ದೇಶೀಯ ನಿರ್ವಿುತ ಪಿನಾಕಾ ಕ್ಷಿಪಣಿ ಯಶಸ್ವಿ

Pinac
Published on

ಭುವನೇಶ್ವರ: ದೇಶೀಯ ನಿರ್ವಿುತ ಪಿನಾಕಾ ಕ್ಷಿಪಣಿಯ ಸುಧಾರಿತ ಅವತರಣಿಕೆಯನ್ನು ಒಡಿಶಾದ ಚಂಡಿಪುರದಲ್ಲಿ ಬುಧವಾರ ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ.

ಏಕಕಾಲದಲ್ಲಿ ಆರು ಕ್ಷಿಪಣಿಗಳನ್ನು ಉಡಾವಣೆ ಮಾಡಲಾಯಿತು. ಸುಧಾರಿತ ಪಿನಾಕಾ ಕ್ಷಿಪಣಿಗಳನ್ನು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ತಯಾರಿಸಿದೆ. ಪ್ರಸ್ತುತ ಬಳಕೆಯಲ್ಲಿರುವ ಪಿನಾಕಾ ಎಂಕೆ-1 ಕ್ಷಿಪಣಿಗಳ ಬದಲಾಗಿ ಈ ಕ್ಷಿಪಣಿಗಳನ್ನು ಬಳಸಲಾಗುವುದು. ಪಿನಾಕಾ ಎಂಬಿಆಎರ್​ಎಸ್ ಮುಕ್ತ ಹಾರಾಟ ಫಿರಂಗಿ ಕ್ಷಿಪಣಿಯನ್ನು ಹೊಂದಿದ್ದು, ವಿವಿಧ ಸಿಡಿತಲೆ ಮತ್ತು ಫ್ಯೂಸ್​ಗಳೊಂದಿಗೆ 38 ಕಿ.ಮೀವರೆಗೆ ದಾಳಿ ನಡೆಸಬಹುದು. ಮಲ್ಟಿ ಟ್ಯೂಬ್ ಲಾಂಚರ್, ರಿಪ್ಲೆನಿಶ್​ವೆುಂಟ್ ಕಮ್ ಲೋಡರ್ ವಾಹನ, ಕಮಾಂಡ್ ಪೋಸ್ಟ್ ವಾಹನ ಇದರಲ್ಲಿದೆ.

ತಲಾ ಆರು ಕ್ಷಿಪಣಿಗಳಿರುವ ಎರಡು ಪಾಡ್​ಗಳಿವೆ. 48 ಸೆಕೆಂಡುಗಳಲ್ಲಿ ಆರು ಕ್ಷಿಪಣಿಗಳನ್ನು ಉಡಾವಣೆ ಮಾಡಬಹುದು. ಈವರೆಗೆ ಬಳಕೆಯಲ್ಲಿದ್ದ ಕ್ಷಿಪಣಿ ಕಡಿಮೆ ದೂರದವರೆಗೆ ದಾಳಿ ನಡೆಸಬಲ್ಲದ್ದಾಗಿತ್ತು. ಈ ಹಿನ್ನೆಲೆಯಲ್ಲಿ ಹೊಸ ಕ್ಷಿಪಣಿ ಅಭಿವೃದ್ಧಿಪಡಿಸಲಾಗಿದೆ. ಪುಣೆಯ ಡಿಆರ್​ಡಿಒ, ಶಸ್ತ್ರಾಸ್ತ್ರ ಸಂಶೋಧನೆ ಮತ್ತು ಅಭಿವೃದ್ಧಿ ಸ್ಥಾಪನೆ, ಎಆರ್​ಡಿಐ, ಹೈ ಎನರ್ಜಿ ಮೆಟೀರಿಯಲ್ಸ್ ರಿಸರ್ಚ್ ಲ್ಯಾಬೋರೇಟರಿ ಮತ್ತು ಎಚ್​ಇಎಂಆರ್​ಎಲ್ ಸಹಾಯದೊಂದಿಗೆ ಈ ಕ್ಷಿಪಣಿಗಳನ್ನು ಅಭಿವೃದ್ಧಿಪಡಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net