

ಜಾನುವಾರುಗಳಿಗೆ ಅನುಗ್ರಹ ತಪ್ಪದಿರಲಿ
ಬೆಂಗಳೂರು: ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಜಾರಿಯಲ್ಲಿದ್ದ ಅನುಗ್ರಹ ಯೋಜನೆಗೆ ಅನುದಾನ ನಿಲ್ಲಿಸದಂತೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.
ಕುರಿ, ಮೇಕೆ, ಹಸು, ಎಮ್ಮೆ, ಎತ್ತು ಮುಂತಾದ ಜಾನುವಾರುಗಳು ಆಕಸ್ಮಿಕವಾಗಿ ಸತ್ತರೆ ಗರಿಷ್ಠ ಹತ್ತು ಸಾವಿರ ರೂ.ವರೆಗೆ ಪರಿಹಾರ ನೀಡುವ ಅನುಗ್ರಹ ಯೋಜನೆಯನ್ನು ನನ್ನ ಅಧಿಕಾರಾವಧಿಯಲ್ಲಿ ಜಾರಿಗೆ ತಂದಿದ್ದೆವು, ಈ ಯೋಜನೆ ನಿಲ್ಲಿಸಿ ಪಶುಪಾಲಕರ ವಿರೋಧಿ ನಿಲುವನ್ನು ತೆಗೆದುಕೊಳ್ಳಬಾರದು ಎಂದು ಸಲಹೆ ನೀಡಿದ್ದಾರೆ.
ಇಂದು ಸಭೆ: ನಿತ್ಯದ ದುಡಿಮೆ ನಂಬಿ ಬದುಕುತ್ತಿರುವ ವೃತ್ತಿ ಆಧಾರಿತ ಕೆಲಸದ ಮೇಲೆ ಅವಲಂಬಿತರ ಸಮಸ್ಯೆಗಳ ಬಗ್ಗೆ ಸಿದ್ದರಾಮಯ್ಯ ಅವರು ಮಂಗಳವಾರ ಸಭೆ ನಡೆಸಲಿದ್ದಾರೆ. ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಂಗಳವಾರ ಬೆಳಗ್ಗೆ 11 ಗಂಟೆಗೆ ಸಭೆ ನಡೆಸಲಿದ್ದು, ಸವಿತಾ ಸಮಾಜ, ಮಡಿವಾಳ, ನೇಕಾರ, ಕುಂಬಾರ, ಕಮ್ಮಾರ, ಚಮ್ಮಾರ, ಬೀದಿಬದಿ ವ್ಯಾಪಾರಿಗಳು, ಆಟೋ ಮತ್ತು ಟ್ಯಾಕ್ಸಿ ಚಾಲಕರ ಜತೆ ಚರ್ಚೆ ನಡೆಸಲಿದ್ದಾರೆ.
ಬಾಡಿಗೆ, ಶುಲ್ಕ ವಿನಾಯಿತಿಗೆ ಆಗ್ರಹ
ಕರೊನಾ ಶಾಕ್ನಿಂದ ಜನಸಾಮಾನ್ಯರು ಸುಧಾರಿಸಿಕೊಳ್ಳಲು ಅನುವಾಗುವಂತೆ ಭಾಗಶಃ ಬಾಡಿಗೆ ವಿನಾಯಿತಿ, ಖಾಸಗಿ ಸ್ಕೂಲ್-ಕಾಲೇಜುಗಳ ಶುಲ್ಕ, ವಿದ್ಯುತ್ ಬಿಲ್, ಪೆಟ್ರೋಲ್-ಡೀಸೆಲ್ ದರ ಕಡಿತ ಘೊಷಣೆ ಮಾಡುವಂತೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ರೈತರ ಕೈಬಿಡದೆ ನೆರವಾಗುವಂತೆ ಮನವಿ
ಲಾಕ್ ಡೌನ್ನಿಂದ ಹಣ್ಣು, ತರಕಾರಿ, ಹೂ ಬೆಳೆದು ಹಾನಿಗೀಡಾಗಿರುವ ರೈತರಿಗೆ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರು ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಪತ್ರ ಬರೆದಿದ್ದಾರೆ.
ಬಜೆಟ್ ಯೋಜನೆಗಳನ್ನು ಕೈಬಿಟ್ಟರೂ ಸರಿಯೇ ಅನ್ನದಾತನ ಕೈಬಿಡಬೇಡಿ ಎಂದು ಸಲಹೆ ನೀಡಿದ್ದಾರೆ. ನಿತ್ಯ 7.50 ಲಕ್ಷ ಹಾಲು ಖರೀದಿಸಿ ಬಡವರಿಗೆ ಹಂಚುವ ಮೂಲಕ ಹಾಲು ಉತ್ಪಾದಕರ ನೆರವಿಗೆ ಬಂದಿದ್ದೀರಿ.
ಅಂತಹ ದಿಟ್ಟ ತೀರ್ಮಾನ ಕೈಗೊಂಡಿದ್ದಕ್ಕೆ ನಿಮಗೆ ಹಾಗೂ ಸಂಪುಟಕ್ಕೆ ಅಭಿನಂದನೆಗಳು. ಅದೇ ರೀತಿ ಹಣ್ಣು, ತರಕಾರಿ, ಹೂ ಬೆಳೆಗಾರರ ಹಿತ ಕಾಪಾಡಿ ಎಂದು ಮನವಿ ಮಾಡಿದ್ದಾರೆ.