ವೈಮಾನಿಕ ಪ್ರದರ್ಶನ, ಸಂಚಾರ ಮಾರ್ಪಾಡು

aero
Published on

ಬೆಂಗಳೂರು: ಯಲಹಂಕ ವಾಯುಪಡೆ ಕೇಂದ್ರದಲ್ಲಿ ಫೆ.10 ರಿಂದ 14ರ ವರೆಗೆ ನಡೆಯುವ ಏರೋ ಇಂಡಿಯಾ 2025ರ ವೈಮಾನಿಕ ಪ್ರದರ್ಶನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಸುತ್ತಮುತ್ತಲ ರಸ್ತೆಗಳು ಮತ್ತು ಆ ಪ್ರದೇಶದಲ್ಲಿ ಬೆಳಗ್ಗೆ 5ರಿಂದ ರಾತ್ರಿ 10 ಗಂಟೆ ವರೆಗೆ ತಾತ್ಕಾಲಿಕ ಸಂಚಾರ ವ್ಯವಸ್ಥೆಯನ್ನು ಮಾರ್ಪಾಡು ಮಾಡಿ ಸಂಚಾರ ಪೊಲೀಸರು ಆದೇಶಿಸಿದ್ದಾರೆ.

ಫೆ.10ರ ಬೆಳಗ್ಗೆ ಕಾರ್ಯಕ್ರಮ ಉದ್ಘಾಟನೆ ನಡೆಯಲಿದ್ದು, ಕಾರ್ಯಕ್ರಮಕ್ಕೆ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಹಲವು ಗಣ್ಯರು ಮತ್ತು ಸಹಸ್ರಾರು ಸಾರ್ವಜನಿಕರು ಬರಲಿದ್ದಾರೆ.

ಯಲಹಂಕ ವಾಯುಸೇನಾ ನೆಲೆಯು ಬೆಂಗಳೂರು-ಬಳ್ಳಾರಿ ರಾಷ್ಟ್ರೀಯ ಹೆದ್ದಾರಿ -44ಗೆ ಹೊಂದಿಕೊಂಡಿದೆ. ಈ ರಸ್ತೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಚರಿಸುವ ವಾಹನಗಳು, ತುರ್ತು ಸೇವಾ ವಾಹನಗಳು ಹೆಚ್ಚಿನ ಸಂಖ್ಯೆಯಲ್ಲಿ ಓಡಾಡುತ್ತವೆ. ಆದ್ದರಿಂದ ನಿಟ್ಟೆ ಮೀನಾಕ್ಷಿ ಕಾಲೇಜು ರಸ್ತೆಯನ್ನು ಪೂರ್ವ ದಿಕ್ಕಿನಿಂದ ಪಶ್ಚಿಮ ದಿಕ್ಕಿನ ಕಡೆಗೆ ಮತ್ತು ಬಾಗಲೂರು ಮುಖ್ಯರಸ್ತೆಯಲ್ಲಿ ಪಶ್ಚಿಮದಿಂದ ಪೂರ್ವದಿಕ್ಕಿನ ಕಡೆಗೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗಿದೆ.

ಏರೋ ಇಂಡಿಯಾಗೆ ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವವರಿಗೆ ಜಿಕೆವಿಕೆ ಕ್ಯಾಂಪಸ್‌ನಲ್ಲಿ ಉಚಿತ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಇಲ್ಲಿಂದ ಅಡ್ವಾ ಪಾರ್ಕಿಂಗ್, ಡೊಮೆಸ್ಟಿಕ್ ಪಾರ್ಕಿಂಗ್ ಸ್ಥಳಕ್ಕೆ ತೆರಳು ಮತ್ತು ಅಲ್ಲಿಂದ ವಾಪಸ್ ಪಾರ್ಕಿಂಗ್ ಸ್ಥಳಕ್ಕೆ ಹೋಗಲು ಬಿಎಂಟಿಸಿಯಿಂದ ಉಚಿತ ಎಸಿ ಬಸ್ ಸೇವೆ ಕಲ್ಪಿಸಲಾಗಿದೆ. ಪಾವತಿ ಪಾರ್ಕಿಂಗ್ ವಾಹನಗಳು ಅಡ್ವಾ ಪಾರ್ಕಿಂಗ್ ಮತ್ತು ಡೊಮೆಸ್ಟಿಕ್ ಪಾರ್ಕಿಂಗ್ ಮುಖಾಂತರ ಪ್ರವೇಶ ಮಾಡಿ ವಾಹನ ನಿಲ್ಲಿಸಬಹುದು ಎಂದು ಸಂಚಾರ ಪೊಲೀಸರು ಸೂಚನೆ ನೀಡಿದ್ದಾರೆ.

ಸೂಚನೆ:

ವೈಮಾನಿಕ ಪ್ರದರ್ಶನ ವೀಕ್ಷಣೆಗೆ ಬರುವವರು ತಮಗೆ ನೀಡಲಾಗಿರುವ ಟಿಕೆಟ್/ಪಾಸ್‌ನ ಕ್ಯೂಆರ್ ಕೋಡ್‌ಅನ್ನು ಸ್ಕ್ಯಾನ್ ಮಾಡಿ ಆಯಾ ಗೇಟ್‌ನಿಂದ ಪ್ರವೇಶ ಮಾಡಬಹುದು. ಅನಗತ್ಯವಾಗಿ ವಿಳಂಬಕ್ಕೆ ಅವಕಾಶ ಇರುವುದಿಲ್ಲ ಎಂದು ಸೂಚನೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net