

ಆಗ ಸಾಮಾನ್ಯವಾಗಿ ಮನಸ್ಸು ಅದರಲ್ಲೇ ಇರಲು ಪ್ರಯತ್ನಿಸುತ್ತದೆ. ಇದನ್ನೇ ಕೃಷ್ಣ ಅವುಗಳೊಡನೆ ಸಂಗವಾಗುತ್ತದೆ ಎಂದಿದ್ದಾನೆ. ಆದರೆ ಇದು ಸತ್ಯವಲ್ಲ. ಹೊರಜಗತ್ತಿನ ವಸ್ತುಗಳಿಂದ ಸುಖದ ಜೊತೆಗೆ ದುಃಖವೂ ಆಗುತ್ತದೆ. ವಿಷಯಗಳಿಂದ ನಮಗೆ ಸುಖ ಸಿಕ್ಕದಿದ್ದಾಗ ನಾವು ಆ ವಿಷಯಗಳಲ್ಲಿ ಮೋಹಿತರಾಗುತ್ತೇವೆ. ಮೋಹ ಆವರಿಸಿದಾಗ ನಮ್ಮ ಬುದ್ಧಿ ವಿಚಲಿತಗೊಳ್ಳುತ್ತದೆ. ಬುದ್ಧಿ ಮಾತು ಕೇಳದಿದ್ದಾಗ ನಮ್ಮ ಅಂತ್ಯ ನಮಗೆ ಹತ್ತಿರವಾಗುತ್ತದೆ. ಕೊನೆಗೆ ನಮ್ಮ ವಿನಾಶವಾಗುತ್ತದೆ. ಇದೇ ನಮಗೆ ಮಾನಿತ್ವದಿಂದ ಉಂಟಾಗುವ ಹಾನಿ. ಒಮ್ಮೆ ನಾವು ಶ್ರೇಷ್ಠ ಎಂಬ ಭಾವನೆ ನಮ್ಮಲ್ಲಿ ಅಂಕುರಿಸಿದ ಮೇಲೆ ನಮ್ಮ ಮನಸ್ಸು ಸದಾ ಎಲ್ಲರೂ ನನ್ನನ್ನು ಗೌರವಿಸಬೇಕು ಎಂಬ ಆಸೆಯನ್ನು ಹೊಂದಿರುತ್ತದೆ. ಗೌರವಿಸದೇ ಸುಮ್ಮನಿದ್ದರೂ ದುಃಖವುಂಟಾಗುತ್ತದೆ. ಡಿ.ವಿ.ಜಿ.ಯವರು ಈ ವಿಷಯದಲ್ಲಿ ಹೀಗೆಂದಿದ್ದಾರೆ.
ಮೊದಲು ನಾನೆನಗೆ ಮೊದಲೂಟ ಮೊದಲಿನ ಪೀಠ/ಮೊದಲು ನಾನೆನ್ನವರು ಬಳಿಕ ಉಳಿದವರು |
ಇದು ಲೋಕದೆಲ್ಲ ಕಲಹಗಳ ದುಃಖದ ಮೂಲ.ಅದುಮಿಕೊ ಅಹಂತೆಯನು - ಮರುಳ ಮುನಿಯ || 274 || - ಇದು ನಮ್ಮ ಪರಿಸ್ಥಿತಿ. ಇದನ್ನು ತಿದ್ದಲು ಶಾಸ್ತ್ರದಲ್ಲಿ ಹಲವಾರು ಸಾಧನೆಗಳನ್ನು ನಾವು ಕಾಣುತ್ತೇವೆ.