80 ಪದವಿ ಕಾಲೇಜುಗಳಿಗೆ ಎಇಡಿಪಿ ಕೋರ್ಸ್ ವಿಸ್ತರಣೆ

syber
Published on

ಎನ್.ಎಲ್. ಶಿವಮಾದು

ಬೆಂಗಳೂರು: ಬಿ.ಕಾಂ ವಿದ್ಯಾರ್ಥಿಗಳಿಗೆ ಉದ್ಯೋಗವಕಾಶಗಳನ್ನು ಕಲ್ಪಿಸಬೇಕು ಎಂಬ ಉದ್ದೇಶದಿಂದ ಕಳೆದ ವರ್ಷ 30 ಸರ್ಕಾರಿ ಪದವಿ ಕಾಲೇಜುಗಳಲ್ಲಿ ಆರಂಭಿಸಿರುವ ಕೌಶಲಾಧಾತಿರ ಪದವಿ ಕೋರ್ಸ್‌ಗಳನ್ನು (ಎಇಡಿಪಿ) ಈ ವರ್ಷ 80 ಕಾಲೇಜುಗಳಿಗೆ ವಿಸ್ತರಿಸಲಾಗುತ್ತಿದೆ.

ಹಾಗೆಯೇ ಕಳೆದ ವರ್ಷ 25 ಸಾವಿರಕ್ಕಿದ್ದ ಮಿತಿಯನ್ನು 50 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಕೇವಲ 6ನೇ ಸೆಮಿಸ್ಟರ್‌ಗೆ ಮಾತ್ರ ಸೀಮಿತವಾಗಿದ್ದ ಎಇಡಿಪಿ ಕೋರ್ಸ್‌ಗಳನ್ನು ಈ ವರ್ಷ 5 ಮತ್ತು 6ನೇ ಸೆಮಿಸ್ಟರ್‌ನಲ್ಲಿ ಬೋಧನೆ ಮಾಡಲಾಗುತ್ತಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗವಕಾಶ ಮತ್ತು ಅನುಭವ ನೀಡುವುದು ಸರ್ಕಾರದ ಗುರಿಯಾಗಿದೆ.

ಥಿಯರಿ, ಪ್ರಾಕ್ಟಿಕಲ್ ಎರಡೂ ಲಭ್ಯ:

ಕೈಗಾರಿಕಾ ಬೇಡಿಕೆಗಳಿಗೆ ಅನುಗುಣವಾಗಿ ಹೊಸ ಕೋರ್ಸ್‌ಗಳನ್ನು ಪರಿಚಯಿಸುವ ಹಾಗೂ ಕಲಿಕಾ ಅವಧಿಯಲ್ಲಿಯೇ ಅಪ್ರೆಂಟಿಶಿಪ್ ಅನ್ನು ಸೇರ್ಪಡೆಗೊಳಿಸಲು ಯೋಜನೆಯನ್ನು ವಿಸ್ತರಿಸಲಾಗುತ್ತಿದೆ. ಕೈಗಾರಿಕೆಗಳಿಗೆ ಅವಶ್ಯವಿರುವ ಪಠ್ಯಕ್ರಮವನ್ನು 5ನೇ ಸಮಿಸ್ಟರ್‌ನಲ್ಲಿ ಬೋಧನೆ ಮಾಡಲಾಗುತ್ತದೆ. ಅದೇ ವಿಷಯವನ್ನು 6ನೇ ಸೆಮಿಸ್ಟರ್‌ನಲ್ಲಿ ವಿದ್ಯಾರ್ಥಿಗಳು ಕೈಗಾರಿಕೆಗಳಲ್ಲಿ ಪ್ರಾಯೋಗಿಕವಾಗಿ ಕಲಿಯಲಿದ್ದಾರೆ. ಬಳಿಕ ಆಯ್ಕೆಯಾಗುವವರು ಸಂಬಂಧಪಟ್ಟ ಸಂಸ್ಥೆಯಲ್ಲಿಯೇ ಉದ್ಯೋಗವಕಾಶವನ್ನು ಸೃಷ್ಟಿಸಿಕೊಳ್ಳಬಹುದಾಗಿದೆ.

