ಮದ್ಯ ವ್ಯಸನದಿಂದ ಆರೋಗ್ಯ ದುಷ್ಪರಿಣಾಮ

RemasterDirector_22abe5b5f
RemasterDirector_22abe5b5f
Published on

ಪಿರಿಯಾಪಟ್ಟಣ: ಮದ್ಯ ವ್ಯಸನಕ್ಕೆ ದಾಸನಾದರೆ ಆರೋಗ್ಯ ಮತ್ತು ಆರ್ಥಿಕ ದುಷ್ಪರಿಣಾಮ ಅನುಭವಿಸಬೇಕಾಗುತ್ತದೆ ಎಂದು ಮಾಜಿ ಶಾಸಕ ಎಚ್.ಸಿ. ಬಸವರಾಜು ಅಭಿಪ್ರಾಯಪಟ್ಟರು.


ಪಟ್ಟಣದ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸುತ್ತೂರಿನ ಜಗದ್ಗುರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠ ಮತ್ತು ಮೈಸೂರಿನ ಜೆಎಸ್‌ಎಸ್ ಮಹಾವಿದ್ಯಾಪೀಠ ಸಹಯೋಗದಲ್ಲಿ ಸೋಮವಾರದಿಂದ ಆರಂಭಗೊಂಡ 10 ದಿನಗಳ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿ, ಕುಡಿತದ ಚಟದಿಂದ ಸಾಂಸಾರಿಕ ನೆಮ್ಮದಿ ಹಾಳಾಗಲಿದ್ದು, ಆರ್ಥಿಕ ಮತ್ತು ಆರೋಗ್ಯ ಸಮಸ್ಯೆಗಳು ಸಹ ಎದುರಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು.
ಭಾರತೀಯರಾಗಿ ನಾವು ಉತ್ತಮ ಸಂಸ್ಕೃತಿ ಬೆಳೆಸಿಕೊಂಡಾಗ ಮಾತ್ರ ಜೀವನದಲ್ಲಿ ಏನಾದರೂ ಸಾಧಿಸಬಹುದು. ಕುಡಿತದ ಚಟವನ್ನು ತೊರೆದು ಸಾಮಾಜಿಕ ಚಟುವಟಿಕೆಗಳತ್ತ ತಮ್ಮನ್ನು ತೊಡಗಿಸಿಕೊಂಡಲ್ಲಿ ಸಮಾಜದಲ್ಲಿ ಗೌರವವೂ ಇರಲಿದೆ ಎಂದರು.


ಕೆಪಿಸಿಸಿ ಸದಸ್ಯ ನಿತಿನ್ ವೆಂಕಟೇಶ್ ಮಾತನಾಡಿ, ಕುಡಿತದ ಚಟದಿಂದ ಮುಕ್ತರಾದಲ್ಲಿ ಆರ್ಥಿಕ ಮತ್ತು ಸಾಮಾಜಿಕವಾಗಿ ಅಭಿವೃದ್ಧಿ ಹೊಂದಬಹುದು ಎಂದರು.


ಬೆಟ್ಟದಪುರದ ಸಲೀಲಾಖ್ಯ ಮಠದ ಶ್ರೀ ಚೆನ್ನಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಮದ್ದು ಕೊಟ್ಟು, ಔಷಧ ನೀಡಿ ಕುಡಿತ ಬಿಡಿಸುವುದು ಈ ಶಿಬಿರದ ಉದ್ದೇಶವಲ್ಲ. ಆಧ್ಯಾತ್ಮಿಕ ಮತ್ತು ಸಾಮಾಜಿಕ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಮದ್ಯವ್ಯಸನದಿಂದ ಮುಕ್ತರಾಗಬೇಕು ಎಂಬುದು ಶಿಬಿರದ ಉದ್ದೇಶ ಎಂದರು.


ಕಾರ್ಯಕ್ರಮದಲ್ಲಿ ಶಿಬಿರದ ಸಂಚಾಲಕರಾದ ಡಾ.ಎಂ.ಪಿ.ಸೋಮಶೇಖರ್ ಶಿಬಿರದ ಬಗ್ಗೆ ಮಾಹಿತಿ ನೀಡಿದರು. ಚುಂಚನಹಳ್ಳಿ ಮತ್ತು ನವಿಲೂರು ಮಠದ ಶ್ರೀ ಚನ್ನಬಸವ ಸ್ವಾಮೀಜಿ, ಚಂದ್ರಮೌಳೇಶ್ವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಸಂಯೋಜನಾಧಿಕಾರಿ ಎಸ್.ಬಸವರಾಜು, ಮುಖಂಡರಾದ ಎಚ್.ಆರ್.ಹರೀಶ್, ಎಚ್.ಕೆ.ಚಿನ್ನಸ್ವಾಮಿ, ಟಿ.ಮಲ್ಲಿಕಾರ್ಜುನ, ತೊಂಟಾರಾದ್ಯ, ಲೋಹಿತ್, ಮಂಜು, ಶಿವರಾಜ್, ಕೃಷ್ಣೇಗೌಡ, ಸತೀಶ್, ರಂಗಸ್ವಾಮಿ, ಲಕ್ಷ್ಮಣ್ ಪಟೇಲ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net