಅಫ್ಘಾನ್ ರಕ್ಷಣಾ ಸಚಿವಾಲಯ ಹೇಳಿದೆ. ಎದುರಾಳಿ ಸೇನೆ ಮತ್ತೊಮ್ಮೆ ಅಫ್ಘಾನಿಸ್ತಾನದ ಪ್ರಾದೇಶಿಕ ಸಮಗ್ರತೆಯನ್ನು ಉಲ್ಲಂಘಿಸಿದರೆ, ನಮ್ಮ ಸಶಸ್ತ್ರ ಪಡೆಗಳು ರಾಷ್ಟ್ರದ ಗಡಿಗಳನ್ನು ರಕ್ಷಿಸಲು ಸಂಪೂರ್ಣವಾಗಿ ಸಿದ್ಧವಾಗಿವೆ ಮತ್ತು ಬಲವಾದ ಪ್ರತಿಕ್ರಿಯೆಯನ್ನು ನೀಡುತ್ತವೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.
(ಏಜೆನ್ಸೀಸ್)
ಅಂದಹಾಗೆ, ಕಾಬೂಲ್ ಬಳಿ ಪಾಕಿಸ್ತಾನವು ವಾಯುದಾಳಿ ನಡೆಸಿದ ಕೆಲವೇ ದಿನಗಳಲ್ಲಿ ಈ ಭೀಕರ ಗಡಿ ಸಂಘರ್ಷ ನಡೆದಿದೆ. ನಂಗರ್‌ಹಾರ್ ಮತ್ತು ಕುನಾರ್‌ನಲ್ಲಿರುವ ಪಾಕಿಸ್ತಾನಿ ಮಿಲಿಟರಿ ಸ್ಥಾನಗಳನ್ನು ಗುರಿಯಾಗಿಸಿಕೊಂಡು ಪ್ರತೀಕಾರದ ಕಾರ್ಯಾಚರಣೆಗಳನ್ನು ಪ್ರಾರಂಭಿಸಲಾಗಿದೆ ಎಂದು ಅಫ್ಘಾನಿಸ್ತಾನದ 201 ಖಾಲಿದ್ ಬಿನ್ ವಾಲಿದ್ ಆರ್ಮಿ ಕಾರ್ಪ್ಸ್ ಹೇಳಿದೆ. ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವಿನ ಸಂಘರ್ಷ ಬಹಳ ದಿನಗಳಿಂದ ನಡೆಯುತ್ತಿದೆ. ಎರಡೂ ದೇಶಗಳ ನಡುವಿನ ಉದ್ವಿಗ್ನತೆ ಹೊಸದೇನಲ್ಲ. ಪಾಕಿಸ್ತಾನಿ ತಾಲಿಬಾನ್ ಎಂದೂ ಕರೆಯಲ್ಪಡುವ ತೆಹ್ರೀಕ್-ಇ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಗೆ ಅಫ್ಘಾನಿಸ್ತಾನ ಆಶ್ರಯ ನೀಡುತ್ತಿದೆ ಎಂದು ಪಾಕಿಸ್ತಾನ ಆಗಾಗ್ಗೆ ಆರೋಪಿಸುತ್ತಿದೆ. ಇದು ಅಫ್ಘಾನ್ ತಾಲಿಬಾನ್‌ನಂತೆಯೇ ಅದೇ ಸಿದ್ಧಾಂತವನ್ನು ಅನುಸರಿಸುವ ಉಗ್ರಗಾಮಿ ಗುಂಪಾಗಿದೆ.