

ಕಾಬೂಲ್ ಏರ್ಪೋರ್ಟ್ ನಿಂದ ಅಮೆರಿಕ ಸೇನಾ ವಿಮಾನದಲ್ಲಿ ಏರ್ ಲಿಫ್ಟ್ ಮಾಡುವಾಗ ವಿಮಾನದಲ್ಲಿಯೇ ಆಫ್ಘನ್ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ.
ಜರ್ಮನಿಯ ರಾಮ್‌ಸ್ಟೈನ್ ಏರ್ ಬೇಸ್ ನಲ್ಲಿ ಶನಿವಾರ ಅಮೆರಿಕ ಮಿಲಿಟರಿ ವಿಮಾನದ ಮೂಲಕ ಸ್ಥಳಾಂತರಿಸುವ ವೇಳೆ ಆಫ್ಘಾನಿಸ್ಥಾನದ ಗರ್ಭಿಣಿ ಮಹಿಳೆ ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಅಮೆರಿಕ ಏರ್ ಫೋರ್ಸ್ ಮಾಹಿತಿ ನೀಡಿದೆ.
ತಾಲಿಬಾನಿಗಳ ತೆಕ್ಕೆಗೆ ಸಿಲುಕಿರುವ ಪ್ರದೇಶದಿಂದ ಸಿ-17 ವಿಮಾನದಲ್ಲಿ ಸ್ಥಳಾಂತರಿಸಲಾದ ಗರ್ಭಿಣಿಗೆ ಹೆರಿಗೆಯಾಗಿದೆ. ವಿಮಾನ ಜರ್ಮನಿಯ ವಾಯುನೆಲೆಗೆ ತೆರಳುತ್ತಿತ್ತು. ಎತ್ತರದಲ್ಲಿ ಹಾರುವಾಗ ಕಡಿಮೆ ವಾಯು ಒತ್ತಡವಾಗಿ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವಿಮಾನದ ಪೈಲಟ್ ವಾಯು ಒತ್ತಡವನ್ನು ಹೆಚ್ಚಿಸಲು ಮತ್ತು ಮಹಿಳೆಯ ಜೀವ ಉಳಿಸಲು ವಿಮಾನವನ್ನು ಕೆಳಮಟ್ಟದಲ್ಲಿ ಹಾರಿಸಿ ನೆರವಾಗಿದ್ದಾರೆ. ತಾಯಿ ಮತ್ತು ಮಗುವನ್ನು ರಾಮ್‌ಸ್ಟೈನ್ ಏರ್ ಬೇಸ್ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.