

ಆಯನೂರು: ಸಹಕಾರ ಸಂಘಗಳು ಅಭಿವೃದ್ಧಿ ಹೊಂದಲು ಜನರ ಸಹಕಾರ ಅಗತ್ಯ. ಸಂಘವು ಆರ್ಥಿಕ ವರ್ಷದಲ್ಲಿ 1.45 ಲಕ್ಷ ರೂ. ನಿವ್ವಳ ಲಾಭಗಳಿಸಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎ.ವಿ.ರೇಣುಕಪ್ಪ ಹೇಳಿದರು.
ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯಲ್ಲಿ ಮಾತನಾಡಿ, ಸಂಘದ ಷೇರುದಾರರು ಹೆಚ್ಚು ಠೇವಣಿ ಇಡುವುದರಿಂದ ಸಂಘದ ಅಭಿವೃದ್ಧಿ ಸಾಧ್ಯ. ಮರಣ ಹೊಂದಿರುವ ಷೇರುದಾರರಿದ್ದರೆ ಖಾತೆ ಬದಲಾವಣೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಾಗರಾಜ್ ಮಾತನಾಡಿ, ಸಂಘದಲ್ಲಿ 1,596 ಸದಸ್ಯರಿದ್ದು, ಸಂಘದಲ್ಲಿ 77.36 ಲಕ್ಷ ರೂ. ಷೇರು ಬಂಡವಾಳವಿದೆ. ಸಂಘದಲ್ಲಿ ಸಾಲ ಪಡೆದ 731 ಜನ ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲಗಾರರಿದ್ದು, 950 ಜನ ಯಶಸ್ವಿನಿ ಆರೋಗ್ಯ ವಿಮೆ ಮಾಡಿಸಿಕೊಂಡಿದ್ದಾರೆ. ಸಂಘದ ಎಲ್ಲ ವ್ಯವಹಾರಗಳು ಗಣಕೀಕರಣ ವ್ಯವಸ್ಥೆಯಲ್ಲಿವೆ. ಸಂಘದಲ್ಲಿ ಗೊಬ್ಬರ ಮಾರಾಟ ಮಾಡಲು ಅನುಮತಿ ದೊರಕಿದೆ ಎಂದರು.
ರೈತ ಜಯರಾಂ ನಾಯ್ಕ ಮಾತನಾಡಿ, ಸರ್ಕಾರದ ಅನೇಕ ಸೌಲಭ್ಯಗಳು ಸಹಕಾರ ಸಂಘದ ಮೂಲಕ ರೈತರಿಗೆ ಸಿಗಬೇಕು. ಗೊಬ್ಬರ, ಬಿತ್ತನೆಬೀಜಗಳು, ಜೋಳ, ಗ್ಯಾಸ್, ಸಿಮೆಂಟ್, ಗುದ್ದಲಿ, ಹಾರೆ ಮತ್ತಿತರ ಸೌಲಭ್ಯ ನೀಡಬೇಕು ಎಂದು ತಿಳಿಸಿದರು. ಸಂಘದ ಉಪಾಧ್ಯಕ್ಷ ದಿನಕರಪ್ಪ, ನಿರ್ದೇಶಕರಾದ ಎಚ್.ಮಂಜಪ್ಪ, ಎ.ಟಿ.ಕೃಷ್ಣಮೂರ್ತಿ, ಎನ್.ಡಿ.ಯಲ್ಲಪ್ಪ, ಪಿ.ಮಂಜಪ್ಪ, ಸಿ.ಎಂ.ಅಶೋಕ್, ದಾದಾಪೀರ್, ಎನ್.ಪ್ರಭಾವತಿ, ವಿ.ಎಂ.ಆದರ್ಶ, ಕ್ಷೇತ್ರಾಧಿಕಾರಿ ಕೆ.ಎಚ್.ಚಾಯಪ್ಪ ಇದ್ದರು.