ಮಾಸಿಕ 8ರಿಂದ 10 ಸಾವಿರ ರೂ. ಸ್ಕೈಂಡ್:

30ರಿಮದ 80 ಕಾಲೇಜುಗಳಿಗೆ ಕಾರ್ಯಕ್ರಮವನ್ನು ವಿಸ್ತರಿಸಿರುವುದರಿಂದ ಸಹಜವಾಗಿ 50 ಸಾವಿರ ವಿದ್ಯಾರ್ಥಿಗಳಿಗೆ ಯೋಜನೆ ಲಭ್ಯವಾಗಬಹುದು. 6ನೇ ಸೆಮಿಸ್ಟರ್‌ನಲ್ಲಿ ಕೈಗಾರಿಕೆಳಲ್ಲಿ ಅಪ್ರೆಂಟಿಸ್‌ಶಿಪ್‌ಗೆ ತೆರಳುವ ವಿದ್ಯಾರ್ಥಿಗಳು ಮಾಸಿಕ 8ರಿಂದ 10 ಸಾವಿರ ರೂ,. ಸ್ಕೈಂಡ್ ಪಡೆಯಲಿದ್ದಾರೆ ಎನ್ನುತ್ತಾರೆ ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ ಎನ್. ಮಂಜುಶ್ರೀ.

ಯಾವೆಲ್ಲ ಕೋರ್ಸ್‌ಗಳಲ್ಲಿ ಲಭ್ಯ?

ಬಿಬಿಎ ಇ- ಕಾಮರ್ಸ್, ಬಿ.ಕಾಂ., ಲಾಜಿಸ್ಟಿಕ್, ರೀಟೇಲ್, ಬಿಬಿಎ ಏವಿಯೇಷನ್ ಮತ್ತು ಏರ್ ಕಾರ್ಗೋ ಸೇರಿ ಹೊಸ ತಂತ್ರಜ್ಞಾನದ ಕೋರ್ಸ್‌ಗಳನ್ನು ಬೋಧಿಸಲಾಗುತ್ತಿದೆ. ಒಂದು ವೇಳೆ ಕೈಗಾರಿಕೆಗಳ ಒಡಂಬಡಿಕೆಗೆ ಅನುಗುಣವಾಗಿ ಮತ್ತಷ್ಟು ಕೋರ್ಸ್‌ಗಳನ್ನು ಬೋಧನೆ ಮಾಡಲು ಕಾಲೇಜುಗಳಲ್ಲಿ ಮೂಲಸೌಕರ್ಯವಿದ್ದಲ್ಲಿ ಅನುಮತಿ ನೀಡಲು ಸರ್ಕಾರ ಸೂಚನೆ ನೀಡಿದೆ.

ಕಟ್ಟಡ, ಪೀಠೋಪಕರಣ ಹಾಗೂ ಕಂಪ್ಯೂಟರ್ ಸೇರಿ ಮೂಲಸೌಕರ್ಯ ಕೊರತೆ ಇರುವ ಕಾಲೇಜುಗಳಲ್ಲಿ ಅಗತ್ಯಕ್ಕೆ ಅನುಗುಣವಾಗಿ ಎರಡು ಪಾಳಿಯಲ್ಲಿ ತರಗತಿಗಳನ್ನು ನಡೆಸಲು ಪ್ರಾಂಶುಪಾಲರು ಸಿದ್ಧರಿರುವ ಬಗ್ಗೆ ಖಚಿತಪಡಿಸಿಕೊಳ್ಳಲು ಉನ್ನತ ಶಿಕ್ಷಣ ಇಲಾಖೆಯು ನಿರ್ದೇಶನ ನೀಡಿದೆ.

ಕಲಾ ವಿಭಾಗಕ್ಕೂ 6 ತಿಂಗಳ ಕೌಶಲ ಕೋರ್ಸ್

ದ್ವಿತೀಯ ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳಲ್ಲಿ ವಿಜ್ಞಾನ, ವಾಣಿಜ್ಯ ವಿಭಾಗದಲ್ಲಿ ಅವಕಾಶಗಳು ದೊರೆಯದ ವಿದ್ಯಾರ್ಥಿಗಳು ಕಲಾ ವಿಭಾಗದಲ್ಲಿ ಕಲಿಯುತ್ತಾರೆ. ಕಲಾ ವಿಭಾಗಲದಲ್ಲಿ ಬಿಎ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಔದ್ಯೋಗಿಕ ಅವಕಾಶಗಳು ಕಡಿಮೆ. ಈ ಸಮಸ್ಯೆಯನ್ನು ನಿವಾರಿಸಬೇಕು ಎಂಬ ಕಾರಣದಿಂದ ಬಿಎ ವಿದ್ಯಾರ್ಥಿಗಳಿಗೂ 6 ತಿಂಗಳ ಕೌಶಲ ಕೋರ್ಸ್‌ಗಳ ತರಬೇತಿ ನೀಡಲಾಗುತ್ತಿದೆ.

ಕಂಪ್ಯೂಟರ್ ಅಪ್ಲಿಕೇಷನ್, ಕೋಡಿಂಗ್, ಕೃತಕ ಬುದ್ಧಿಮತ್ತೆ, ಮಷಿನ್ ಲರ್ನಿಂಗ್, ಸೈಬರ್ ಭದ್ರತೆಯಂತಹ 6 ತಿಂಗಳ ಅಲ್ಪಾವಧಿ ಕೋರ್ಸ್‌ಗಳ ತರಬೇತಿ ನೀಡಲು ಸಹ ಮುಂದಾಗಿದೆ. ಇದರಿಂದ ಪದವಿ ಜತೆಗೆ ಕೌಶಲ ಹೊಂದಿದ್ದರೆ, ಉದ್ಯೋಗಕ್ಕೆ ದಾರಿ ಸುಲಭವಾಗಲಿದೆ.

ಸರ್ಕಾರಿ ಕಾಲೇಜುಗಳಲ್ಲಿ ಪದವಿ ಹೆಚ್ಚಳಕ್ಕೆ ಸೂಚನೆ

ಪ್ರವೇಶಾತಿ ಹೆಚ್ಚಳ ಮಾಡಲು ಪದವಿ ಕಾಲೇಜುಗಳು ತಮ್ಮ ಸಮೀಪದ ಪಿಯು ಕಾಲೇಜುಗಳಿಗೆ ಹೋಗಿ ಕಾಲೇಜುಗಳಲ್ಲಿರುವ ಕೋರ್ಸ್ ಮತ್ತು ಸೌಲಭ್ಯಗಳ ಕುರಿತು ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಮೂಲಕ ದಾಖಲಾತಿ ಹೆಚ್ಚಳ ಮಾಡುವ ಕೆಲಸ ಮಾಡಬೇಕು. ತಮ್ಮಲ್ಲಿರುವ ಕೋರ್ಸ್‌ಗಳಿಗೆ ಔದ್ಯೋಗಿಕವಾಗಿ ಮತ್ತು ಅಡ್ವಾನ್ಸ್‌ಡ್ ತಂತ್ರಜ್ಞಾನದ ಬಗ್ಗೆ ತಿಳಿಸಿಕೊಟ್ಟರೆ ಸಹಜವಾಗಿ ದಾಖಲಾತಿ ಹೆಚ್ಚಳವಾಗಲಿದೆ ಎಂದು ಇಲಾಖೆಯು ಸೂಚಿಸಿದೆ.

ಎಇಡಿಪಿ ಕೋರ್ಸ್‌ಗಳ ಕಾಲೇಜುಗಳನ್ನು ಈ ಬಾರಿ 30ರಿಂದ 80 ಕಾಲೇಜುಗಳಿಗೆ ವಿಸ್ತರಿಸಲಾಗಿದೆ. ಪ್ರಮುಖವಾಗಿ ಕಲಾ ಮತ್ತು ವಾಣಿಜ್ಯ ವಿದ್ಯಾರ್ಥಿಗಳಿಗೆ ಉದ್ಯೊಗ ಕಲ್ಪಿಸುವುದು ಸರ್ಕಾರದ ಉದ್ದೇಶವಾಗಿದೆ. - ಎನ್. ಮಂಜುಶ್ರೀ, ಕಾಲೇಜು ಶಿಕ್ಷಣ ಇಲಾಖೆ ಆಯುಕ್ತೆ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net